- ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಆಕ್ರೋಶ । ದಾ.ವಿ.ವಿ.ಗೆ ತೆರಳಿ ಪರೀಕ್ಷಾಂಗ ಕುಲಸಚಿವರಿಗೆ ಮನವಿ - - -
ಎರಡೂವರೆ ತಿಂಗಳಿಂದ ಅತಿಥಿ ಉಪನ್ಯಾಸಕರೇ ಇಲ್ಲದೇ ಪಾಠಗಳು ಪೂರ್ಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಸದಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಘಟಕ ನೇತೃತ್ವದಲ್ಲಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿಯಿಂದ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಆಲ್ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಶ್ರೀ ಜಯದೇವ ವೃತ್ತದಲ್ಲಿ ಸೆಮಿಸ್ಟರ್ ಪರೀಕ್ಷೆ ನಡೆಸದಂತೆ ಒತ್ತಾಯಿಸಿ ಘೋಷಣೆ ಕೂಗಿದರು. ಅನಂತರ ತಾಲೂಕಿನ ತೋಳಹುಣಸೆ ಬಳಿಯ ಶಿವಗಂಗೋತ್ರಿಯ ದಾವಣಗೆರೆ ವಿ.ವಿ.ಗೆ ನಿಯೋಗ ತೆರಳಿ ಮನವಿ ಅರ್ಪಿಸಿದರು.ಇದೇ ವೇಳೆ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಳೆದ ಎರಡೂವರೆ ತಿಂಗಳಿನಿಂದಲೂ ಕಾಲೇಜಿನಲ್ಲಿ ಪದವಿ ತರಗತಿಗಳ ಪಾಠಗಳೇ ನಡೆದಿಲ್ಲ. ರಾಜ್ಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳೂ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿವೆ. ಆದರೆ, ಅತಿಥಿ ಉಪನ್ಯಾಸಕರ ನೇಮಿಸದಕಾರಣ ಪಾಠಗಳು ಹಿಂದುಳಿದಿವೆ. ಪದವಿ ವಿದ್ಯಾರ್ಥಿಗಳು ಭವಿಷ್ಯ ಅತಂತ್ರಗೊಂಡ ಆತಂಕದಲ್ಲಿದ್ದಾರೆ. ಇಂತಹ ದುಸ್ಥಿತಿಯಲ್ಲಿ ಯಾವುದೇ ವಿ.ವಿ.ಗಳು ಸೆಮಿಸ್ಟರ್ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದರು.
ದಾವಣಗೆರೆ ವಿಶ್ವವಿದ್ಯಾನಿಲಯವು ಪಾಠಗಳೇ ನಡೆಯದೇ, ಪರೀಕ್ಷೆಗಳನ್ನು ಯಾವುದೇ ಕಾರಣಕ್ಕೂ ನಡೆಸಬಾರದು. ಪರೀಕ್ಷೆಗಳನ್ನು, ಪರೀಕ್ಷಾ ಶುಲ್ಕದ ಸುತ್ತೋಲೆ ತಕ್ಷಣವೇ ಮುಂದೂಡಬೇಕು. ಅದಕ್ಕೆ ಅನುಗುಣವಾಗಿ ಕಾಲೇಜಿನಲ್ಲೂ ಆಂತರಿಕ ಪರೀಕ್ಷೆ ಮುಂದೂಡಲು ನಿರ್ದೇಶನ ನೀಡಬೇಕು. ಸರ್ಕಾರವು ಅತಿಥಿ ಉಪನ್ಯಾಸಕರನ್ನು ನೇಮಿಸುವುದಾಗಿ ಸುತ್ತೋಲೆ ಹೊರಡಿಸಿದ್ದು ವಿದ್ಯಾರ್ಥಿ ಹೋರಾಟದ ಅಭೂತಪೂರ್ವ ಜಯವಾಗಿದೆ ಎಂದರು.
- - -
- ಪೂಜಾ ನಂದಿಹಳ್ಳಿ, ಹೋರಾಟಗಾರ್ತಿ.
-30ಕೆಡಿವಿಜಿ2: ಪದವಿ ಪರೀಕ್ಷೆ ನಡೆಸದಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿದರು. -30ಕೆಡಿವಿಜಿ3, 4: ದಾವಣಗೆರೆಯಲ್ಲಿ ಪಾಠಗಳನ್ನು ನಡೆಸದೇ ಪದವಿ ಪರೀಕ್ಷೆ ಆಯೋಜನೆ ವಿರೋಧಿಸಿ ಎಐಡಿಎಸ್‌ಒ ಜಿಲ್ಲಾ ಘಟಕ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.