ಶಿವಮೊಗ್ಗ: ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿರುವುದಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದ ಸರ್ಜಿ ಕನ್ವೆಷನಲ್ ಹಾಲ್‌ನಲ್ಲಿ ಗುರುವಾರ ಸಂಜೆ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜ ಸೇವ ಸಂಘ ಹಮ್ಮಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸಬೇಕಿದೆ. ಒಮ್ಮೆ ಸಂಸದನಾಗಿ ಮತ್ತು ನಾಲ್ಕು ಬಾರಿ ಸಿಎಂ ಆಗಿ ಏಳು ಬಾರಿ ಶಾಸಕನಾಗಿ ಕೆಲಸ ಮಾಡಲು ಜಿಲ್ಲೆಯ ಜನ ಅವಕಾಶ ಮಾಡಿಕೊಟ್ಟೀದ್ದೀರಿ. ನಾನು ಶಿಕಾರಿಪುರ ಮತ್ತು ಶಿವಮೊಗ್ಗದ ಜನರಿಗೆ ಚಿರಋಣಿ. ಜಿಲ್ಲೆಯ ಜನರ ಋಣ ತೀರಿಸಲು ಆಗುವುದಿಲ್ಲ ಎಂದರು.ರಾಜ್ಯದ ಬಹುತೇಕ ಜಲಾಶಯಗಳು ತುಂಬಿ ತುಳುಕುತ್ತಿವೆ. ರೈತ ಗೌರವದಿಂದ ಬದುಕುವ ಸ್ಥಿತಿಯಿದೆ. ರೈತನ ಶ್ರಮಕ್ಕೆ ಬೆಲೆಕಟ್ಟಲು ಆಗುವುದಿಲ್ಲ. ಆತನ ಶ್ರಮದಿಂದ ನಾವು ನೆಮ್ಮದಿಯಿಂದ ಜೀವಿಸಲು ಸಾಧ್ಯವಾಗಿದೆ ಎಂದರು. ನನಗೆ ಸನ್ಮಾನಿಸಿದ್ದಿರಿ. ಅನೇಕ ಮುತ್ಸದ್ದಿಗಳು ರಾಜ್ಯಕ್ಕೆ ತಮ್ಮದೆ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನೆನಪಿಸಿಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಪ್ರವಾಸ ಮಾಡಿ, ನ್ಯಾಯಕೊಡಿಸಿದ ತೃಪ್ತಿಯಿದೆ. ಸಮಾನತೆ, ಭ್ರಾತೃತ್ವ ಹಾಗೂ ಮಾನವೀಯ ಭಾವನೆಗಳಿಂದ ಸಾಗುವ ಧರ್ಮವೇ ವೀರಶೈವ ಧರ್ಮವಾಗಿದೆ. ನಾವು ಉತ್ತಮ ಸಮಾಜ ಮತ್ತು ವಿಕಸಿತ ಸಮಾಜಕ್ಕೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಪ್ರಾಧ್ಯಾಪಕ ವಿಶ್ವನಾಥ್ ಮಾತನಾಡಿ, ಎಸ್‌ಎಸ್‌ಎಲ್‌ಸಿ ಮಾರ್ಕ್ಸ್ ಕಾರ್ಡ್ ಕೇವಲ ಜನ್ಮ ದಿನಾಂಕ ತೋರಿಸುವ ಪ್ರಮಾಣಪತ್ರವಾಗಿದೆ. ಆದರೆ ಪಿಯುಸಿ ನಿಮ್ಮ ಜೀವನದ ದಾರಿ ದೀಪವಾಗಲಿದೆ ಎಂದರು.ವಿದ್ಯಾರ್ಥಿಯನ್ನು ಶಿಕ್ಷಕರಾಗಿ ಮಾಡುವುದೇ ಶಿಕ್ಷಣವಾಗಿದೆ. ಕಲಿತ ಪಾಠವನ್ನು ಮನೆಯಲ್ಲಿ ಮತ್ತೊಮ್ಮೆ ಓದಿ ರೆಕಾರ್ಡ್ ಮಾಡಿಕೊಳ್ಳಬೇಕಿದೆ. ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಳ್ಳಬೇಕು. ಶಿಸ್ತಿನಿಂದ ವರ್ತಿಸಬೇಕು. ನಿಮಗೆ ನೀವೇ ಮಾರ್ಗದರ್ಶಕರು, ನಿರ್ಧಿಷ್ಟ ಗುರಿಯನ್ನಿಟ್ಟುಕೊಂಡು ಶ್ರಮಪಟ್ಟರೆ ನಿಮ್ಮ ಗುರಿತಲುಪಲು ಸಾಧ್ಯವೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಬಸವ ಕೇಂದ್ರದ ಬಸವ ಮರುಳುಸಿದ್ಧಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಇದೇ ವೇಳೆ 200ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಂಘದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಕಾರ್ಯದರ್ಶಿ ಎಸ್.ಪಿ.ದಿನೇಶ್, ಪ್ರಮುಖರಾದ ತಾರಾನಾಥ್, ಶಾಂತಾ ಆನಂದ್, ಬಳ್ಳೇಕೆರೆ ಸಂತೋಷ್, ಅನಿತಾ ರವಿಶಂಕರ್, ಡಾ.ರೇಣುಕಾರಾಧ್ಯ, ಮಹಾಲಿಂಗ ಶಾಸ್ತ್ರೀ ಮೋಹನ್ ಬಾಳೆಕಾಯಿ, ಟಿ.ಬಿ.ಜಗದೀಶ್, ಪಿ.ರುದ್ರೇಶ್, ಎಂ.ಆರ್.ಪ್ರಕಾಶ್, ಮಹೇಶ್‌ಮೂರ್ತಿ, ರತ್ನಾಮಂಜುನಾಥ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಮಾಜಿ ಶಾಸಕರಾದ ಎಚ್.ಎಂ.ಚಂದ್ರಶೇಖರಪ್ಪ, ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಎಚ್.ಸಿ.ಯೋಗೀಶ್ ಮೊದಲಾದವರಿದ್ದರು.