ನನಗೀಗ ಹೊಸ ಜೀವನ ಸಿಕ್ಕಿದೆ: ಎಚ್.ಡಿ.ಕುಮಾರಸ್ವಾಮಿ

KannadaprabhaNewsNetwork |  
Published : Mar 25, 2024, 12:56 AM ISTUpdated : Mar 25, 2024, 08:56 AM IST
HD Kumaraswamy

ಸಾರಾಂಶ

ಮೂರು ದಿನಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚೆನ್ನೈ ನಗರದ ಆಸ್ಪತ್ರೆಯಿಂದ ಶನಿವಾರ ಮನೆಗೆ ಮರಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೂರು ದಿನಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಚೆನ್ನೈ ನಗರದ ಆಸ್ಪತ್ರೆಯಿಂದ ಶನಿವಾರ ಮನೆಗೆ ಮರಳಿದರು. 

ಜೆ.ಪಿ.ನಗರದ ತಮ್ಮ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮಗೆ ಹೊಸ ಜೀವನ ಸಿಕ್ಕಿದೆ. ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ ಎಂದರು. 

ನಾನು ಆಪರೇಷನ್‌ಗೆ ತೆರಳಿದ ಸಂದರ್ಭದಲ್ಲಿ ರಾಜ್ಯಾದ್ಯಂತ ವಿವಿಧ ದೇವಾಲಯಗಳಲ್ಲಿ ನನ್ನ ಹಿತೈಷಿಗಳು ಮತ್ತು ಅಭಿಮಾನಿಗಳು ಪೂಜೆ ಸಲ್ಲಿಸಿದ್ದರು. ಆ ದೇವರ ಅನುಗ್ರಹ ಹಾಗೂ ಜನರ ಪೂಜೆ ಫಲಿಸಿದೆ. 

ನಿಮಗೆ ಸಾಯಿ ಬಾಬಾನೇ ಆಪರೇಷನ್ ಮಾಡಿದ್ದಾರೆ ಎಂದು ವೈದ್ಯ ಡಾ.ಸಾಯಿ ಸತೀಶ್‌ ಹೇಳಿದ್ದಾಗಿ ಕುಮಾರಸ್ವಾಮಿ ತಿಳಿಸಿದರು. ನನ್ನ ಶಸ್ತ್ರ ಚಿಕಿತ್ಸೆಯಲ್ಲಿ ಹಂಗೇರಿ ದೇಶದ ವೈದ್ಯರು ಪಾಲ್ಗೊಂಡಿದ್ದರು. 

ವೈದ್ಯಕೀಯ ರಂಗದಲ್ಲಿ ಹೊಸ ಆವಿಷ್ಕಾರಗಳು ಜನರ ಪ್ರಾಣ ಉಳಿಸಲು ಅನುಕೂಲವಾಗಿವೆ ಎಂದು ನುಡಿದರು. ಮೂರು ದಿನಗಳ ಹಿಂದೆ ತಮಿಳುನಾಡಿನ ಚೆನ್ನೈ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಕುಮಾರಸ್ವಾಮಿ ಅವರಿಗೆ ಹೃದಯದ ಶಸ್ತ್ರಚಿಕಿತ್ಸೆ ನಡೆದಿತ್ತು. 

ಭಾನುವಾರ ವಿಶೇಷ ವಿಮಾನದಲ್ಲಿ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಜೆ.ಪಿ.ನಗರ ನಿವಾಸಕ್ಕೆ ತೆರಳಿದರು.ಸ್ಪರ್ಧೆಗೆ ಒತ್ತಾಯಿಸಿ ಎಚ್‌ಡಿಕೆ

ಸ್ಪರ್ಧೆಗೆ ಒತ್ತಾಯಿಸಿ ಎಚ್ಡಿಕೆ ಮನೆಗೆ ಕಾರ್ಯಕರ್ತರ ದಂಡು

ಕನ್ನಡಪ್ರಭ ವಾರ್ತೆ ಬೆಂಗಳೂರು

ಶಸ್ತ್ರಚಿಕಿತ್ಸೆಗೊಳಗಾಗಿ ಮನೆಗೆ ಮರಳಿದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನೋಡಲು ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಿ, ಮನೆಯ ಮುಂದೆ ಕುಳಿತು ಜೈಕಾರ ಕೂಗಿದ ಪ್ರಸಂಗ ನಡೆಯಿತು. 

ಅದರಲ್ಲೂ ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಾಗಿಯೇ ಜಮಾಯಿಸಿದ್ದರು.ಈ ವೇಳೆ ಮಂಡ್ಯ ಜಿಲ್ಲೆಯ ಕಾರ್ಯಕರ್ತರು, ನಾಯಕರು ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ನೀವೇ ಆಗಬೇಕು ಎಂದು ನಿವಾಸದ ಎದುರಿನ ರಸ್ತೆಯಲ್ಲಿಯೇ ಕೂತು ಘೋಷಣೆ ಕೂಗಿದರು. 

ಕುಮಾರಸ್ವಾಮಿ ಅವರೇ ಮಂಡ್ಯ ಕ್ಷೇತ್ರದ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದರು. ಜೆಡಿಎಸ್‌ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಅಭಿಮಾನಿಗಳ, ಕಾರ್ಯಕರ್ತರ ಮನವೊಲಿಕೆಗೆ ಪ್ರಯತ್ನಿಸಿದರು. ಸಮಾಧಾನ ಮಾಡುತ್ತಿದ್ದ ವೇಳೆ ಎಚ್‌.ಡಿ.ಕುಮಾರಸ್ವಾಮಿ ಬಂದು ಕೊನೆಗೆ ಅಭಿಮಾನಿಗಳನ್ನು ಮನವೊಲಿಕೆ ಮಾಡಿದರು.

ಈ ಸಂದರ್ಭದಲ್ಲಿ ಕುಮಾರಸ್ವಾಮಿ, ಹೆಚ್ಚು ಆಯಾಸ ಮಾಡಿಕೊಳ್ಳಬಾರದು, ಹೆಚ್ಚು ಮಾತನಾಡಬಾರದು ಎಂಬ ವೈದ್ಯರ ಸಲಹೆಯನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. 

ಮಂಡ್ಯದಲ್ಲಿ ನಮಗೆ ವಿಶೇಷ ಪ್ರೀತಿ ವಿಶ್ವಾಸ ಸಿಕ್ಕಿದೆ. ನಾನು ಈ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ನನಗೆ ಈವರೆಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದು, ಆರೋಗ್ಯದ ಜತೆಗೆ ಪಕ್ಷದ ಕೆಲಸ, ಜನರ ಸೇವೆ ಮಾಡಬೇಕಿದೆ ಎಂದರು.

ಪಕ್ಷದಲ್ಲಿ ದೊಡ್ಡ ನಾಯಕರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಬೆಳೆದವರು ನಮ್ಮನ್ನು ಬೀದಿಯಲ್ಲಿ ನಿಲ್ಲಿಸಿ ಹೋಗಿದ್ದಾರೆ. ನಿಮ್ಮ ಆಸೆಗೆ ನಿರಾಸೆ ಮಾಡಲ್ಲ ಎಂದು ಈಗಾಗಲೇ ಹೇಳಿದ್ದೇನೆ. 

ಹುಟ್ಟಿದ್ದು ಹಾಸನ ಜಿಲ್ಲೆಯಾದರೂ, ರಾಜಕೀಯ ಜನ್ಮ ಕೊಟ್ಟಿದ್ದು ರಾಮನಗರ ಜಿಲ್ಲೆಯಾಗಿದೆ. ಜೀವಕ್ಕೆ ಜೀವವಾಗಿ ನನ್ನನ್ನು ಪೊರೆದು ಸಲಹುತ್ತಿರುವ ಜಿಲ್ಲೆ ಮಂಡ್ಯ. 

ಈ ನೆಲವನ್ನು, ಈ ಜನರ ಪ್ರೀತಿ ವಿಶ್ವಾಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ಸೋಮವಾರ ಚನ್ನಪಟ್ಟಣ ಕ್ಷೇತ್ರದ ಮುಖಂಡರನ್ನು ಕರೆಸಿ ಮಾತನಾಡಿ, ಯಾವುದೇ ಕಾರಣಕ್ಕೂ ನಿಮಗೆ ನಿರಾಶೆ ಮಾಡಲ್ಲ ಎಂದು ಭರವಸೆ ನೀಡಿದರು.

PREV

Recommended Stories

ಮಾಧ್ಯಮ ಸಾಧಕರಿಗೆ ನ್ಯೂ ಇಂಡಿಯನ್‌ ಟೈಮ್ಸ್‌ ಪ್ರಶಸ್ತಿ
ಡಿಕೆಶಿ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಸಂಶಯ ಸರಿಯಲ್ಲ : ಸತೀಶ್‌