ಡಿಕೆಶಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ವಿಚಾರ ನನಗೆ ಗೊತ್ತಿಲ್ಲ

KannadaprabhaNewsNetwork |  
Published : Nov 06, 2025, 01:15 AM IST
5ಕೆಆರ್ ಎಂಎನ್ 2.ಜೆಪಿಜಿಶಾಸಕ ಬಾಲಕೃಷ್ಣ | Kannada Prabha

ಸಾರಾಂಶ

ನನಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಂಪುಟ ವಿಸ್ತರಣೆ ಯಾವಾಗ ಅಂತ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು.

ಕನ್ನಡಪ್ರಭ ವಾರ್ತೆ ರಾಮನಗರ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನ. 26ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ವಿಚಾರ ನನಗೆ ತಿಳಿದಿಲ್ಲ. ಹೈಕಮಾಂಡ್ ತೀರ್ಮಾನ ಮಾಡಿದರೆ ನಮಗೂ ಕರೆ ಮಾಡಿ ಹೇಳುತ್ತಾರೆ. ಪ್ರಮಾಣ ವಚನ ಸ್ವೀಕರಿಸುವಾಗ ನಾನೂ ಹೋಗುತ್ತೇನೆ ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯೆ ನೀಡಿದರು.

ಮಾಗಡಿ ಕ್ಷೇತ್ರ ವ್ಯಾಪ್ತಿಯ ಜಾಲಮಂಗಲ, ಅಕ್ಕೂರು ಹಾಗೂ ದೊಡ್ಡ ಗಂಗವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಹೈಕಮಾಂಡ್ ತೀರ್ಮಾನವೇ ಅಂತಿಮ. ಸಂಪುಟ ವಿಸ್ತರಣೆ ಯಾವಾಗ ಅಂತ ಮುಖ್ಯಮಂತ್ರಿಗಳಿಗೆ ಮಾತ್ರ ಗೊತ್ತು. ಬಹುಶಃ ಡಿಸೆಂಬರ್ ಗೆ ವಿಸ್ತರಣೆ ಆಗುತ್ತದೆ ಅಂತ ಊಹಾಪೋಹ ಇದೆ ಎಂದರು.

ಮುಖ್ಯಮಂತ್ರಿಗಳ ಹುದ್ದೆಗ ಆಕಾಂಕ್ಷಿಗಳ ಹೆಚ್ಚಳ ವಿಚಾರವಾಗಿ ಕೇಳಿದ ಪ್ರಶ್ನೆಗೆ ನಮ್ಮ ಪಕ್ಷದಲ್ಲಿ ಎಲ್ಲರೂ ಸಮರ್ಥರಿದ್ದಾರೆ. ಡಿ.ಕೆ.ಶಿವಕುಮಾರ್ , ಜಿ. ಪರಮೇಶ್ವರ್, ಜಾರಕಿಹೋಳಿ, ಎಂ.ಬಿ.ಪಾಟೀಲ್ ಎಲ್ಲರೂ ಸಮರ್ಥರಿದ್ದಾರೆ. ಅವಕಾಶ ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಹೈಕಮಾಂಡ್ ನದೆ ಅಂತಿಮ ತೀರ್ಮಾನ. ಮಕ್ಕಳು ಅತ್ತರೆ ತಾನೆ ತಾಯಿ ಹಾಲು ಕುಡಿಸೋದು. ಹಾಗೆ ಕೆಲವರು ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್ ರವರು ನೀರಾವರಿ ವಿಚಾರದಲ್ಲಿ ಸಭೆ ಮಾಡಲು ಹೋಗುತ್ತಿದ್ದಾರೆ. ಮೇಕೆದಾಟು ಬಗ್ಗೆ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಇದೆ. ಹಾಗಾಗಿ ವಕೀಲರು, ಅಧಿಕಾರಿಗಳ ಜೊತೆ ಚರ್ಚೆ ಮಾಡಲು ಹೋಗಿದ್ದಾರೆ. ಯಾವುದೇ ರಾಜಕೀಯ ಚರ್ಚೆಗೆ ಅವರು ಹೋಗಿಲ್ಲ ಎಂದು ತಿಳಿಸಿದರು.

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ವಿಚಾರವಾಗಿ ಕೇಳಿದ ಪ್ರಶ್ನೆಗೆ ಎಲ್ಲಾ ಪಕ್ಷದಲ್ಲೂ ಬಣ ರಾಜಕೀಯ ಇದೆ. ಆದರೆ, ನಮ್ಮಲ್ಲಿ ಹೈಕಮಾಂಡ್ ಸ್ಟ್ರಾಂಗ್ ಆಗಿ ಇದೆ. ಎಲ್ಲಾ ಬಣಗಳು ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತವೆ ಎಂದು ಹೇಳಿದರು.

ರಾಜ್ಯದಲ್ಲಿ ನವೆಂಬರ್ ಅಂತ್ಯಕ್ಕೆ ಅಹಿಂದ ಸಮಾವೇಶ ನಡೆಸುವ ಬಗ್ಗೆ ಎಲ್ಲರೂ ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹೈಕಮಾಂಡ್ ಪ್ರಬಲವಾಗಿದೆ. ಅಂತಿಮವಾಗಿ ಏನೇ ತೀರ್ಮಾನ ಇದ್ದರು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಬಾಲಕೃಷ್ಣ ತಿಳಿಸಿದರು.

5ಕೆಆರ್ ಎಂಎನ್ 2.ಜೆಪಿಜಿ

ಶಾಸಕ ಬಾಲಕೃಷ್ಣ

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ