ಈವರೆಗೆ ಆಗದೇ ಇದ್ದ ಅಭಿವೃದ್ಧಿ ನಾನು ಮಾಡಿದ್ದೇನೆ

KannadaprabhaNewsNetwork |  
Published : Jan 02, 2025, 12:33 AM IST
ಸುದ್ದಿಗೋಷ್ಟಿಯಲ್ಲಿ   ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ  ಮಾತನಾಡಿದರು,  | Kannada Prabha

ಸಾರಾಂಶ

ದೇಶದ ಸ್ವಾತಂತ್ರ್ಯ ಬಳಿಕ ಕ್ಷೇತ್ರದಲ್ಲಿ ಈವರೆಗೆ ಆಗದೇ ಇದ್ದ ಅಭಿವೃದ್ಧಿಯನ್ನು ಸರ್ವತೋಮುಖವಾಗಿ ನಾನು ಮಾಡಿದ್ದೇನೆ. ಈ ಬಗ್ಗೆ ಯಾರಿಂದಲೂ ಹೇಳಿಸಿಕೊಳ್ಳಬೇಕಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಟೀಕಾಕಾರರಿಗೆ ತಿರುಗೇಟು ನೀಡಿದರು. ಹೇಮಾವತಿ ಮತ್ತು ಯಗಚಿ ಮೂಲದಿಂದ ನೀರು ತಂದು ಕುಡಿಯುವ ನೀರಿನ ಸಮಸ್ಯೆ ತೀರಿಸಿದೆ. ಎತ್ತಿನಹೊಳೆ ಯೋಜನೆ ಸಂಬಂಧ ಕೇವಲ ರಾಜಕೀಯ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗದು ಎಂದು ಆಕ್ರೋಶ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ದೇಶದ ಸ್ವಾತಂತ್ರ್ಯ ಬಳಿಕ ಕ್ಷೇತ್ರದಲ್ಲಿ ಈವರೆಗೆ ಆಗದೇ ಇದ್ದ ಅಭಿವೃದ್ಧಿಯನ್ನು ಸರ್ವತೋಮುಖವಾಗಿ ನಾನು ಮಾಡಿದ್ದೇನೆ. ಈ ಬಗ್ಗೆ ಯಾರಿಂದಲೂ ಹೇಳಿಸಿಕೊಳ್ಳಬೇಕಿಲ್ಲ ಎಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಟೀಕಾಕಾರರಿಗೆ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಅಭಿವೃದ್ಧಿ ಹಾಗೂ ಕೈ ಹಿಡಿದಿರುವ ಮತದಾರರ ಕೆಲಸ ಮಾಡಲು ಯಾರಿಂದಲೂ ನೀತಿಪಾಠದ ಅವಶ್ಯಕತೆ ಇಲ್ಲ ಎಂದು ಜೆಡಿಎಸ್ ಮುಖಂಡ ಸಂತೋಷ್‌ಗೆ ಟಾಂಗ್ ನೀಡಿದರು. ಮಹಾತ್ಮ ಗಾಂಧೀಜಿ ಅವರು ಕಂಡಿದ್ದ ಗ್ರಾಮ ಸ್ವರಾಜ್ಯದ ಕನಸನ್ನು ನಾನು ಅಕ್ಷರಶಃ ನನಸು ಮಾಡಿದ್ದೇನೆ ಎಂಬ ತೃಪ್ತಿ ಇದೆ. ಕ್ಷೇತ್ರದ ಪ್ರತಿಯೊಂದು ಹಳ್ಳಿಗಳೂ ನಗರ ಪ್ರದೇಶಗಳ ರೀತಿ ಉತ್ತಮವಾದ ಸುಸಜ್ಜಿತ ರಸ್ತೆ ಹೊಂದಿವೆ. ಎಲ್ಲೂ ಕೂಡ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ ಎಂದು ತಿಳಿಸಿದರು. ಹೇಮಾವತಿ ಮತ್ತು ಯಗಚಿ ಮೂಲದಿಂದ ನೀರು ತಂದು ಕುಡಿಯುವ ನೀರಿನ ಸಮಸ್ಯೆ ಬಾಧಿಸದ ರೀತಿ ಕಾರ್ಯ ನಿರ್ವಹಿಸಿದ್ದೇನೆ ಎಂದ ಅವರು, ಎತ್ತಿನಹೊಳೆ ಯೋಜನೆ ಸಂಬಂಧ ಕೇವಲ ರಾಜಕೀಯ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನ ಆಗದು ಎಂದು ಆಕ್ರೋಶ ಹೊರಹಾಕಿದರು.

ನನ್ನ ಕ್ಷೇತ್ರದಲ್ಲಿ ಅಕ್ಷರಶಃ ಜಲಕ್ರಾಂತಿಯಾಗಿದೆ. ಹಿಂದೆ ಕೃಷಿಗೆ ಇರಲಿ, ಕುಡಿಯುವ ನೀರಿಗೂ ಹಾಹಾಕಾರ ಪರಿಸ್ಥಿತಿ ಇತ್ತು. ಅದನ್ನು ಹೋಗಲಾಡಿಸಿ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಶಾಶ್ವತ ವ್ಯವಸ್ಥೆ ಮಾಡಿದ್ದೇನೆ ಎಂದು ಖಡಕ್ ಆಗಿಯೇ ಟಾಂಗ್ ಕೊಟ್ಟರು. ನಗರವಾಗಲೀ, ಗ್ರಾಮೀಣ ಪ್ರದೇಶ ಆಗಲೀ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು ಸುಳ್ಳು. ಮುಂದೆಯೂ ಕಾಡದ ರೀತಿಯಲ್ಲಿ ವ್ಯವಸ್ಥೆ ಮಾಡಿದ್ದೇನೆ ಎಂದು ತಿರುಗೇಟು ನೀಡಿದರು. ಶೈಕ್ಷಣಿಕವಾಗಿ ಹೋಬಳಿವಾರು ವಸತಿ ಶಾಲೆಗಳನ್ನು ತೆರೆದು ಬಡ, ಮಧ್ಯಮ ಹಾಗೂ ಪ್ರತಿಭಾವಂತ ಮಕ್ಕಳಿಗೆ ಅನುಕೂಲ ಕಲ್ಪಿಸಲಾಗಿದೆ. ಅರಸೀಕೆರೆಗೆ ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜು ತಂದಿದ್ದು ನಾನು, ಕೆಲವರು ಕಣಕಟ್ಟೆ ಹೋಬಳಿಗೆ ನೀರು ಬರುವುದಿಲ್ಲ ಎಂದಿದ್ದರು. ನಾನೀಗ ಹತ್ತಾರು ಕೆರೆ ತುಂಬಿಸಿದ್ದೇನೆ. ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಕೆಲವು ಕಡೆ ಭೂಮಿ ನೀಡುವ ಸಂಬಂಧ ನಡೆಯುತ್ತಿರುವ ಜಟಾಪಟಿ ಶೀಘ್ರ ನಿವಾರಣೆ ಆಗಲಿದೆ. ಕೆಲವೇ ತಿಂಗಳಲ್ಲಿ ಅರಸೀಕೆರೆಗೆ ಎತ್ತಿನಹೊಳೆ ನೀರು ಹರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಬಡಾವಣೆಗಳಿಗೆ ಅನುಕೂಲ ಕಲ್ಪಿಸಲು ಸೇತುವೆ ನಿರ್ಮಾಣ ಮಾಡಲಾಗಿದೆ ಎಂಬ ಆರೋಪಕ್ಕೆ, ಸರ್ಕಾರಿ ಜಾಗದಲ್ಲಿ, ಜನತೆಯ ಹಿತದೃಷ್ಟಿ ಹಾಗೂ ಬೇಡಿಕೆಯಿಂದ ಸೇತುವೆ ನಿರ್ಮಾಣ ಆಗಿದೆ. ಬೇರೆ ಲಾಭದ ಉದ್ದೇಶ ಇಲ್ಲ ಎಂದರು. ಇದರಲ್ಲಿ ಸುಳ್ಳು ಪ್ರಚಾರ ಮಾಡುವುದನ್ನು ಬಿಡಬೇಕು ಎಂದು ಕುಟುಕಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಧರ್ಮಶೇಖರ್, ಮುಖಂಡರಾದ ಸಿಕಂದರ್, ಸಿರಾಜ್ ಮತ್ತು ಇತರರು ಉಪಸ್ಥಿತರಿದ್ದರು.* ಬಾಕ್ಸ್‌: ಹಣೆಯಲ್ಲಿ ಬರೆದಿದ್ದರೆ ಸಚಿವರಾಗುವೆ

ಸಿದ್ದರಾಮಯ್ಯ ಕ್ಲೀನ್ ಇಮೇಜ್ ಇರುವ ಸಿಎಂ, ಅವರು ಮುಡಾ ಹಗರಣದಲ್ಲಿ ಭಾಗಿಯಾಗಿಲ್ಲ, ಸೈಟ್ ಬೇಕಿದ್ದರೆ ಕ್ಷಣದಲ್ಲಿ ಹತ್ತಾರು ಸೈಟ್ ಪಡೆಯಬಹುದು. ಆದರೆ ಅವರು ತಪ್ಪು ಮಾಡಿಲ್ಲ ಎಂಬುದು ನನ್ನ ಭಾವನೆ ಎಂದ ಶಾಸಕ ಕೆ.ಎಂ ಶಿವಲಿಂಗೇಗೌಡ, ನಾನು ರಾಜಕೀಯ ಲಾಭ ಅಥವಾ ಮಂತ್ರಿ ಪದವಿ ಪಡೆಯಲು ಸಿಎಂರನ್ನು ಹೊಗಳುತ್ತಿಲ್ಲ. ಹಣೆಯಲ್ಲಿ ಬರೆದಿದ್ದರೆ ಸಚಿವರಾಗುವೆ, ಇದನ್ನು ಯಾರಿಂದಲೂ ತಪ್ಪಿಸಲಾಗಲ್ಲ ಎಂದು ನುಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!