ಅಡಿಗರು ಹೆಗಲ ಮೇಲೆ ಕೈ ಇಟ್ಟಾಗ ಆಕಾಶದಲ್ಲಿ ತೇಲಾಡಿದ್ದೆ: ಬಿ.ಆರ್‌.ಲಕ್ಷ್ಮಣರಾವ್

KannadaprabhaNewsNetwork | Published : Dec 9, 2024 12:49 AM

ಸಾರಾಂಶ

ಕೊಪ್ಪೀಕರ್‌ ರಸ್ತೆಯಲ್ಲಿನ ಸಾಹಿತ್ಯ ಭಂಡಾರದ ಅನಂತ ಮಹಡಿಯಲ್ಲಿ ಭಾನುವಾರ ಬೆಳಗ್ಗೆ ಇನ್ನೂ ಚಳಿಯ ಗುಂಗು. ಕಿರಿಯರು, ಹಿರಿಯರು ಸೇರಿದಂತೆ ಕಾವ್ಯಾಸಕ್ತರ ದಂಡೇ ಅಲ್ಲಿ ಸೇರಿತ್ತು.

ಹುಬ್ಬಳ್ಳಿ: ಕವಿ ಗೋಪಾಲಕೃಷ್ಣ ಅಡಿಗರು ನನ್ನ ಹೆಗಲ ಮೇಲೆ ಕೈ ಇಟ್ಟಾಗ ಅಕ್ಷರಶಃ ಆಕಾಶದಲ್ಲಿ ತೇಲಾಡಿದ್ದೆ....

ನಾಡಿನ ಹೆಸರಾಂತ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರು ತಾವು ಬರೆಯಲು ಆರಂಭಿಸಿದಾಗ ತಮ್ಮನ್ನು ಬೆಳೆಸಿದ ಹಿರಿಯ ಸಾಹಿತಿಗಳನ್ನು ಮನದುಂಬಿ ಸ್ಮರಿಸುತ್ತ, ಅನುಭವಗಳನ್ನು ಸುರುಳಿಯಾಗಿ ಬಿಚ್ಚಿಕೊಂಡಾಗ ಎದುರಿಗಿದ್ದವರಲ್ಲಿ ಕಾವ್ಯಾನುಭೂತಿಯ ಒಸುಗೆ ಬುಗ್ಗೆಯಾಗಿ ಚಿಮ್ಮಿತು.

ನಗರದ ಕೊಪ್ಪೀಕರ್‌ ರಸ್ತೆಯಲ್ಲಿನ ಸಾಹಿತ್ಯ ಭಂಡಾರದ ಅನಂತ ಮಹಡಿಯಲ್ಲಿ ಭಾನುವಾರ ಬೆಳಗ್ಗೆ ಇನ್ನೂ ಚಳಿಯ ಗುಂಗು. ಕಿರಿಯರು, ಹಿರಿಯರು ಸೇರಿದಂತೆ ಕಾವ್ಯಾಸಕ್ತರ ದಂಡೇ ಅಲ್ಲಿ ಸೇರಿತ್ತು. ಅವರೊಂದಿಗೆ ಲಕ್ಷ್ಮಣರಾವ್ ಸಂವಾದಿಯಾಗಿದ್ದರು.

ಹಿರಿಯ ಕವಿಗಳ ಕವಿತೆ, ಸಾಹಿತ್ಯವನ್ನು ಕಿರಿಯರು ಓದುವ ಮೂಲಕ ಕಾವ್ಯ ಪರಂಪರೆಯೊಂದಿಗೆ ಅನುಸಂಧಾನ ಮಾಡಬೇಕು. ಅದರಂತೆ ಹಿರಿಯ ಸಾಹಿತಿಗಳು ಕೂಡ ಕಿರಿಯರ ಬೆನ್ನುತಟ್ಟಿ ಕಾವ್ಯಕೃಷಿಗೆ ಪ್ರೋತ್ಸಾಹಿಸಬೇಕು. ಅಂದಾಗ ಮಾತ್ರ ಕಾವ್ಯ ನಿರಂತರತೆ ಪಡೆದುಕೊಳ್ಳುತ್ತದೆ ಎನ್ನುತ್ತ ತಮ್ಮನ್ನು ಬೆಳೆಸಿದ ಅನೇಕ ಹಿರಿಯ ಸಾಹಿತಿಗಳ ಪ್ರಸಂಗಗಳನ್ನು ಮೆಲುಕು ಹಾಕಿದರು.

ನಾನು ಬರೆಯಲು ಶುರು ಮಾಡಿದಾಗ ಕನ್ನಡ ಸಾಹಿತ್ಯದಲ್ಲಿ ಗೋಪಾಲ ಕೃಷ್ಣ ಅಡಿಗರದು ದೊಡ್ಡ ಹೆಸರು. ಆಗ ಅವರನ್ನು ನೋಡುವುದೇ ನಮಗೆಲ್ಲ ಒಂದು ಭಾಗ್ಯ. ಹೀಗಿರುವಾಗ ಒಂದುದಿನ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ, ಅಡಿಗರು ನನ್ನ ಹೆಗಲ ಮೇಲೆ ಕೈಯಿಟ್ಟು ಲಕ್ಷ್ಮಣರಾವ್ ಚೆನ್ನಾಗಿ ಬರೀತಿಯಪ್ಪಾ, ಹೀಗೆಯೇ ಮುಂದುವರೆಸು ಎಂದು ಬೆನ್ನುತಟ್ಟಿದರು. ಅದು ನನ್ನ ಜೀವನದಲ್ಲಿ ಅವಿಸ್ಮರಣೀಯ ಘಟನೆ. ಮುಂದೆ ನನ್ನ ಬರವಣಿಗೆಗೆ ಅಡಿಗರು ಪ್ರೇರಣೆಯಾದರು. ಹೀಗೆ ಅನಂತಮೂರ್ತಿ, ಲಂಕೇಶ್ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ನನಗೆ ಪ್ರೇರಣೆಯಾಗಿದ್ದಾರೆ ಎಂದು ಸ್ಮರಿಸಿದರು.

ಓರ್ವ ಕವಿ, ಸಾಹಿತಿ ಬೆಳೆಯುವಲ್ಲಿ ಪ್ರಕಾಶಕರ ಪಾತ್ರವೂ ಪ್ರಮುಖವಾಗಿದೆ. ಸಾಹಿತ್ಯ ಓದುಗನಿಗೆ ತಲುಪದಿದ್ದರೆ, ಅದು ಎಷ್ಟೇ ಸತ್ವಶಾಲಿಯಾಗಿದ್ದರೂ ಪ್ರಯೋಜನ ಆಗುವುದಿಲ್ಲ. ಹಾಗಾಗಿ ಸಾಹಿತಿ, ಪ್ರಕಾಶಕ ಜತೆಯಾಗಿಯೇ ಓದುಗರ ಮಧ್ಯ ನಿಲ್ಲುವುದು ಇಂದು ಅನಿವಾರ್ಯವಿದೆ. ಈ ಹಿನ್ನಲೆಯಲ್ಲಿ ಅನಂತ ಮಹಡಿಯ ಸಾಹಿತ್ಯಿಕ ಸಂವಾದ ನಿಜಕ್ಕೂ ಸ್ತುತ್ಯಾರ್ಹ. ಹೀಗೆಯೇ ಇದು ನಿರಂತರವಾಗುವ ಮೂಲಕ ಸಾಹಿತ್ಯ ಸೇವೆಯ ಜಗಲಿಯಾಗಲಿ ಎಂದು ಕವಿ ಲಕ್ಷ್ಮಣರಾವ್‌ ಹಾರೈಸಿದರು.

ಸಾಹಿತ್ಯ ಪ್ರಕಾಶನದ ಎಂ.ಸುಬ್ರಹ್ಮಣ್ಯ, ಡಾ.ಶಾಮಸುಂದರ ಬಿದರಕುಂದಿ, ನಂದಾ ಕುಲಕರ್ಣಿ, ರಂಜಾನ್‌ ಹೆಬಸೂರ, ವಿವೇಕ, ಮೋಹನಚಂದ ಜೈನ್‌, ಡಾ.ರಚನಾ ನಾಡಗೇರ, ಸೀಮಾ ಉಪಾಧ್ಯೆ, ಪವನ ಬಾವಿಕಟ್ಟಿ, ಸಂತೋಷ ಕರ್ಕಿ, ಸರ್ವಮಂಗಳಾ ಆಚಾರ್‌ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಅನಂತ ಮಹಡಿಯಲ್ಲಿ ಇದು ನಾಲ್ಕನೇ ಸಾಹಿತ್ಯಿಕ ಸಂವಾದ. ಈ ಹಿಂದೆ ವಸುಧೇಂದ್ರ, ಗಂಗಾವತಿ ಪ್ರಾಣೇಶ, ಎಸ್.ಎಲ್.ಭೈರಪ್ಪ ಅವರು ಇಲ್ಲಿ ಓದುಗರೊಂದಿಗೆ ಸಾಹಿತ್ಯ ಸಂವಾದ ನಡೆಸಿದ್ದಾರೆ.

Share this article