ಪ್ರತ್ಯೇಕ ಲಿಂಗಾಯತ ಧರ್ಮ ಎನ್ನುವವರ ಜತೆಗಿದ್ದೇನೆ: ಸುಶೀಲಕುಮಾರ ಶಿಂಧೆ

KannadaprabhaNewsNetwork |  
Published : Jan 14, 2026, 04:15 AM IST
(ಫೋಟೊ13ಬಿಕೆಟಿ5,(1) ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರಿಗೆ 2026ರ ರಾಜ್ಯ ಮಟ್ಟದ ಶರಣ ಕಾಯಕ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು. ) | Kannada Prabha

ಸಾರಾಂಶ

ನಾನು ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎನ್ನುವವರೊಂದಿಗೆ ಇದ್ದೇನೆ. ನಾನು ಕಕ್ಕಯ್ಯ (ಶರಣ ಕಕ್ಕಯ್ಯ ಸಮುದಾಯ) ಆಗಿದ್ದು, ಲಿಂಗಾಯತ ಬಿಟ್ಟು ಎಲ್ಲಿಗೆ ಹೋಗಲಿ? ಈ ಮೊದಲು ಲಿಂಗ, ವಿಭೂತಿ ಧರಿಸುತ್ತಿದ್ದೆವು. ಈಗದು ಮಾಯವಾಗಿದೆ. ಮಾನವೀಯತೆ, ಸಮಾನತೆ ಸಾರುವ ಧರ್ಮದ ಅವಶ್ಯಕತೆಯಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲಕುಮಾರ್‌ ಶಿಂಧೆ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಾನು ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎನ್ನುವವರೊಂದಿಗೆ ಇದ್ದೇನೆ. ನಾನು ಕಕ್ಕಯ್ಯ (ಶರಣ ಕಕ್ಕಯ್ಯ ಸಮುದಾಯ) ಆಗಿದ್ದು, ಲಿಂಗಾಯತ ಬಿಟ್ಟು ಎಲ್ಲಿಗೆ ಹೋಗಲಿ? ಈ ಮೊದಲು ಲಿಂಗ, ವಿಭೂತಿ ಧರಿಸುತ್ತಿದ್ದೆವು. ಈಗದು ಮಾಯವಾಗಿದೆ. ಮಾನವೀಯತೆ, ಸಮಾನತೆ ಸಾರುವ ಧರ್ಮದ ಅವಶ್ಯಕತೆಯಿದೆ ಎಂದು ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲಕುಮಾರ್‌ ಶಿಂಧೆ ಹೇಳಿದರು.

ಲಿಂಗಾಯತ ಧರ್ಮ ಸಂಸ್ಥಾಪನೆ ದಿನ ನಿಮಿತ್ತ ಕೂಡಲಸಂಗಮದಲ್ಲಿ ನಡೆದಿರುವ 39ನೇ ಶರಣ ಮೇಳ ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಮತ, ಪಂಥಗಳನ್ನು ಅಳಸಿ ಹಾಕಲು ಬಸವಣ್ಣನವರ ತತ್ವಗಳ ಪ್ರತಿಪಾದನೆಗೆ ಹೆಚ್ಚಿನ ಒತ್ತು ಸಿಗಬೇಕಿದೆ ಎಂದು ಹೇಳಿದರು.

ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂದು ದೇಶ ರಚನೆಯಾಗಿಲ್ಲ. ಬಸವೇಶ್ವರರ ಮಾರ್ಗದಲ್ಲಿ ಎಲ್ಲರೂ ಒಂದಾಗಿ ಸಾಗಬೇಕಿದೆ. ನಾನು ಸೊಲ್ಲಾಪುರದ ಸಿದ್ಧರಾಮೇಶ್ವರ ಕ್ಷೇತ್ರಕ್ಕೆ ಹೋಗುತ್ತೇನೆ. ಇಂದು ಬಸವಣ್ಣನವರ ಐಕ್ಯಸ್ಥಳಕ್ಕೆ ಬಂದು ಆಶೀರ್ವಾದ ಪಡೆದಿರುವುದು ಸಂತಸ ತಂದಿದೆ. ನನ್ನ ಬಹುವರ್ಷಗಳ ಕನಸು ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಜಾತಿ, ಧರ್ಮದ ಹೆಸರಿನಲ್ಲಿ ಅಧಿಕಾರ ನಡೆಸಬಾರದು. ದೇಶದಲ್ಲಿರುವ ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಇರುವ ಪ್ರತಿಯೊಬ್ಬರೂ ದೇಶದ ಪುತ್ರರು. 12ನೇ ಶತಮಾನದಲ್ಲಿಯೇ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡುವ ಮೂಲಕ ಎಲ್ಲರೂ ಒಂದೇ ಎಂದು ಸಾರಿದ್ದರು. ಅವರ ಕನಸು ನನಸು ಮಾಡೋಣ ಎಂದರು.

ಇದೇ ವೇಳೆ ಲಿಂಗೈಕ್ಯ ಜಗದ್ಗುರು ಮಾತೆ ಮಹಾದೇವಿ ಅವರ ಸ್ಮರಣಾರ್ಥ ಬಸವಾತ್ಮಜೆ ರಾಷ್ಟ್ರೀಯ ಪ್ರಶಸ್ತಿಯನ್ನು ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಅವರಿಗೆ ವಿತರಿಸಲಾಯಿತು. ₹50 ಸಾವಿರ ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ರಾಜ್ಯಮಟ್ಟದ ಶರಣ ಕಾಯಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹಾಗೂ ಶರಣ ಜ್ಞಾನ ರತ್ನ ಪ್ರಶಸ್ತಿ ಪತ್ರಕರ್ತ ರವಿ ಮೂಕಿ ಅವರಿಗೆ ನೀಡಿ ಗೌರವಿಸಲಾಯಿತು.

ಬಸವಾತ್ಮಜೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ನಾನೊಬ್ಬ ಸಂಗೀತಗಾರ್ತಿಯಾಗಿ ಬಸವ ತತ್ವವನ್ನು ನನ್ನ ಸಂಗೀತದಲ್ಲಿ ಅಳವಡಿಸಿಕೊಳ್ಳುತ್ತಿದ್ದೇನೆ. ಸಂಗೀತಗಾರರು ಸ್ವರ ಭಾಷೆ, ರಾಗ ಭಾಷೆಯ ಬೆನ್ನುಹತ್ತಿ ಹೋಗಬೇಕು. ಕಾಯಕವೇ ಕೈಲಾಸ ತತ್ವವನ್ನು ನಮ್ಮ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಮಾತಿನ ನಡುವೆ ಅನೇಕ ವಚನಗಳ ಗಾಯನ ಮಾಡಿದರು.

ಬಸವ ಧರ್ಮ ಪೀಠದ ಜಗದ್ಗುರು ಮಾತೆ ಗಂಗಾದೇವಿ ಸಾನ್ನಿಧ್ಯ ವಹಿಸಿದ್ದರು. ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ವಿಜಯಾನಂದ ಕಾಶಪ್ಪನವರ ಸೇರಿದಂತೆ ಸಾಹಿತಿಗಳು, ಧಾರ್ಮಿಕ ಮುಖಂಡರು, ರಾಜಕೀಯ ಮುಖಂಡರು ಇದ್ದರು.

2026ರ ರಾಜ್ಯ ಮಟ್ಟದ ಶರಣ ಕಾಯಕ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ದೇಶಭಕ್ತಿ, ರಾಷ್ಟ್ರ ಪ್ರಜ್ಞೆಯ ರಾಜಕಾರಣಿಗಳು, ಆಧ್ಯಾತ್ಮಿಕ ಜ್ಞಾನದ ಗುರುಗಳ ಅವಶ್ಯ ಕತೆ ಇಂದು ಇದೆ. ಅಶಾಶ್ವತವಾದ ಅಧಿಕಾರ, ಹಣ, ಪ್ರಚಾರದ ಭರಾಟೆಯಲ್ಲಿ ನಾವು ಶಾಶ್ವತವಾದ ಆರೋಗ್ಯ ಸಿದ್ದಾಂತಗಳ ಕಡೆ ಗಮನ ಹರಿಸುತ್ತಿಲ್ಲ. ಶಾಶ್ವತವಾದದನ್ನು ಪಡೆಯಲು ವಚನ ಚಿಂತನೆ ಅಗತ್ಯ. ವಚನ ಸಾಹಿತ್ಯದ ಮೂಲಕ ಸಮ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ