- ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ನಿಭಾಯಿಸುತ್ತೇನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ಸಂಪುಟ ವಿಸ್ತರಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಾದರ ಲಿಂಗಾಯತ ಕೋಟಾದಡಿ ಅವಕಾಶ ಇತ್ತು. ಪಟ್ಟಿ ಬಿಡುಗಡೆಯ ವೇಳೆ ಕ್ಲರಿಕಲ್ ಮಿಸ್ಟೇಕ್ ಆಗಿತ್ತೋ, ಏನೋ ಎಂದು ಚನ್ನಗಿರಿ ಕ್ಷೇತ್ರ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಯಾವುದೇ ಬ್ಲ್ಯಾಕ್‌ಮೇಲ್ ನಡೆಯುವುದಿಲ್ಲ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇವೆ ಎಂದಿದ್ದವರು ಈಗ ಎಲ್ಲಿದ್ದಾರೆ? ರಾಜೀನಾಮೆ ಕೊಡುತ್ತೇವೆ ಎಂದವರೆಲ್ಲಾ ಈಗ ಸಿಎಂ ಮನೆಯಲ್ಲಿದ್ದಾರೆ ಎಂದರು.
ನಾನು ಜಾತಿವಾರು, ಜಿಲ್ಲಾವಾರು ಕೋಟಾದಡಿ ಸಚಿವ ಸ್ಥಾನವನ್ನು ಕೇಳಿರಲಿಲ್ಲ. ರೈತ ಕೋಟಾದಡಿ ಸಚಿವ ಸ್ಥಾನ ಕೇಳಿದ್ದೆ. ಇನ್ನೂ ನನಗೆ ವಯಸ್ಸಿದೆ. ಮುಂದೆ ಅವಕಾಶಗಳೂ ಇವೆ. ಸಚಿವ ಸ್ಥಾನವನ್ನೇ ನಿಭಾಯಿಸುತ್ತೇನೆ ಅಂದ ಮೇಲೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿದರೆ ಅದನ್ನೂ ನಿಭಾಯಿಸುತ್ತೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಪರ ಕೆಲಸ ಮಾಡಿದ್ದರಿಂದ ಡಿ.ಕೆ.ಶಿ.ಯವರ ಪರ ಮಾತನಾಡಿದ್ದೆವು. ಸಂಘಟನೆಗೆ ಶಕ್ತಿ ತುಂಬಲು ಡಿ.ಕೆ.ಶಿವಕುಮಾರ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದೆವು. ನಾನೇ ಮುಖ್ಯಮಂತ್ರಿಯಾದಷ್ಟು ಖುಷಿಯಾಗುತ್ತಿದೆ ಎಂದು ತಮ್ಮ ನೆಚ್ಚಿನ ನಾಯಕ ಸಿಎಂ ಆಗಿದ್ದಕ್ಕೆ ಬಸವರಾಜ ಶಿವಗಂಗಾ ಹರ್ಷ ವ್ಯಕ್ತಪಡಿಸಿದರು.
(ಬಾಕ್ಸ್)
- ಜೈಲಿಗೆ ಹೋಗಿದ್ದ ಯಡಿಯೂರಪ್ಪನೋರಿಗೆ ಸಿಎಂ ಮಾಡಲಿಲ್ವಾ: ಶಿವಗಂಗಾ ಪ್ರಶ್ನೆ ದಾವಣಗೆರೆ: ಜೈಲಿಗೆ ಹೋಗಿ ಬಂದ ಯಡಿಯೂರಪ್ಪನವರನ್ನೇ ಮುಖ್ಯಮಂತ್ರಿ ಮಾಡಿದ್ದ ಬಿಜೆಪಿಯವರು ಈಗ ಬಿ.ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಿದ್ಕಕ್ಕೆ ವಿರೋಧಿಸುತ್ತಿದ್ದಾರೆ. ನಾಗೇಂದ್ರ ಮೇಲೆ ಆರೋಪ ಇದೆಯೇ ಹೊರತು, ಅಪರಾಧ ಸಾಬೀತಾಗಿಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ ವಿ. ಶಿವಗಂಗಾ ವಿಪಕ್ಷ ಮುಖಂಡರ ಟೀಕೆಗೆ ತಿರುಗೇಟು ನೀಡಿದ್ದಾರೆ.
ಬಿ.ನಾಗೇಂದ್ರ ಅವರಿಗೆ ದೆಹಲಿಗೆ ಹೋಗಲು ಅವಕಾಶ ಇಲ್ಲವೆಂಬ ಮಾತುಕೇಳಿ ಬರುತ್ತಿದೆ. ದೆಹಲಿಗೆ ಹೋಗದಂತಹ ರಾಜ್ಯಮಟ್ಟದ ಖಾತೆಯನ್ನು ನೀಡಿದರೆ ಅಲ್ಲಿಗೆ ಹೋಗುವ ಅವಶ್ಯಕತೆಯೇ ಬರುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಆಪ್ತರು ಅಂತಾ ಇದರಲ್ಲಿ ಬರುವುದಿಲ್ಲ. ಪ್ರಾಂತ್ಯವಾರು, ಜಾತಿವಾರು ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಆರ್.ಬಿ.ತಿಮ್ಮಾಪುರಗೆ ಬಿಟ್ಟು, ಬಸವಂತಪ್ಪಗೆ ಮಂತ್ರಿ ಮಾಡಿದ್ದಾರೆ. ಪಕ್ಷದ ಹೈಕಮಾಂಡ್ ತೀರ್ಮಾನ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
- - -
-6ಕೆಡಿವಿಜಿ3: ಬಸವರಾಜ ವಿ. ಶಿವಗಂಗಾ