ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ಪುನರುಚ್ಛರಿಸಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಗಲಿದ್ದಾರೆ ಎನ್ನುವ ಪ್ರಶ್ನೆಗೆ ನಾನೇ ಅಭ್ಯರ್ಥಿ ಎಂದು ಹೇಳಿದರು.
ನೆಲಮಂಗಲ/ದಾಬಸ್‌ಪೇಟೆ : ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮತ್ತೊಮ್ಮೆ ಪುನರುಚ್ಛರಿಸಿದರು. ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಭ್ಯರ್ಥಿ ಯಾರಗಲಿದ್ದಾರೆ ಎನ್ನುವ ಪ್ರಶ್ನೆಗೆ ನಾನೇ ಅಭ್ಯರ್ಥಿ ಎಂದು ಹೇಳಿದರು.
ನೆಲಮಂಗಲ ನಗರದ ಇತಿಹಾಸ ಪ್ರಸಿದ್ಧ ಕವಾಡಿ ಮಠದಲ್ಲಿ ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯ ಹಾಗೂ ಮಹಂತಿ ಮಠದ ಶ್ರೀ ರುದ್ರೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಈ ಹಿಂದೆ ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರು ಧ್ವಜಾರೋಹಣ ನೆರವೇರಿಸಿಲ್ಲ ಎನ್ನುವ ಬಗ್ಗೆ ಕೇಳಿದಾಗ, ನಾನು ಕಳೆದ ಐದು ವರ್ಷಗಳಿಂದ ರಾಮನಗರದಲ್ಲಿ ಧ್ವಜಾರೋಹಣ ಮಾಡಿದ್ದೇನೆ. ಚನ್ನಪಟ್ಟಣದ ಬಗ್ಗೆ ಅಧಿಕಾರಿಗಳ ಬಳಿ ಕೇಳಿದಾಗ ಆರು ವರ್ಷಗಳಿಂದ ಯಾರು ಬಂದು ಧ್ವಜಾರೋಹಣ ನಡೆಸಿಲ್ಲ ಎಂದರು.
ಅವರಿಗೆ ದೇಶದ ಮೇಲೆ ವಿಶ್ವಾಸವಿಲ್ಲ ಎಂದೆನಿಸುತ್ತದೆ. ಅವರು ಏನಾದರು ಮಾಡಿಕೊಳ್ಳಲಿ, ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಪಂಚ ಗ್ಯಾರಂಟಿಗಳನ್ನು ನಿಲ್ಲಿಸುವ ಬಗ್ಗೆ ಒಂದಷ್ಟು ಸಚಿವರು ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದಾಗ ನಿಲ್ಲಿಸುವ ಬಗ್ಗೆ ಯಾವ ಸಚಿವರು ಮಾತನಾಡುತ್ತಿಲ್ಲ. ಆದರೆ ಅನುಕೂಲ ಇರುವವರು ಬೇಡ ಎಂದು ಹೇಳುತ್ತಿದ್ದಾರೆ. ಅವರಿಗೂ ಸೌಲಭ್ಯ ನೀಡಲಾಗುತ್ತಿದೆ ಎನ್ನುವ ಬಗ್ಗೆ ಅಭಿಪ್ರಾಯ ಬರುತ್ತಿದೆ. ಇದರ ಬಗ್ಗೆ ಆನಂತರ ಯೋಚನೆ ಮಾಡುತ್ತೇವೆ. ಗ್ಯಾರಂಟಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸ್ಪಷ್ಟ ಪಡಿಸಿದರು.
ಪ್ರಯತ್ನಕ್ಕಿಂತ ಪ್ರಾರ್ಥನೆಗೆ ಕಾರ್ಯಗಳು ಬೇಗ ಸಿದ್ದಿಸುತ್ತವೆ. ಈ ವರ್ಷ ದೇಶ, ರಾಜ್ಯಕ್ಕೆ ಉತ್ತಮ, ಮಳೆ ಬೆಳೆಯಾಗಲಿ, ಶಾಂತಿ ನೆಲೆಸಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಶಾಸಕ ಎನ್.ಶ್ರೀನಿವಾಸ್ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ ಸಿ.ಆರ್‌ಗೌಡ, ನಗರಸಭೆ ಅಧ್ಯಕ್ಷೆ ಪೂರ್ಣಿಮಾ ಸುಗ್ಗರಾಜು, ಸದಸ್ಯ ಪ್ರದೀಪ್, ವೀರಶೈವ ಲಿಂಗಾಯಿತ ಮುಖಂಡರಾದ ಎನ್.ಎಸ್.ನಟರಾಜು, ಎನ್.ಬಿ.ದಯಾಶಂಕರ್, ಧರ್ಮದರ್ಶಿ ಗಂಗರಾಜು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ರಾಜಶೇಖರ್, ಮಾಜಿ ಅಧ್ಯಕ್ಷ ಕೆ.ಸಿ.ಅಣ್ಣಪ್ಪ, ಉಮಾಶಂಕರ್, ಗಂಗಾಧರಪ್ಪ, ಪುಟ್ಟಣ್ಣ, ಕೊಟ್ರೇಶ್, ಕಾಂಗ್ರೆಸ್ ಮುಖಂಡರಾದ ಹೇಮಂತ್‌ಕುಮಾರ್, ಟಿ.ನಾಗರಾಜು, ಎಂ.ಕೆ ನಾಗರಾಜು, ನಾರಾಯಣಗೌಡ, ಮಂಜುನಾಥ್, ವಾಸು, ಭಾಸ್ಕರ್, ಕೆಂಪರಾಜು ಮತ್ತಿತರರಿದ್ದರು.
ಹಿಂದಿನ ಶಾಸಕರು 6 ವರ್ಷದಲ್ಲಿ ಒಂದು ವರ್ಷವೂ ಧ್ವಜಾರೋಹಣ ಮಾಡಿಲ್ಲ
ಚನ್ನಪಟ್ಟಣದಲ್ಲಿ ಶಾಸಕ ಸ್ಥಾನ ಖಾಲಿ ಇರುವುದರಿಂದ ಧ್ವಜಾರೋಹಣ ಮಾಡಲು ಬಂದಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದರು.
ಧ್ವಜಾರೋಹಣದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಹಿಂದೆ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ರಾಮನಗರದಲ್ಲಿ ಧ್ವಜಾರೋಹಣ ಮಾಡ್ತಿದ್ದೆ. ಆದರೆ, ಇಲ್ಲಿನ ಸ್ಥಳೀಯ ಶಾಸಕರಾಗಿದ್ದವರು ಯಾವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೂ ಬರ್ತಿರಲಿಲ್ಲ. 6 ವರ್ಷದಲ್ಲಿ ಒಂದು ದಿನವೂ ಬಂದು ಧ್ವಜಾರೋಹಣ ಮಾಡಿಲ್ಲ. ಅವರಿಗೆ ದೇಶದ ಸ್ವಾತಂತ್ರ್ಯ, ಇತಿಹಾಸದ ಬಗ್ಗೆ ಕಾಳಜಿ ಇಲ್ಲ. ಹಾಗಾಗಿ ನಾನು ಇಲ್ಲಿ ಬಂದು ಧ್ವಜಾರೋಹಣ ಮಾಡಿದೆ ಎಂದು ಹೇಳಿದರು.
ಧ್ವಜವನ್ನು ಅರ್ಧಕ್ಕೆ ಹಾರಿಸಿದರೆ ಅದು ಅಗೌರವ, ಅಂತೆಯೇ ಜನರನ್ನು ಅರ್ಧಕ್ಕೆ ಬಿಟ್ಟು ಹೋದರೆ ಅದೂ ಅಗೌರವ. ನಾನು ಇಲ್ಲಿ ರಾಜಕೀಯ ಮಾಡಲು ಬಂದಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ಬಂದಿದ್ದೇನೆ. ಚನ್ನಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಡಿಸಿಎಂ:
ಚನ್ನಪಟ್ಟಣದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಅವರು ತಾಲೂಕು ಕೇಂದ್ರದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ಮಾಡಿದ ಡಿಸಿಎಂ ಎನ್ನಿಸಿದರು. ಸ್ವಾತಂತ್ರ್ಯೋತ್ಸವ ದಿನದಂದು ಉಸ್ತುವಾರಿ ಸಚಿವರು ಜಿಲ್ಲಾಮಟ್ಟದಲ್ಲಿ ಧ್ವಜಾರೋಹಣ ನೆರವೇರಿಸುತ್ತಾರೆ. ಆದರೆ, ತಾಲೂಕು ಕೇಂದ್ರದಲ್ಲಿ ಸಚಿವರು, ಅದರಲ್ಲೂ ಡಿಸಿಎಂ ಧ್ವಜಾರೋಹಣ ಮಾಡಿದ್ದು, ರಾಜ್ಯದಲ್ಲಿ ಇದೇ ಮೊದಲಾಗಿದ್ದು, ಡಿ.ಕೆ.ಶಿವಕುಮಾರ್ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು.
ಡಿಸಿಎಂಗೆ ಅಹವಾಲು ಸಲ್ಲಿಸಲು ಬಂದ ವೃದ್ಧರಿಗೆ ಪೊಲೀಸರ ತಡೆ:
ಚನ್ನಪಟ್ಟಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಭಾಷಣ ಮುಗಿಸಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ವೃದ್ಧರೊಬ್ಬರು ಡಿಸಿಎಂ ಬಳಿ ಅಹವಾಲು ಸಲ್ಲಿಸಲು ವೇದಿಕೆಗೆ ಆಗಮಸಿದರು. ಈ ವೇಳೆ ಅವರನ್ನು ಪೊಲೀಸರು ತಡೆದು ಹಿಂದಕ್ಕೆ ಕಳುಹಿಸಿದರು. ಬಳಿಕ, ವೃದ್ಧೆಯೊಬ್ಬರು ಅಹವಾಲು ಸಲ್ಲಿಸಲು ಅರ್ಧ ವೇದಿಕೆಗೆ ಆಗಮಿಸಿದ್ದು, ಅವರನ್ನು ಸಹ ಪೊಲೀಸರು ಹಿಂದಕ್ಕೆ ಕಳುಹಿಸಿದರು.