ಚನ್ನಪಟ್ಟಣ ತಾಲೂಕಿನಲ್ಲಿ ಪ್ರತಿನಿತ್ಯ 5 ಲಕ್ಷ ಲಿ.ಹಾಲು ಉತ್ಪಾದನೆ ಗುರಿ । ಹಸುಕೊಳ್ಳಲು ರೈತರಿಗೆ ಸಾಲ ಸೌಲಭ್ಯಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನನಗೆ ಬಮೂಲ್ ಅಧ್ಯಕ್ಷನಾಗಬೇಕೆಂದು ಎಳ್ಳಷ್ಟು ಆಸೆ ಇರಲಿಲ್ಲ, ಬೇರೆಯವರಿಗೆ ಅವಕಾಶ ನೀಡೋಣ ಎಂದುಕೊಂಡಿದ್ದೆ. ಆದರೆ, ಎಲ್ಲ ನಿದೇಶಕರು ಹಾಗೂ ಮುಖಂಡರ ಒತ್ತಾಯ ಮಾಡಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದರು ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಸಮಾಲೋಚನೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿನಿತ್ಯ ಕೆಎಂಎಫ್‌ನಲ್ಲಿ 1.05 ಕೋಟಿ ಹಾಲು ಉತ್ಪಾದನೆ ಆಗುತ್ತದೆ, ಅದೇ ರೀತಿ ಬಮೂಲ್‌ನಲ್ಲಿ 17.5 ಲಕ್ಷ ಹಾಲು ಉತ್ಪಾದನೆ ಆಗುತ್ತದೆ. ಮಾರುಕಟ್ಟೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಇದೆ. ರೈತರ ಸಮಸ್ಯೆಗಳನ್ನು ಅರಿಯುವ ಜತೆಗೆ ಅದನ್ನು ಪರಿಹರಿಸಲು ಡೇರಿ ಮಟ್ಟದಿಂದ ಹಿಡಿದು ಅಧಿಕಾರಿಗಳು, ನಿರ್ದೇಶಕರು ಎಲ್ಲರ ಸಭೆ ನಡೆಸುತ್ತಿದ್ದೇನೆ. ಹಾಲು ಉತ್ಪಾದನೆ ಹೆಚ್ಚಿಸುವ ಜತೆಗೆ ಮಾರುಕಟ್ಟೆಯನ್ನು ಸಹ ದ್ವಿಗುಣಗೊಳಿಸಬೇಕಿದೆ. ನಾನು ಮೊದಲಿನಿಂದಲೂ ರೈತರ ಒಡನಾಡಿಯಾಗಿದ್ದು, ರೈತಪರ ಚಿಂತನೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.5 ಲಕ್ಷ ಲೀ. ಉತ್ಪಾದನೆ ಗುರಿ:ಚನ್ನಪಟ್ಟಣ ತಾಲೂಕಿನಿಂದ ಬಮೂಲ್‌ಗೆ ಪ್ರತಿನಿತ್ಯ 3.10 ಲೀ. ಹಾಲು ಉತ್ಪಾದನೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನಿಂದ 5 ಲಕ್ಷ ಲೀ. ಹಾಲು ಉತ್ಪಾದಿಸುವ ಗುರಿ ಇದೆ. ಈ ಹಿನ್ನೆಲೆಯಲ್ಲಿ ಹೈನುಗಾರರಿಗೆ ಉತ್ತೇಜನ ನೀಡಲು, ಹಸುಗಳನ್ನು ಕೊಳ್ಳಲು ವರ್ಷಕ್ಕೆ ಶೇ. 3ರಷ್ಟು ಬಡ್ಡಿ ದರದಲ್ಲಿ ಬಿಡಿಸಿಸಿ ಬ್ಯಾಂಕ್‌ನಿಂದ 1.80 ಲಕ್ಷ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಒಂದು ಹಸು ಇರುವವರು ಮತ್ತೆರಡು ಹಸುಗಳನ್ನು ಕೊಂಡು ಆರ್ಥಿಕವಾಗಿ ಸಬಲರಾಗುವ ಜತೆಗೆ ಒಕ್ಕೂಟವನ್ನು ಬಲಗೊಳಿಸಿ ಎಂದರು.ಕಾಲ್‌ಸೆಂಟರ್ ಸ್ಥಾಪನೆ:
ರೈತರಿಗೆ ನೆರವು ನೀಡುವ ನಿಟ್ಟಿನಲ್ಲಿ ಆ. 15ರಂದು ಕಾಲ್ ಸೆಂಟರ್ ಅನ್ನು ಉದ್ಘಾಟಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗುವ ಜತೆಗೆ ಮಾರುಕಟ್ಟೆ ವಿಸ್ತರಣೆಗೂ ನೆರವಾಗಲಿದೆ. ನಂದಿನಿ ಉತ್ಪನಗಳನ್ನು ಶೇಖರಿಸಲು ಅಲ್ಲಲ್ಲಿ ವೇರ್‌ಹೌಸ್ ನಿರ್ಮಾಣ ಮಾಡಲಾಗುವುದು. ಕೆಎಂಎಫ್‌ನಲ್ಲಿ 167 ಉತ್ಪನ್ನಗಳಿದ್ದು, ಡೇರಿ ಸೆಕ್ರೆಟರಿಗಳು ಅವುಗಳ ಮಾರುಕಟ್ಟೆ ಮಾಡಲು ಆಸಕ್ತಿ ವಹಿಸಿ. ಇದರಿಂದ ನೀವು ಸಹ ಆರ್ಥಿಕವಾಗಿ ಬಲಿಷ್ಠರಾಗಬಹುದು ಎಂದರು.ಶಾಸಕ ಸಿ.ಪಿ. ಯೋಗೇಶ್ವರ್ ಮಾತನಾಡಿ, ಹೈನೋದ್ಯಮ ಬಹಳ ಶ್ರಮದ ಕೆಲಸವಾಗಿದ್ದು, ಇದರಿಂದ ತಾಲೂಕಿನ ಸಣ್ಣ, ಮಧ್ಯಮ ರೈತರು ಬದುಕು ಕಟ್ಟಿದ್ದಾರೆ. ಕ್ಷೀರೋಧ್ಯಮ ಇನ್ನಷ್ಟು ಹೆಚ್ಚು ಬಲಿಷ್ಟ ಆಗಬೇಕು. ಎಲ್ಲ ಕಡೆಗಿಂತ ನಮ್ಮಲ್ಲೇ ಹಾಲಿಗೆ ಕಡಿಮೆ ದರವಿದೆ. ರೈತರ ಹಾಲಿಗೆ ಇನ್ನಷ್ಟು ದರ ಹೆಚ್ಚಿಸಿ. ಮಾರುಕಟ್ಟೆ ಇನ್ನಷ್ಟು ವಿಸ್ತರಿಸಬೇಕು. ಮುಂದಿನ ದಿನಗಳಲ್ಲಿ ಹೈನೋದ್ಯಮದಲ್ಕಿ ಇನ್ನಷ್ಟು ಬದಲಾವಣೆ ಆಗಲಿದೆ. ಡೇರಿ ಅಧ್ಯಕ್ಷರು ಕಾರ್ಯದರ್ಶಿಗಳು ರೈತರ ಹಿತ ಕಾಯುವ ಕೆಲಸ ಮಾಡಬೇಕು. ತಾಲೂಕಿನಲ್ಲಿ ಫೀಡ್ಸ್ ಫ್ಯಾಕ್ಟರಿ ನಿರ್ಮಿಸಬೇಕು ಎಂದು ಮನವಿ ಮಾಡಿದರು.
ಎಂಎಲ್‌ಸಿ ಎಸ್.ರವಿ ಮಾತನಾಡಿ, ಚನ್ನಪಟ್ಟಣ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕು ಎಂಬ ಹೆಮ್ಮೆ ಇದೆ. ಇಲ್ಲಿನ ರೈತರು ಬಹಳ ಶ್ರಮಜೀವಿಗಳು. ಶಾಸಕ ಸಿ.ಪಿ.ಯೋಗೇಶ್ವರ್ ಮಾಡಿದ ನೀರಾವರಿ ಯೋಜನೆ ಹೆಚ್ಚು ಹಾಲು ಉತ್ಪಾದನೆಗೆ ಕಾರಣವಾಗಿದೆ. ಹೈನೋದ್ಯಮಕ್ಕೆ ಉತ್ತೇಜನ ನೀಡಲು ಬಮೂಲ್‌ಗೆ ಸುರೇಶ್ ಬಂದಿದ್ದು, ರೈತರ ಹಿತಕಾಯುವ ಕೆಲಸ ಮಾಡಲಿದ್ದಾರೆ ಎಂದರು. ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾಜಿ ಶಾಸಕ ಎಂ.ಸಿ. ಅಶ್ವತ್ಥ್, ಬಮೂಲ್ ಉಪಾಧ್ಯಕ್ಷ ರಾಜಣ್ಣ, ನಿರ್ದೇಶಕರಾದ ಪಿ.ನಾಗರಾಜು, ಕೃಷ್ಣಯ್ಯ, ಆರ್.ಕೆ.ರಮೇಶ್, ಆನಂದ, ಹರೀಶ್, ಬೈರೇಗೌಡ, ಮುನಿರಾಜು, ವ್ಯವಸ್ಥಾಪಕ ನಿರ್ದೇಶಕ ಸುರೇಶ್, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಸುನೀಲ್, ಮುಖಂಡ ದುಂತೂರು ವಿಶ್ವನಾಥ್ ಇದ್ದರು.ಪೊಟೋ೩೦ಸಿಪಿಟಿ೧: ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳ ಸಮಾಲೋಚನೆ ಸಭೆಯನ್ನು ಡಿ.ಕೆ.ಸುರೇಶ್ , ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ಪೊಟೋ೩೦ಸಿಪಿಟಿ೨: ತಾಲೂಕಿನ ಬೈರಾಪಟ್ಟಣದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಚನ್ನಪಟ್ಟಣ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗಳ ಸಮಾಲೋಚನೆ ಸಭೆಯಲ್ಲಿ ಡಿ.ಕೆ.ಸುರೇಶ್ ಹಾಗೂ ಸಿ.ಪಿ.ಯೋಗೇಶ್ವರ್‌ಗೆ ಹೂವಿನ ಹಾರ ಹಾಕಿ ಸನ್ಮಾನಿಸಲಾಯಿತು.