ಸುಮ್ನೆ ಆರೋಪಿಸಲು ನಾ ಖಾಲಿ ಇಲ್ಲ

KannadaprabhaNewsNetwork |  
Published : Jul 01, 2024, 01:48 AM ISTUpdated : Jul 01, 2024, 01:49 AM IST
ಕಕಕಕಕ | Kannada Prabha

ಸಾರಾಂಶ

ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೆಯದು: ಸಚಿವ ಸತೀಶ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ಸುಮ್ಮನೆ ಆರೋಪ‌ ಮಾಡಲು ನಾನು ಖಾಲಿ ಇಲ್ಲ. ಯಾರು‌ ಕೆಲಸ‌ ಮಾಡಿಲ್ಲ‌ ಅವರ ವಿರುದ್ಧ ಆರೋಪ‌ ಮಾಡಿದ್ದೇನೆ ಎಂದು ಲೋಕೋಪಯೋಗ ಸಚಿವ ಸತೀಶ ಜಾರಕಿಹೊಳಿ ಅವರು ಮತ್ತೊಮ್ಮೆ ಸ್ವಪಕ್ಷೀಯ ಶಾಸಕ ಮಹೇಶ ತಮ್ಮಣ್ಣವರ್‌ ವಿರುದ್ಧ ಹರಿಹಾಯ್ದರು.ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ ಭಾನುವಾರ ನೂತನ ಸಂಸದರ ಅಭಿನಂದನಾ‌ ಸಮಾವೇಶದಲ್ಲಿ ಮಾತನಾಡಿದ ಅವರು, ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೆಯದು ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದ ಅವರು, ರಾಜಕೀಯದಲ್ಲಿ ಹೊಂದಾಣಿಕೆ‌ ಇರಬೇಕು ಸರಿಪಡಿಸಿಕೊಳ್ಳಬೇಕು ಎಂದೂ ಸೂಚಿಸಿದರು.

ನಮ್ಮನ್ನು ಸೋಲಿಸಲು ಎಲ್ಲಿಂದ‌ ಡೈರೆಕ್ಷನ್‌ ಬಂದಿದೆ ಎಂದು ನನಗೆ ಗೊತ್ತಿತ್ತು. ಲೋಕಸಭಾ ಚುನಾವಣೆ ವೇಳೆ ನಮ್ಮ ವಿರುದ್ಧ ಸ್ವಪಕ್ಷದವರೇ ಕೆಲಸ ಮಾಡಿದ್ದರು. ನಾನು ಮಾಜಿ ಶಾಸಕ ಶ್ಯಾಮ್ ಘಾಟಗೆ ಮಾತು ಕೇಳುತ್ತೇನೆ ಎಂದು ಆರೋಪ ಮಾಡುತ್ತಾರೆ. ಘಾಟಗೆ ಅಷ್ಟೇ ಅಲ್ಲ ಮನೆಯಲ್ಲಿ ನಾನು ನನ್ನ ಹೆಂಡತಿ, ಮಕ್ಕಳ ಮಾತೂ ಕೇಳಲ್ಲ ಎಂದು ತಮ್ಮಣ್ಣವರ ವಿರುದ್ಧ ವಾಗ್ದಾಳಿ ನಡೆಸಿದರು.

ಕುಡಚಿ ಒಂದೇ ಊರಲ್ಲಿ 18 ಸಾವಿರ ಮತಗಳು ಬಂದಿವೆ. ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವು. ಕಳೆದ ಬಾರಿ ನಿಮಗೆ ಬಿದ್ದ ಮತಗಳು ಕೂಡ ಬಿಜೆಪಿಗೆ ಹೋಗಿವೆ ಎಂದ ಅವರು, ಘಾಟಗೆ ಹಾಗೂ ನೀವು ಕುಸ್ತಿ ಹಿಡಿಯಿರಿ. ಈಗ ಚುನಾವಣೆಗೆ ನಿಂತಿದ್ದು ನಾವು. ನಮ್ಮ ಚುನಾವಣೆಗೆ ಯಾಕೆ ತೊಂದ್ರೆ ಮಾಡಿದ್ರಿ? ನಿಮಗೆ ಟಿಕೆಟ್ ಕೊಡಿಸಿ ಸಪೋರ್ಟ್ ಮಾಡಿದ್ದೆವು. ಆದರೆ, ನೀವ್ಯಾಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನಿಸಿದರು.

ಇನ್ನು ಕೇವಲ ಮಹೇಂದ್ರ ತಮ್ಮಣ್ಣವರ ಮಾತ್ರ ಅಲ್ಲ, ನಮ್ಮ ವಿರುದ್ಧ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ. ದೇವೇಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಎಷ್ಟು ಜನರನ್ನು ಬೆಳೆಸಿದರು. ಅವರನ್ನೂ ಬೈತಾರೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಲ್ಲ. ಆದರೆ, ಬೇಟೆ ಸಿಗೋದನ್ನು ಕಾಯುತ್ತಾ ಕೂತಿರುತ್ತೇವೆ. ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ. ಜನ ಯಾರನ್ನು ಬೇಕಾದ್ರೂ ಗೆಲ್ಲಿಸ್ತಾರೆ, ಯಾರನ್ನ ಬೇಕಾದ್ರೂ ಸೋಲಿಸ್ತಾರೆ. ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ರು. ಆದರೆ, ಒಂದೇ ಚುನಾವಣೆ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು. ಯಾರನ್ನಾದ್ರೂ ಗೆಲ್ಲಿಸ್ತಿವಿ ಸೋಲಿಸ್ತಿವಿ ಎಂದು ತೋರಿಸಿಕೊಟ್ಟಿದ್ದಾರೆ. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಶಾಸಕರಿಗೆ ಸೂಚ್ಯವಾಗಿ ಹೇಳಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ