ಕನ್ನಡಪ್ರಭ ವಾರ್ತೆ ತುರುವೇಕೆರೆನಾನು ಈ ಜಿಲ್ಲೆಯ ಮಣ್ಣಿನ ಮಗ. ನಿಮ್ಮ ಮಗ, ನನ್ನನ್ನು ಬೆಂಬಲಿಸಿ ಆಶೀರ್ವದಿಸಿ. ನಿಮ್ಮ ಋಣವನ್ನು ತೀರಿಸುತ್ತೇನೆ. ನಿಮ್ಮ ಮತಕ್ಕೆ ಗೌರವ ತರುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರು ಮನವಿ ಮಾಡಿಕೊಂಡರು. ಇವರು ತಾಲೂಕಿನ ಸಂಪಿಗೆ, ಸಂಪಿಗೆ ಹೊಸಳ್ಳಿ, ಕೊಂಡಜ್ಜಿ, ಹುಲ್ಲೇಕೆರೆ, ದಂಡಿನಶಿವರ, ಬಾಣಸಂದ್ರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಸಿದ ಪ್ರಚಾರ ಸಭೆಯಲ್ಲಿ ಮನವಿ ಮಾಡಿದರು. ನನಗೆ ಇಡೀ ಜಿಲ್ಲೆಯ ಆಗುಹೋಗುಗಳು ಗೊತ್ತಿದೆ. ಪ್ರತಿಯೊಂದು ಗ್ರಾಮವೂ ಗೊತ್ತಿದೆ. ಆದರೆ ಅಧಿಕಾರದ ಆಸೆಗಾಗಿ ಎಲ್ಲಾ ಕಡೆಯೂ ಓಡಾಡುವ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣನವರಿಗೆ ಈ ಜಿಲ್ಲೆಯ ಬಗ್ಗೆ ಏನು ತಿಳಿದಿದೆ. ನಾನು ಸಂಸದನಾಗಿದ್ದ ವೇಳೆ ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯ ದೂರವಾಣಿಯನ್ನೂ ಕರೆಯನ್ನೂ ಸ್ವೀಕರಿಸಿ, ಅವರ ಸಮಸ್ಯೆಗೆ ಸ್ಪಂದಿಸಿದ್ದೇನೆ. ಎಲ್ಲ ಜನರ ನಾಡಿ ಮಿಡಿತ ಗೊತ್ತಿದೆ. ಈ ಜಿಲ್ಲೆಯ ಮಣ್ಣಿನ ವಾಸನೆ ಗೊತ್ತಿದೆ. ಆದರೆ ಈ ಸೋಮಣ್ಣನವರಿಗೆ ಏನು ಗೊತ್ತಿದೆ. ಇವರು ಈ ಜಿಲ್ಲೆಯ ಮಗನೇ?, ಬೀಗರ ಜಾಗವೇ?. ಮಗಳಿಗೋ ಮಗನಿಗೋ ಏನಾದರೂ ಸಂಬಂಧ ಮಾಡಿದ್ದಾರಾ? ಜಿಲ್ಲೆಗೆ ಅವರ ಕೊಡುಗೆ ಏನು ಎಂದು ಮುದ್ದಹನುಮೇಗೌಡ ಪ್ರಶ್ನಿಸಿದರು.ನಾನು ಸಂಸದನಾಗಿದ್ದ ವೇಳೆ ೭೦೦ ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದೇನೆ. ೨೦೦ಕ್ಕೂ ಹೆಚ್ಚು ಬಾರಿ ಜಿಲ್ಲೆಯ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಮಾತನಾಡಿ ಗಮನ ಸೆಳೆದಿದ್ದೇನೆ. ಕೊಬ್ಬರಿಗೆ ಸೂಕ್ತ ಬೆಂಬಲ ಬೆಲೆ ಕೊಡಿಸಿದ್ದೇನೆ. ಎಚ್‌ಎಂಟಿಯ ಸಾವಿರಾರು ಕೋಟಿ ಮೌಲ್ಯದ ಜಮೀನು ಉಳಿಸಿ ಆ ಜಮೀನನ್ನು ಇಸ್ರೋಗೆ ಕೊಡಿಸಿದ್ದೇನೆ. ಎಚ್‌ಎಎಲ್‌ನ್ನು ಜಿಲ್ಲೆಗೆ ತಂದಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಮಾಡಿಸಿದ್ದೇನೆ. ಪಾಸ್‌ಪೋರ್ಟ್ ಕಚೇರಿ ತಂದಿದ್ದೇನೆ. ಇನ್ನೂ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಈ ತಾಲೂಕಿನ ಹಲವಾರು ಗ್ರಾಮಗಳಲ್ಲಿ ನಾನು ನೀಡಿರುವ ಅಭಿವೃದ್ಧಿ ಕಾರ್ಯಗಳು ನನ್ನ ಕಾರ್ಯಕ್ಷಮತೆಯನ್ನು ತೋರುತ್ತದೆ. ಹಾಗಾಗಿ ನನಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿ ಎಂದು ಮುದ್ದಹನುಮೇಗೌಡ ಮನವಿ ಮಾಡಿಕೊಂಡರು.ನಾನು ಸಂಸದನಾಗಿದ್ದರೂ ಸಹ ಜೆಡಿಎಸ್, ಕಾಂಗ್ರೆಸ್ ಹೊಂದಾವಣಿಕೆ ಮಾಡಿಕೊಂಡಿದ್ದರಿಂದ ನನಗೆ ಅವಕಾಶ ತಪ್ಪಿಸಲಾ ಯಿತು. ನನಗೆ ನೋವಾಗಿದ್ದರೂ ಸಹ ನಾನು ಪ್ರಾಮಾಣಿಕವಾಗಿ ಎಚ್.ಡಿ.ದೇವೇಗೌಡರ ಪರವಾಗಿ ಮತಯಾಚನೆ ಮಾಡಿದೆ. ಆಗ ಯಾವೊಬ್ಬ ಜೆಡಿಎಸ್ ಮುಖಂಡರೂ ಸಹ ನನಗೆ ಮತಯಾಚನೆ ಬರುವಂತೆ ಕರೆಯಲಿಲ್ಲ. ನಿರ್ಲಕ್ಷ್ಯ ಮಾಡಿದರು. ಆದರೂ ಸಹ ನಾನೇ ಹಲವಾರು ಕಡೆ ದೇವೇಗೌಡರ ಪರ ಮತಯಾಚನೆ ಮಾಡಿದೆ. ಆದರೂ ಸಹ ನಾನು ದೇವೇಗೌಡರು ಸೋಲಲು ಕಾರಣ ಎಂದು ಬಿಂಬಿಸಲಾಗುತ್ತಿದೆ ಎಂದರು. ದೇವೇಗೌಡರು ಸೋಲಲು ಕಾರಣ ನಾನಲ್ಲ. ಇದೇ ಬಿಜೆಪಿಯ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ. ಹಾಲಿ ಸಂಸದರಾಗಿರುವ ಜಿ.ಎಸ್.ಬಸವರಾಜು ಅವರು ಗೆಲುವು ಕಂಡ ಸಂದರ್ಭದಲ್ಲಿ ನನ್ನ ಗೆಲುವಿಗೆ ವಿ.ಸೋಮಣ್ಣ ಕಾರಣ ಎಂದು ರಾಜಾರೋಷ ವಾಗಿ ಹೇಳಿದರು. ಆದರೆ ವಿನಾಕಾರಣ ನನ್ನ ಹೆಸರನ್ನು ಥಳಕು ಹಾಕಲಾಗುತ್ತಿದೆ ಎಂದು ಬೇಸರಿಸಿದರು. ಕೊಡುಗೆ ಏನು?: ಹಾಲಿ ಸಂಸದರಾಗಿರುವ ಜಿ.ಎಸ್.ಬಸವರಜು ರವರು ಸುಮ್ಮನೆ ೫ ವರ್ಷ ಕಾಲ ಕಳೆದು ಬಿಟ್ಟರು. ಜಿಲ್ಲೆಯ ಜನತೆಯ ಪರವಾ ಗಿ ಎಂದೆಂದೂ ದನಿ ಎತ್ತಲೇ ಇಲ್ಲ. ಜಿಲ್ಲೆಗೆ ಅವರ ಕೊಡುಗೆ ಏನಿದೆ ಎಂದು ಮುದ್ದಹನುಮೇಗೌಡ ಪ್ರಶ್ನಿಸಿದರು. ಜಿಲ್ಲೆಯ ರೈತರು ಕೊಬರಿಗೆ ಬೆಂಬಲ ಕೊಡಿಸಿ ಎಂದು ಸಾಕಷ್ಟು ಬಾರಿ ಅವಲತ್ತುಗೊಂಡರೂ ಸಹ ಜನರ ಪರ ಮಾತನಾಡಲಿಲ್ಲ ಎಂದು ಕಿಡಿಕಾರಿದರು. ಹಲ್ಕಾ ಕೆಲಸ ಮಾಡಲ್ಲ :
ನಾನು ನ್ಯಾಯಾಧೀಶನಾಗಿ ಕೆಲಸ ಮಾಡಿರುವವನು. ನಾನು ಎಂದೂ ಹಲ್ಕಾ ಕೆಲಸ ಮಾಡಲು ತಯಾರಿಲ್ಲ. ನನಗೆ ಒಳ್ಳೆಯ ಕೆಲಸ ಮಾಡಿ ಗೊತ್ತೇ ಹೊರೆತು, ಕೆಟ್ಟ ಕೆಲಸ ಮಾಡಿ ಗೊತ್ತಿಲ್ಲ. ನಾನು ಏನು ತಪ್ಪು ಮಾಡಿದ್ದೇನೆ ಎಂದು ಹೇಳಿ ನೋಡೋಣ. ನನ್ನನ್ನು ಒಳ್ಳೆಯವನೆಂದೇ ಜನರು ಹೇಳುತ್ತಾರೆ. ಕೆಲಸಗಾರ ಅಂತಾರೆ. ಹಾಗಾಗಿ ಎಲ್ಲರೂ ಈ ಬಾರಿ ಮತ್ತೊಮ್ಮೆ ಆಶೀರ್ವದಿ ಸಬೇಕು ಎಂದು ಕೈ ಮುಗಿದು ಮುದ್ದಹನುಮೇಗೌಡ ಮತದಾರರಲ್ಲಿ ಮನವಿ ಮಾಡಿಕೊಂಡರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸನ್ನ ಕುಮಾರ್, ಕೋಳಾಲ ನಾಗರಾಜ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್,ಮುಖಂಡರಾದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎನ್.ಆರ್.ಜಯರಾಮ್, ಬೆಸ್ಕಾಂ ಮಾಜಿ ನಿರ್ದೇಶಕ ಬಿ.ಎಸ್.ವಸಂತಕುಮಾರ್, ಎಐಸಿಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ, ಚನ್ನರಾಯಪಟ್ಟಣದ ಮಾಜಿ ಶಾಸಕ ಪುಟ್ಟೇಗೌಡ, ವಕೀಲ ಪ್ರವೀಣ್ ಗೌಡ, ಸೇವಾದಳದ ಅಧ್ಯಕ್ಷ ಕೊಂಡಜ್ಜಿ ಶಿವಕುಮಾರ್, ಆದಿಜಾಂಬವ ಸೇವಾ ಸಮಿತಿಯ ಅಧ್ಯಕ್ಷ ಸಿ.ಎಸ್.ಮೂರ್ತಿ, ದಂಡಿನಶಿವರ ಗಂಗಾಧರ ಗೌಡ, ಕೆಂಪರಾಜ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು. ಮಹಿಳೆಯರ ಕುರಿತ ಹೇಳಿಕೆ ಎಚ್‌ಡಿಕೆ ಯೋಗ್ಯತೆ ತೋರಿಸುತ್ತದೆ: ಬೆಮೆಲ್: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಮಹಿಳೆಯರ ಕುರಿತು ಅಸಭ್ಯವಾಗಿ ಮಾತನಾಡಿರುವುದು ಅವರ ಯೋಗ್ಯತೆಯನ್ನು ಎತ್ತಿ ತೋರಿಸುತ್ತದೆ ಎಂದು ವಿಧಾನ ಪರಿಷತ್ ನ ಮಾಜಿ ಸದಸ್ಯ ಬೆಮಲ್ ಕಾಂತರಾಜ್ ಹೇಳಿದರು. ಕಾಂಗ್ರೆಸ್ ಸರ್ಕಾರ ಮಾತು ಕೊಟ್ಟಂತೆ ನಡೆದುಕೊಂಡಿದೆ. ಇದು ಕಂಡು ಅವರಿಗೆ ಹೊಟ್ಟೆ ಉರಿ. ಬಡತನದಲ್ಲಿರುವ ಪ್ರತಿ ಕುಟುಂಬಕ್ಕೆ ಸರಾಸರಿ ತಿಂಗಳಿಗೆ ಸುಮಾರು ನಾಲ್ಕೈದು ಸಾವಿರ ರೂಗಳು ತಲುಪುತ್ತಿದೆ. ಬಡತನದ ಕುಟುಂಬ ಎರಡು ಹೊತ್ತಿನ ಊಟ ಮಾಡುತ್ತಿದೆ. ಜನರು ನೆಮ್ಮದಿಯಿಂದ ಇದ್ದಾರೆ. ಆದರೆ ಇದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನವರು ನ್ಯಾಯಲಯದಲ್ಲಿ ದಾವೆ ಹೂಡಿದ್ದಾರೆ ಎಂದರು.
ಅವಮಾನ: ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿರುವ ಕುಮಾರಸ್ವಾಮಿಯವರಿಗೆ ಅದರ ಅರ್ಥ ಏನು ಎಂಬ ಅರಿವಿದೆಯಾ?. ಗ್ರಾಮಾಂತರ ಪ್ರದೇಶದಲ್ಲಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಅವರ ಚಾರಿತ್ಯ ಹರಣ ಮಾಡಿದಂತೆ. ಇಂತಹ ಮನಸ್ಥಿತಿಯಿರುವ ಕುಮಾರಸ್ವಾಮಿಯವರಿಗೆ, ಅವರ ಪಕ್ಷದವರಿಗೆ ಮತ್ತು ಅವರ ಬೆಂಬಲಿತ ಪಕ್ಷದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಬೆಮಲ್ ಕಾಂತರಾಜ್ ಘರ್ಜಿಸಿದರು.