ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ: ಕೆ.ಎಸ್‌.ಈಶ್ವರಪ್ಪ

KannadaprabhaNewsNetwork | Updated : Apr 08 2024, 07:59 AM IST

ಸಾರಾಂಶ

ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನು ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ ಎಂದು ಈಶ್ವರಪ್ಪ ಹೇಳಿದರು.

 ಶಿವಮೊಗ್ಗ :  ನಾನು ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ಇದರಿಂದ ಹಿಂದೆ ಸರಿಯುವ ಮಾತೇ ಇಲ್ಲ ಎನ್ನುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆಗೆ ಮಾಜಿ ಸಚಿವ, ಪಕ್ಷೇತರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ತಿರುಗೇಟು ನೀಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು ಉಚ್ಚಾಟನೆ ಮಾಡಬಹುದು. ಅಷ್ಟೇ ತಾನೇ‌ ಇನ್ನೇನೂ ಮಾಡಲು ಸಾಧ್ಯ. ನಾನು ಸಾಯೋವರೆಗೂ ಬಿಜೆಪಿಯಲ್ಲಿರುತ್ತೇನೆ. ನಾನು ಯಾವತ್ತೂ ಪಕ್ಷ ಬಿಟ್ಟು ಹೋಗಿಲ್ಲ. ಚುನಾವಣೆ ನಂತರ ಮತ್ತೆ ನಾನು ಬಿಜೆಪಿಗೆ ಬರುತ್ತೇನೆ ಎಂದರು.

ಪಕ್ಷದಿಂದ ನನ್ನ ಮೇಲೆ ಕ್ರಮ ತೆಗೆದುಕೊಳ್ಳುವುದಾದರೆ ನಾನು ನಾಮಪತ್ರ ಸಲ್ಲುಸುವ ತನಕ ಏಕೆ ಕಾಯುತ್ತೀರಿ. ನಾನು ಸ್ಪರ್ಧೆ ಮಾಡುತ್ತೇನೆ ಎಂದು ಭಗವಂತನ ಮೇಲೆ ಪ್ರಮಾಣ ಮಾಡಿ ಹೇಳಿದ್ದೇನೆ. ಇನ್ನೂ ಯಾವ ಭಾಷೆಯಲ್ಲಿ ಹೇಳಲಿ,

ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಹೋದರು ಮತ್ತೆ ಪಕ್ಷಕ್ಕೆ ಬಂದರು. ಅವರ ಮನೆಗೆ ಹೋಗಿ ಚುನಾವಣೆಗೆ ಟಿಕೆಟ್ ಕೊಟ್ಟಿದ್ದೀರಾ, ಅವರನ್ನೇ ನೀವು ಪಕ್ಷಕ್ಕೆ ಸೇರಿಸಿಕೊಂಡಿದ್ದೀರಾ ನನ್ನ ಮೇಲೆ‌ ಏನು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವುದು ನೋಡೋಣ ಎಂದು ಕುಟುಕಿದರು.

ನಾನು ಹಿಂದೆ ವಿಧಾನ ಸಭಾ ಚುನಾವಣೆಯಲ್ಲಿ ಐದು ಬಾರಿ ಶಾಸಕನಾಗಿ ಗೆದ್ದಿದ್ದೇನೆ. ಈಗ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಪ್ರವಾಸ ಮಾಡಿದ್ದೇನೆ. ಹಿಂದೆ ನನಗೆ ದೊರಕಿದ ಜನರ ಬೆಂಬಲಕ್ಕಿಂತ ಈಗ ನಾಲ್ಕು ಪಟ್ಟು ಹೆಚ್ಚು ಜನ ನನಗೆ ಬೆಂಬಲ ಕೊಡುತ್ತಿದ್ದಾರೆ. ಯಾವ ಹಳ್ಳಿ ಕಡೆ ಹೋದರು ನಿಮಗೆ ಅನ್ಯಾಯವಾಗಿದೆ. ನಿಮಗೆ ಓಟ್ ಹಾಕುತ್ತೇವೆ ಎಂದು ಹಳ್ಳಿಯಲ್ಲಿರುವ ರೈತನ ಮಕ್ಕಳು ಹೇಳಿತ್ತಿದ್ದಾರೆ. ನನ್ನ ಜೀವನದಲ್ಲಿ ಎಂದೂ ಕೂಡ ಇಷ್ಟೊಂದು ಪ್ರೋತ್ಸಾಹ ನೋಡಿರಲಿಲ್ಲ ಎಂದರು.

ಬೂತ್ ಮಟ್ಟದ ಸಮಾವೇಶಕ್ಕೆ 285 ಬೂತ್‌ನಿಂದ ಹನ್ನೆರಡು ಜನ ಬರಲು ಸೂಚನೆ ನೀಡಲಾಗಿತ್ತು. ಆದರೆ, ಹೇಳಿದಕ್ಕಿಂತ ನಾಲ್ಕೈದು ಜನ ಹೆಚ್ಚಾಗಿ ಬಂದಿದ್ದಾರೆ. ಆದ್ದರಿಂದ ಆಸನಗಳ ಕೊರತೆ ಉಂಟಾಗಿತ್ತು. ಮತ್ತಷ್ಟು ಆಸನಗಳನ್ನು ತರಿಸಿ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದ ಕಾರ್ಯಕ್ರಮ ಬಹಳ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಸಾಗರ, ಸೊರಬ ವಿಧಾನ ಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದ್ದೆ. ಸೊರಬದಲ್ಲಿ ಕಾರ್ಯಾಲಯ ಉದ್ಘಾಟನೆಯಾಗಿ ಅಲ್ಲಿಯೂ ಸಹ ಕೆಲಸ ಆರಂಭವಾಗಿದೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಿಂದ ಬೆಂಬಲ ಪ್ರೋತ್ಸಾಹ ಹೆಚ್ಚಾಗಿ ಸಿಗುತ್ತಿದೆ ನೂರಕ್ಕೆ ನೂರು ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವನಾಯಕ ಮೋದಿ ಫೋಟೋವನ್ನು ಯಾರೂ ಬಳಸಬಾರದು ಎಂದು ಇಲ್ಲಿಯವರೆಗೂ ಎಲ್ಲೂ ಆದೇಶವಾಗಿಲ್ಲ. ನನ್ನ ಹೃದಯದಲ್ಲಿರುವ ಮೋದಿಯವರನ್ನು ತೆಗೆಯಲು ಸಾಧ್ಯವಿಲ್ಲ. ಜಿಲ್ಲೆ ಜನರ ಮನಸ್ಸಿನಲ್ಲಿ ಮೋದಿ ಇದ್ದಾರೆ. ಮೋದಿ ಮತ್ತು ಜನರ ಆಶೀರ್ವಾದದಿಂದ ನಾನು ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಎಲ್ಲಾ ವಾರ್ಡ್‌ಗಳಲ್ಲಿ ಕಾರ್ಪೊರೇಷನ್ ಟಿಕೆಟ್ ಕೊಡುತ್ತೇವೆ ಎಂದು ಆಮಿಷ ಹಾಕುತ್ತಿದ್ದಾರೆ. ಒಂದು ವಾರ್ಡ್‌ಗೆ ಒಂದು ಟಿಕೆಟ್ ಇರುತ್ತೆ. ಆದರೆ, ಅವರು ಐದು ಜನಕ್ಕೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿಕೊಂಡು ಮೋಸ ಮಾಡುತ್ತಿರುವುದು ಎಲ್ಲರಿಗೂ ಅರ್ಥವಾಗಿದೆ ಎಂದರು.

Share this article