ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ

KannadaprabhaNewsNetwork | Published : Sep 21, 2024 1:45 AM

ಸಾರಾಂಶ

ಬಿಜೆಪಿಯವರು ಮಾಡಿದ ದ್ವೇಷ ರಾಜಕಾರಣ ನಾವು ಯಾರೂ ಮಾಡಿಲ್ಲ. ಎಷ್ಟು ಜನಕ್ಕೆ ಎಷ್ಟು ಟಾರ್ಚರ್‌ ಕೊಟ್ಟಿದ್ದಾರೆ ಎನ್ನುವುದಕ್ಕೆ ನಾನೇ ಸ್ವತಃ ದೊಡ್ಡ ಸಾಕ್ಷಿಯಾಗಿದ್ದೇನೆ ಎಂದು ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬಿಜೆಪಿಯವರು ಮಾಡಿದ ದ್ವೇಷ ರಾಜಕಾರಣ ನಾವು ಯಾರೂ ಮಾಡಿಲ್ಲ. ಎಷ್ಟು ಜನಕ್ಕೆ ಎಷ್ಟು ಟಾರ್ಚರ್‌ ಕೊಟ್ಟಿದ್ದಾರೆ ಎನ್ನುವುದಕ್ಕೆ ನಾನೇ ಸ್ವತಃ ದೊಡ್ಡ ಸಾಕ್ಷಿಯಾಗಿದ್ದೇನೆ ಎಂದು ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ವಿನಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ವರ್ಷಗಳಿಂದ ನಾನು ನನ್ನ ಕ್ಷೇತ್ರಕ್ಕೆ ಹೋಗಿಲ್ಲ. ಜನರು ಬೆಳಗಾವಿಗೆ ಬಂದು ನನ್ನ ಮುಂದೆ ನಿಲ್ಲುವ ಪರಿಸ್ಥಿತಿ ಬಂದಿದೆ. ಕ್ಷೇತ್ರದಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೇನೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಜನರ ಭೇಟಿ ಮಾಡುತ್ತೇನೆ ಎಂದರು.

ಬಿಜೆಪಿ ಶಾಸಕ ಮುನಿರತ್ನ ವಿಚಾರದಲ್ಲಿ ಏನೂ ದ್ವೇಷದ ರಾಜಕಾರಣ ಆಗಿಲ್ಲ. ಅವನು ಮಾತನಾಡಿ ಇದನ್ನೆಲ್ಲವನ್ನೂ ಮಾಡಿಕೊಂಡಿದ್ದಾನೆ. ರಾಜಕಾರಣಕ್ಕೆ ನಾವು ಯಾವುದಕ್ಕೆ ಬಂದಿರುತ್ತೇವೆ ಎನ್ನುವುದು ನಮಗೂ ಗೊತ್ತಿರಬೇಕು. ರಾಜಕೀಯ ಸಂಪೂರ್ಣ ಕಮರ್ಷಿಯಲ್‌ ಆಗಿಬಿಟ್ಟಿದೆ. ರಾಜಕಾರಣಿಗಳ ಜೊತೆಗೆ ಜನರು ಕೂಡ ಕಮರ್ಷಿಯಲ್‌ ಆಗಿದ್ದಾರೆ. ಹಾಗಾಗಿ, ಸಂಪೂರ್ಣ ವ್ಯವಸ್ಥೆ ಕೆಟ್ಟುಹೋಗಿದೆ ಎಂದು ಬೇಸರಿಸಿದರು.

ಉತ್ತರ ಕರ್ನಾಟಕದಲ್ಲಿ ಜನರು ಮಾನ ಮರ್ಯಾದೆಗೆ ಅಂಜಿ ಬದುಕುತ್ತಾರೆ. ಬೆಂಗಳೂರು ಸಿಟಿಯಂತ ವ್ಯವಸ್ಥೆಯಲ್ಲಿ ಯಾರು ಏನು ಮಾಡ್ತಿದ್ದಾರೆ ಎನ್ನುವುದು ಗೊತ್ತಾಗೋದೆ ಇಲ್ಲ. ಒಳ್ಳೆಯವರು ಯಾರು? ಕೆಟ್ಟವರು ಯಾರು ಎಂದು ನೋಡಿ ಜನ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.

ಪಂಚಮಸಾಲಿ ಹೋರಾಟದಲ್ಲಿ ನಮ್ಮ ಶಾಸಕರು ಧ್ವನಿ ಎತ್ತುತ್ತಿಲ್ಲ ಎಂಬ ಶ್ರೀಗಳ ಆರೋಪ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೀಸಲಾತಿ ವಿಚಾರವಾಗಿ ನಮ್ಮ ಸಮಾಜದ ಶಾಸಕರು ಸದನದಲ್ಲಿ ಧ್ವನಿ ಎತ್ತುತ್ತಿಲ್ಲ‌ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಸಿಎಂಗೆ ನಾವು ನಾಲ್ಕೈದು ಬಾರಿ ಕೇಳಿಕೊಂಡಿದ್ದೇವೆ. ಅವರು ಸಹ ನಮಗೆ ಟೈಂ ಕೊಡುತ್ತೇನೆ ಎಂದು ಹೇಳಿದ್ದಾರೆ. ಹಲವಾರು ಗದ್ದಲಗಳು ನಡೆದಿದ್ದರಿಂದ ಸಿಎಂ‌ ನಮಗೆ ಸಮಯ ಕೊಡಲಾಗಿಲ್ಲ. ಇನ್ನೊಂದು ವಾರ ಬಿಟ್ಟು ಸ್ವಾಮೀಜಿಯವರನ್ನು ಸಿಎಂಗೆ ಭೇಟಿ ಮಾಡಿಸುತ್ತೇವೆ ಎಂದು ತಿಳಿಸಿದರು.

ಹಿಂದಿನ ಬಿಜೆಪಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಡಿ ಮೀಸಲಾತಿ ನೀಡಿತ್ತು. ಆದರೆ, ನಾವು ಅದನ್ನು ಒಪ್ಪಿಕೊಂಡಿಲ್ಲ. 2ಎ ಮೀಸಲಾತಿ ನೀಡುವಂತೆ ಹೋರಾಟ ನಿರಂತರವಾಗಿ ಮುಂದುವರೆದಿದೆ ಎಂದು ಹೇಳಿದರು.

Share this article