ಹಸಿವುಮುಕ್ತ ರಾಜ್ಯ ನಮ್ಮದಾಗಬೇಕು, ರಾಜ್ಯದಲ್ಲಿ ಬಡವರು ಹಸಿದು ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ. ಹಾಗಾಗಿ ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಸಿವುಮುಕ್ತ ರಾಜ್ಯ ನಮ್ಮದಾಗಬೇಕು, ರಾಜ್ಯದಲ್ಲಿ ಬಡವರು ಹಸಿದು ಮಲಗಬಾರದು ಎನ್ನುವ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ. ಹಾಗಾಗಿ ನಾನು ಸಾಲದ ರಾಮಯ್ಯ ಅಲ್ಲ, ಅನ್ನದ ರಾಮಯ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಶಿರೂರ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರ ಮತಯಾಚಿಸಿ ಮಾತನಾಡಿದರು. ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿ ಆಗಿದ್ದಾಗ ಆಹಾರ ಭದ್ರತಾ ಕಾಯ್ದೆ ಜಾರಿ ಮಾಡಿದ್ದರಿಂದ ಇಲ್ಲಿ ನಾನು ಅನ್ನಭಾಗ್ಯ ಜಾರಿಗೆ ತರಲು ಸಾಧ್ಯವಾಯಿತು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾಳಜಿಯನ್ನು ನೀವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ಎಚ್.ವೈ. ಮೇಟಿಯವರು ಐದು ಬಾರಿ ಶಾಸಕರು, ಎರಡು ಬಾರಿ ಸಚಿವರು ಮತ್ತು ಒಮ್ಮೆ ಸಂಸದರಾಗಿ ಎಲ್ಲರನ್ನೂ ಗೌರವವಾಗಿ ಕಾಣುತ್ತಾ ಜಾತಿ ಸೋಂಕನ್ನು ಸೋಕಿಸಿಕೊಂಡಿರಲಿಲ್ಲ. ಬಡವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಉಮೇಶ ಮೇಟಿಯವರನ್ನು ಗೆಲ್ಲಿಸಿದರೆ ಎಚ್.ವೈ. ಮೇಟಿಯವರ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಒಂದು ಬಾರಿಯೂ ಅಧಿಕಾರಕ್ಕೆ ಬರಲಿಲ್ಲ. ಬಿಜೆಪಿಗೆ ರಾಜ್ಯದ ಜನರ ಆಶೀರ್ವಾದ ಇಲ್ಲದಿದ್ದರಿಂದ ಆಪರೇಷನ್ ಕಮಲದ ಮೂಲಕ ಅಪಾರ ಹಣ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂತು. ನಮ್ಮ ಮೇಲೆ ಭ್ರಷ್ಟಾಚಾರ ಆರೋಪ ಮಾಡುವ ಯಡಿಯೂರಪ್ಪ ಅವರಿಗೆ ಆಪರೇಷನ್ ಕಮಲ ಮಾಡಲು ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವುದನ್ನು ನೀವೆಲ್ಲಾ ಕೇಳಬೇಕಿದೆ ಎಂದರು.
ಯಡಿಯೂರಪ್ಪ ಮತ್ತು ವಿಜಯೇಂದ್ರ ಅತ್ಯಂತ ಭ್ರಷ್ಟರು ಎಂದು ಯತ್ನಾಳ ಅವರೇ ಹೇಳುತ್ತಾರೆ. ಅದೇ ಯತ್ನಾಳ ಅವರನ್ನು ಬಿಜೆಪಿ ನಾಯಕರು ಬಾಗಲಕೋಟೆಗೆ ಕರೆಸಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾರೆ. ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರದಲ್ಲಿ ನಡೆಯುವ ಕಮಿಷನ್ ದಂಧೆ ಬಗ್ಗೆ ಪತ್ರ ಬರೆದಿದ್ದರು. ಇಂಥ ಬಿಜೆಪಿಯವರಿಂದ ನಾವು ಭ್ರಷ್ಟಾಚಾರದ ಮಾತು ಕೇಳಬೇಕಾ ಎಂದು ವ್ಯಂಗ್ಯವಾಡಿದರು.
ಮೋದಿ ಅವರು ಪ್ರಧಾನಿ ಆದಾಗ ₹165 ಲಕ್ಷ ಕೋಟಿ ಇದ್ದ ದೇಶದ ಸಾಲವನ್ನು ₹218 ಕೋಟಿಗೆ ಹೆಚ್ಚಿಸಿದ್ದಾರೆ. ದುಡಿಯುವವರ, ಮಹಿಳೆಯರ, ಶ್ರಮಿಕರ ಮತ್ತು ಹಿಂದುಳಿದವರ, ದಲಿತರ ವಿರೋಧ ಪಕ್ಷವಾದ ಬಿಜೆಪಿ ಬೆಂಬಲಿಸಬೇಡಿ. ಉಮೇಶ್ ಮೇಟಿಯವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.