ನಾನು ಬಿಜೆಪಿ ಕಟ್ಟಿರುವವನು, ಬೇರೆ ಪಕ್ಷದಿಂದ ಬಂದಿಲ್ಲ

KannadaprabhaNewsNetwork | Published : Dec 27, 2023 1:32 AM

ಸಾರಾಂಶ

ಮಾಜಿ ಸಿಎಂ ಬಂಗಾರಪ್ಪ ರಾಜ್ಯ ರಾಜಕಾರಣದಲ್ಲಿ ಕಾಯಂ ಆಗಿರುವ ಹೆಸರು. ಅವರು ಬಿಜೆಪಿಗೂ ಬಂದಿದ್ದರು. ಬಿಜೆಪಿಗೆ ಬಂದಿದ್ದಾಗ ಎಲ್ಲರ ಪರಿಶ್ರಮದೊಂದಿಗೆ 79 ಸ್ಥಾನ ಗೆದ್ದಿದ್ದೆವು ಎಂದು ಮಾಜಿ‌ ಸಚಿವ ಅರವಿಂದ ಲಿಂಬಾವಳಿ ಸೊರಬದಲ್ಲಿ ನೆನಪಿಸಿಕೊಂಡಿದ್ದಾರೆ.

- ಸೊರಬದಲ್ಲಿ ಎಸ್. ಬಂಗಾರಪ್ಪ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ದಾಗ ಹೇಳಿಕೆ- ಶಾಸನ ಸಭೆಗಳು ಅರ್ಥ ಕಳೆದುಕೊಳ್ಳುತ್ತಿವೆ: ಬಸವರಾಜ ಹೊರಟ್ಟಿ ಬೇಸರ

- ಐದನೇ ಗ್ಯಾರಂಟಿಯೂ ಕೊಡ್ತೇವೆ, ಧೃತಿಗೆಡದಿರಿ: ಮಧು ಬಂಗಾರಪ್ಪ

- - -

ಕನ್ನಡಪ್ರಭ ವಾರ್ತೆ ಶಿವಮೊಗ್ಗಬಂಗಾರಪ್ಪ ಅವರು‌ ರಾಜ್ಯ ರಾಜಕಾರಣದಲ್ಲಿ ಕಾಯಂ ಆಗಿರುವ ಹೆಸರು. ಅವರು ಬಿಜೆಪಿಗೂ ಬಂದಿದ್ದರು. ಬಿಜೆಪಿಗೆ ಬಂದಿದ್ದಾಗ ಎಲ್ಲರ ಪರಿಶ್ರಮದೊಂದಿಗೆ 79 ಸ್ಥಾನ ಗೆದ್ದಿದ್ದೆವು ಎಂದು ಮಾಜಿ‌ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಿನ್ನೆಲೆ ಮಂಗಳವಾರ ಸೊರಬಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಂಗಾರಪ್ಪ ಬಿಜೆಪಿ ಬಂದಾಗ ಬಿಜೆಪಿ -ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಅದಕ್ಕೆ ಬಂಗಾರಪ್ಪ ಅವರು ಕಾರಣೀಭೂತರಾಗಿದ್ದರು. ಆಗ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅವರೊಂದಿಗೆ ನಾನೇ ಓಡಾಡುತ್ತಿದ್ದೆ. ಶಿವಮೊಗ್ಗಕ್ಕೆ ಬಂದ ತಕ್ಷಣ ಕೆಲವು ಸ್ನೇಹಿತರು ನೀವೇನು ಕಾಂಗ್ರೆಸ್‌ಗೆ ಹೋಗ್ತೀರಾ ಅಂದ್ರು. ನಾನು ಬಿಜೆಪಿ ಕಟ್ಟಿರುವವನು, ಬೇರೆ ಪಕ್ಷದಿಂದ ಬಂದಿರುವವನಲ್ಲ. ಈ‌‌ ಪಕ್ಷ ಬಿಟ್ಟುಹೋಗಿ ಕೆಲವರು ಮತ್ತೆ ಬಂದಿದ್ದಾರೆ. ಈ ಜಿಲ್ಲೆಯಲ್ಲೂ ಇದ್ದಾರೆ. ಅಂತಹ ವ್ಯಕ್ತಿ ನಾನಲ್ಲ ಎಂದರು.

- - -ಶಾಸನ ಸಭೆಗಳು ಅರ್ಥ ಕಳೆದುಕೊಳ್ಳುತ್ತಿವೆ: ಬಸವರಾಜ ಹೊರಟ್ಟಿ ಬೇಸರಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಾಸನ ಸಭೆಗಳು ಅರ್ಥ ಕಳೆದುಕೊಳ್ಳುತ್ತಿದ್ದು, ಒಮ್ಮೊಮ್ಮೆ ರಾಜೀನಾಮೆ ನೀಡಿ ಹೋಗಬೇಕಿನಿಸುತ್ತದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ್ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

ಸೊರಬದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆಲ್ಲ ಅಧಿವೇಶನ ಅರ್ಥಪೂರ್ಣವಾಗಿ ನಡೆಯುತ್ತಿತ್ತು. ವಿಧಾನ ಪರಿಷತ್ತಿನಲ್ಲಿ ಖಾದ್ರಿ ಶಾಮಣ್ಣ, ಮಲ್ಲಿಕಾರ್ಜುನ ಅವರಂತಹ ಧೀಮಂತ ವ್ಯಕ್ತಿಗಳು ಇದ್ದರು. ವಿಷಯಾಧಾರಿತ ಚರ್ಚೆಗಳು ನಡೆಯುತ್ತಿದ್ದವು. ಆದರೀಗ ಶಾಸನ ಸಭೆಯೆಂದರೆ ಅವರನ್ನು ಇವರು ಬಯ್ಯೋದು, ಇವರನ್ನು ಅವರು ಬಯ್ಯೊದು ಅಷ್ಟೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಈ ಹಿಂದೆ ಸಭಾಪತಿಗಳ ಕುರ್ಚಿಗೆ ಗೌರವ ಸಿಗುತ್ತಿತ್ತು. ಆದರೀಗ ಸಭಾಪತಿಗಳ ಕುರ್ಚಿಗೆ ಗೌರವ ಸಿಗುತ್ತಿಲ್ಲ. ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಅಧಿವೇಶನ ಅರ್ಥ ಕಳೆದುಕೊಳ್ಳುತ್ತಿದೆ ಎಂದರು.

ಸದನವನ್ನು ಸರಿಪಡಿಸಲು ನಾನು ಬಹಳ ಪ್ರಯತ್ನ ಪಟ್ಟಿದ್ದೇನೆ. ಆ ಪ್ರಯತ್ನ ಫಲಕಾರಿಯಾಗಿಲ್ಲ ಎಂಬುದು ಬೇಸರದ ಸಂಗತಿ. ಹೀಗಾಗಿ, ಒಮ್ಮೊಮ್ಮೆ ರಾಜೀನಾಮೆ ನೀಡಿ ಹೋಗೋಣ ಎಂದೆನಿಸುತ್ತದೆ. ಇದನ್ನು ಒಮ್ಮೆ ಹೇಳಿದ್ದೆ ಎಂದು ಹೇಳಿದರು.

ಶಾಸಕರಿಗೆ ಕಾರ್ಯಾಗಾರ:ಹೊಸ ಶಾಸಕರಿಗೆ ಕಾರ್ಯಾಗಾರ ಅವಶ್ಯಕತೆ ‌ಇದೆ. ಯಾವುದೇ ಕಾರ್ಯಾಗಾರ ಮಾಡಿದರೂ ಬದಲಾವಣೆ ಕಾಣಿಸಲ್ಲ ಎಂದೂ ಅನಿಸುತ್ತೆ. ಒಟ್ಟಾರೆ ವ್ಯವಸ್ಥೆಯೇ ಹಾಳಾಗಿಹೋಗಿದೆ ಎಂದು ಬೇಸರಿಸಿದರು.- - -

ಐದನೇ ಗ್ಯಾರಂಟಿಯೂ ಕೊಡ್ತೇವೆ, ಧೃತಿಗೆಡದಿರಿ: ಮಧು ಬಂಗಾರಪ್ಪ

ಕನ್ನಡಪ್ರಭ ವಾರ್ತೆ ಶಿವಮೊಗ್ಗನಾವೇನಾದರೂ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ಜಾರಿಗೆ ತರುತ್ತೇವೆ ಎಂದಿದ್ವಿ. ಅದರಂತೆ ಈಗ ಐದು ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಈಗ ಯುವನಿಧಿಯನ್ನು ಜಾರಿಗೆ ತರುತ್ತೇವೆ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.ಸೊರಬದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನಿಂದ ಐದನೇ ಗ್ಯಾರಂಟಿ ‌ಯುವನಿಧಿ ನೋಂದಣಿ ಆರಂಭವಾಗಿದೆ. ಯುವಕರು ಕಷ್ಟಪಟ್ಟು ಓದಿರುತ್ತಾರೆ. ಕೆಲಸ ಸಿಕ್ಕಿರಲ್ಲ. ಬಹಳಷ್ಟು ಯುವಕರಿಗೆ ಖರ್ಚಿಗೂ ಹಣ ಇರಲ್ಲ. ಮನೆಯಲ್ಲಿ ಹಣ ಕೇಳಲು ಆಗದ ಸ್ಥಿತಿಯೂ ಇರುತ್ತದೆ. ಅಮಥ ಯುವಕರು ಧೃತಿಗೆಡೋದು ಬೇಡ. ಡಿಪ್ಲೊಮಾ ಪದವೀಧರರಿಗೆ ₹1500, ಪದವೀಧರರಿಗೆ ₹3 ಸಾವಿರ ಕೊಡ್ತೇವೆ. ಅರ್ಹ ಯುವಕರು ನೋಂದಣಿ ಮಾಡಿಕೊಳ್ಳಬೇಕು. ಜ.12ರಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಯ ಕಾರ್ಯಕ್ರಮ ಉದ್ಘಾಟನೆ ಆಗಲಿದೆ. ಆ ದಿನ ಎಲ್ಲರ ಅಕೌಂಟ್‌ಗೆ ಹಣ ಹೋಗಲಿದೆ ಎಂದು ತಿಳಿಸಿದರು.ರೈತರ ಬಗ್ಗೆ ಶಿವಾನಂದ ಪಾಟೀಲ್‌ ಹೇಳಿಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಸರ್ಕಾರ ರೈತ ಹಾಗೂ ಜನಪರವಾಗಿ ಇದೆ. ಸಚಿವ ಶಿವಾನಂದ ಪಾಟೀಲ್ ಅವರು ಬೇರೆ ಭಾವನೆ ಮೇಲೆ ಹೇಳಿರುತ್ತಾರೆ. ಅವರ ಮನಸಾರೆ ಯಾರು ಹೇಳಿರಲ್ಲ ಎಂದು ಪ್ರತಿಕ್ರಿಯಿಸಿದರು.ನನ್ನ ಇಲಾಖೆಯಲ್ಲಿ ಇನ್ನೂ ಅನೇಕ ಸಮಸ್ಯೆ ಇವೆ. ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.- - -ಫೋಟೋ: ಮಧು ಬಂಗಾರಪ್ಪ

ಫೋಟೋ: ಅರವಿಂದ ಲಿಂಬಾವಳಿಫೋಟೋ: ಬಸವರಾಜ ಹೊರಟ್ಟಿ, ಸಭಾಪತಿ, ವಿಧಾನ ಪರಿಷತ್ತು

Share this article