ನಾನು ಹೊರಗಿನವಳಲ್ಲ, ಜಿಲ್ಲೆಯ ದತ್ತು ಪುತ್ರಿ: ಸಂಯುಕ್ತ ಪಾಟೀಲ

KannadaprabhaNewsNetwork | Published : Apr 3, 2024 1:30 AM

ಸಾರಾಂಶ

ನಾನು ಬಾಗಲಕೋಟೆ ಜಿಲ್ಲೆಯವಳಲ್ಲ, ವಿಜಯಪುರ ಜಿಲ್ಲೆಯವಳು. ಇ‍ವಳಿಗೇಕೆ ಟಿಕೆಟ್ ಕೊಡಬೇಕು ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತ ಪಾಟೀಲ ಸ್ವಪಕ್ಷಿಯರಿಗೆ ತಿರುಗೇಟು ನೀಡಿದರು.

ಕನ್ನಡ ಪ್ರಭ ವಾರ್ತೆ ಮುಧೋಳ

ನಾನು ಬಾಗಲಕೋಟೆ ಜಿಲ್ಲೆಯವಳಲ್ಲ, ವಿಜಯಪುರ ಜಿಲ್ಲೆಯವಳು. ಇ‍ವಳಿಗೇಕೆ ಟಿಕೆಟ್ ಕೊಡಬೇಕು ಎಂದು ಹೇಳುತ್ತಿರುವುದು ಸರಿಯಲ್ಲ. ಬೀಳಗಿ ಶಾಸಕ ಜೆ.ಟಿ.ಪಾಟೀಲರು ನನ್ನನ್ನು ದತ್ತು ಪುತ್ರಿ ಎಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ನನ್ನನ್ನು ತಂಗಿ ಎಂದಿದ್ದಾರೆ. ಹಾಗಾದರೆ ನಾನು ಈ ಜಿಲ್ಲೆಯವಳಲ್ಲವೇ? ಎಂದು ಕೈವಂಚಿತ ವೀಣಾ ಕಾಶಪ್ಪನವರ್ ಅವರ ಹೆಸರೇಳದೆ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.

ಮಂಗಳವಾರ ಸ್ಥಳೀಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಚುನಾವಣೆ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ತಂದೆ ಶಿವಾನಂದ ಪಾಟೀಲ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವೀಣಾ ಕಾಶಪ್ಪನವರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಆ ಸಂದರ್ಭದಲ್ಲಿ ಅವರ ಗೆಲುವಿಗೆ ಸಾಕಷ್ಟು ಪ್ರಯತ್ನಸಿದ್ದಾರೆಂಬುದು ತಮಗೆಲ್ಲ ಗೊತ್ತಿರುವ ವಿಷಯ. ಹೈಕಮಾಂಡ್‌ ನನಗೆ ಟಿಕೆಟ್ ನೀಡಿದಾಗ ಬೇರೆ ಜಿಲ್ಲೆಯವಳೆಂದು ಏಕೆ ಕರೆಯುತ್ತೀರಿ? ನಾನೂ ಸಹ ಕಾಂಗ್ರೆಸ್ ಮಹಿಳಾ ಘಟಕದ ವಿವಿಧ ಹುದ್ದೆಗಳಲ್ಲಿದ್ದು, ಕೆಲಸ ಮಾಡಿದ್ದೇನೆ. ತಾವು ಕಾಂಗ್ರೆಸ್ ಪಕ್ಷದವರಾಗಿದ್ದುಕೊಂಡು ಏಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ದಿ.ಇಂದಿರಾಗಾಂಧಿ, ದಿ.ರಾಜೀವ್‌ ಗಾಂಧಿ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಆದರೆ, ಬಿಜೆಪಿ ಯಾವುದೇ ನಾಯಕರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಉದಾಹರಣೆಗಳಿಲ್ಲ. ದೇಶ ಭಕ್ತರೆಂದು ಸುಳ್ಳು ಹೇಳಿ ಮತದಾರರಿಗೆ ಮೋಸದಿಂದ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ನಾಯಕರಿಗೆ ಗಾಂಧಿ ಮನೆತನದವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂಥ ಕೆಲಸ ಮಾಡುತ್ತಿರುವ ಬಿಜೆಪಿ ನಾಯಕರು ನ್ಯಾಯಾಂಗ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿ ನ್ಯಾಯಾಂಗ ವ್ಯವಸ್ಥೆಯನ್ನೇ ಹದಗೆಡಿಸಿದ್ದಾರೆ. ಮಾಧ್ಯಮ ಕ್ಷೇತ್ರ ಹತ್ತಿಕ್ಕುವ ಕೆಲಸದಲ್ಲಿ ತೊಡಗಿದ್ದಾರೆಂದು ಆರೋಪಿಸಿದ ಅವರು, ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿರುವ ಬಿಜೆಪಿಯವರಿಗೆ ಮತದಾರರು ತಕ್ಕಪಾಠ ಕಲಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಸಂಯುಕ್ತ ಪಾಟೀಲರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸೋಣ. ಅದಕ್ಕಾಗಿ ತಾವು ಹಗಲಿರುಳು ಶ್ರಮಿಸಬೇಕು ಎಂದರು.

ಈ ವೇಳೆ ಕಾಂಗ್ರೆಸ್ ಮುಖಂಡ ಧರೆಪ್ಪ ಸಾಂಗ್ಲಿಕರ, ಅಶೋಕ ಕಿವಡಿ, ದಾನೇಶ ತಡಸಲೂರ, ಎಸ್.ಪಿ. ದಾನಪ್ಪಗೋಳ, ವಿನಯ ತಿಮ್ಮಾಪೂರ, ರಾಘು ಮೋಕಾಶಿ, ಭೀಮಶಿ ಸರಕಾರಕುರಿ, ಚಿನ್ನು ಅಂಬಿ, ಮುದಕಣ್ಣ ಅಂಬಿಗೇರ, ಸದೂಗೌಡ ಪಾಟೀಲ, ಉದಯಸಿಂಗ್‌ ಫಡತಾರೆ, ಶಶಿರ ಮಲಘಾಣ ಸೇರಿದಂತೆ ಇತರರು ಇದ್ದರು.ಜಿಲ್ಲೆಯ ಅಭಿವೃದ್ಧಿಗಾಗಿ ನಾನು ಸಂಸದೆಯಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ. ಅದಕ್ಕಾಗಿ ನನ್ನನ್ನು ಆಯ್ಕೆ ಮಾಡಿ, ನಾನು ಐದು ವರ್ಷ ತಮ್ಮ ಜೀತದಾಳಿನಂತೆ ಕೆಲಸ ಮಾಡುತ್ತೇನೆ. ನಾನು ಗಜಕೇಸರಿ ಯೋಗದಲ್ಲಿ ಹುಟ್ಟಿದ್ದೇನೆ. ಹೀಗಾಗಿ ಭವಷ್ಯದಲ್ಲಿ ಸಾಕಷ್ಟು ಅವಕಾಶಗಳು ಸಿಗಲಿವೆ. ಪ್ರಧಾನಿ ಆಗುವ ಎಲ್ಲ ಲಕ್ಷಣಗಳು ನನ್ನಲ್ಲಿವೆ. ಹೊಸ ಮುಖಕ್ಕೆ ಅವಕಾಶಕೊಡಿ.

- ಸಂಯುಕ್ತ ಪಾಟೀಲ, ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ

Share this article