ಹೇಳದೇ ಬಂದು ಕಾಮಗಾರಿ ಪರಿಶೀಲಿಸುವೆ: ಡಿಕೆಶಿ

KannadaprabhaNewsNetwork |  
Published : Jul 03, 2025, 11:48 PM IST

ಸಾರಾಂಶ

ಭದ್ರಾ ಡ್ಯಾಂ ಬಲದಂಡೆ ಬಳಿ ಕಾಮಗಾರಿಗೆ 2020ರಲ್ಲೇ ಭೂಮಿಪೂಜೆ ಮಾಡಿದ್ದು, ಈಗ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ವಿವಾದ ಎದ್ದಿದೆ. ಈ ಹಿನ್ನೆಲೆ ಶೀಘ್ರವೇ ನಾನೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ.

- ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ನೇತೃತ್ವದ ರೈತ ನಿಯೋಗಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ ಭರವಸೆ - ಬುಧವಾರ ರಾತ್ರಿ ಬೆಂಗಳೂರಿನ ನಿವಾಸದಲ್ಲಿ ಸಚಿವ ಎಸ್ಸೆಸ್ಸೆಂ ನೇತೃತ್ವದಲ್ಲಿ ರೈತರ ನಿಯೋಗ ಭೇಟಿ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭದ್ರಾ ಡ್ಯಾಂ ಬಲದಂಡೆ ಬಳಿ ಕಾಮಗಾರಿಗೆ 2020ರಲ್ಲೇ ಭೂಮಿಪೂಜೆ ಮಾಡಿದ್ದು, ಈಗ ಬಲದಂಡೆ ನಾಲೆ ಸೀಳಿ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ವಿವಾದ ಎದ್ದಿದೆ. ಈ ಹಿನ್ನೆಲೆ ಶೀಘ್ರವೇ ನಾನೇ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದ್ದಾರೆ.

ಬುಧವಾರ ರಾತ್ರಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರು, ಮುಖಂಡರ ನಿಯೋಗದಿಂದ ಭದ್ರಾ ಡ್ಯಾಂ ಬಲದಂಡೆ ನಾಲೆ ಬಳಿ ಕೈಗೊಂಡ ಕಾಮಗಾರಿ ಬಗ್ಗೆ ಅಹವಾಲು ಆಲಿಸಿ ಅವರು ಮಾತನಾಡಿದರು. ಭದ್ರಾ ಡ್ಯಾಂಗೆ ನಾನು ಯಾರಿಗೂ ಹೇಳದೇ, ದಿಢೀರನೇ ಬರುತ್ತೇನೆ. ಯಾವಾಗ ಬರುತ್ತೇನೆ, ಹೇಗೆ ಬರುತ್ತೇನೆಂದು ಯಾರಿಗೂ ಸಹ ತಿಳಿಸಲ್ಲ ಎಂದಿದ್ದಾರೆ.

ನಮಗೆ ಹೇಗೆ ಕೆಟ್ಟ ಹೆಸರು ಬರಲು ಸಾಧ್ಯ?:

ನಾನು ಪರಿಶೀಲನೆಗೆ ಬರುವ ಸ್ವಲ್ಪ ಮುಂಚೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಶಾಸಕರಿಗೆ ತಿಳಿಸುತ್ತೇನೆ. ಆದರೆ, ನೀವ್ಯಾರೂ ಅಲ್ಲಿಗೆ ಬರುವುದು ಬೇಡ. ಮುಂಚೆಯೇ ತಿಳಿಸಿಬಂದರೆ ಅಧಿಕಾರಿಗಳೂ ಎಚ್ಚೆತ್ತುಕೊಳ್ಳುತ್ತಾರೆ. ಈಗ ಕಾಮಗಾರಿ ವಿಚಾರ ನಮ್ಮ ಇಲಾಖೆಗೆ ಬರುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ಗೆ ಹೋಗಿದೆ. ಬಹುಗ್ರಾಮ ಯೋಜನೆಗಳಡಿ ನೀರೊದಗಿಸಲು ಬಲದಂಡೆ ನಾಲೆಯ ಬಳಿ ಕಾಮಗಾರಿ ಕೈಗೊಳ್ಳುವ ಬಗ್ಗೆ 2020ರಲ್ಲೇ ಸಚಿವ ಸಂಪುಟದಲ್ಲೇ ನಿರ್ಧಾರ ಕೈಗೊಂಡು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಗುದ್ದಲಿ ಪೂಜೆ ಮಾಡಲಾಗಿದೆ. ಹಿಂದಿನ ಸರ್ಕಾರ ಮಾಡಿದ್ದ ಕಾಮಗಾರಿ ಅದು. ವಾಸ್ತವ ಹೀಗಿರುವಾಗ ನಮಗೆ ಹೇಗೆ ಕೆಟ್ಟ ಹೆಸರು ಬರಲು ಸಾಧ್ಯ ಎಂದು ಡಿಕೆಶಿ ಪ್ರಶ್ನಿಸಿದರು.

ನೆರೆ ಜಿಲ್ಲೆಗಳಿಗೂ ನೀರು ಕೊಡಬೇಕು:

ಕುಡಿಯುವ ನೀರು ಒದಗಿಸುವುದು ಯಾವುದೇ ಸರ್ಕಾರದ ಪ್ರಥಮ ಕರ್ತವ್ಯ. ಮೊದಲು ಕುಡಿಯುವ ನೀರು, ನಂತರ ಉಳಿದಿದ್ದು. ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ನೀರು ಕೊಡುವುದಕ್ಕೆ ದಾವಣಗೆರೆ ಜಿಲ್ಲೆಯ ಯಾರದೇ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದೀರಿ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಸಹ ಇದೇ ಮಾತನ್ನೇ ಪುನರುಚ್ಚರಿಸಿದ್ದಾರೆ. ಹಾಗಾಗಿ ನೆರೆ ಜಿಲ್ಲೆಗಳಿಗೂ ನೀರು ಕೊಡಬೇಕು. ಅಚ್ಚುಕಟ್ಟು ರೈತರ ಹಿತವನ್ನೂ ಕಾಯಬೇಕು. ಅದನ್ನು ಮಾಡುತ್ತೇವೆ ಎಂದು ಭರವಸೆ ನೀಡಿದರು.

ತಮಿಳುನಾಡು- ಕರ್ನಾಟಕದ ರೀತಿ ನೀವ್ಯಾರೂ ನೀರಿಗಾಗಿ ಜಗಳವಾಡಬೇಡಿ. ಮಂಡ್ಯ ಜಿಲ್ಲೆ ಮಳವಳ್ಳಿ ಭಾಗಕ್ಕೆ ನೀರು ತಲುಪುತಿಲ್ಲ. ಹೀಗೆ ನನಗೂ ಅಚ್ಚುಕಟ್ಟು ರೈತರ ಸಮಸ್ಯೆ ಬಗ್ಗೆ ಅರಿವಿದೆ. ಎಲ್ಲ ದಾಖಲೆಗಳನ್ನೂ ನೋಡಿದ್ದೇನೆ. ರೈತರಿಗೆ ನೀರು ಉಳಿಸಬೇಕಿದೆ. ಕುಡಿಯುವ ನೀರು ಪೂರೈಸುವ ಹೊಸದುರ್ಗ, ಕಡೂರು, ತರೀಕೆರೆ ಭಾಗದ ಶಾಸಕರು, ಈ ನೀರಿಗೆ ಸಂಬಂಧಿಸಿದ ಜಿಲ್ಲೆಗಳ ಸಚಿವರೊಂದಿಗೆ ಒಂದು ದಿನ ನಾನೇ ಬಂದು, ಕಾಮಗಾರಿ ಸ್ಥಳ ವೀಕ್ಷಣೆ ಮಾಡುತ್ತೇನೆ ಎಂದು ಡಿಸಿಎಂ ಪುನರುಚ್ಚರಿಸಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಹರಿಹರ ಮಾಜಿ ಶಾಸಕ ಎಸ್.ರಾಮಪ್ಪ, ರೈತ ಮುಖಂಡರಾದ ತೇಜಸ್ವಿ ವಿ.ಪಟೇಲ್, ಮುದೇಗೌಡರ ಗಿರೀಶ, ಮಾಗನಹಳ್ಳಿ ಬಿ.ಕೆ.ಪರಶುರಾಮ, ನಂದಿಗಾವಿ ಶ್ರೀನಿವಾಸ ಸೇರಿದಂತೆ ಅಚ್ಚುಕಟ್ಟು ತಾಲೂಕಿನ ರೈತರು, ರೈತ ಮುಖಂಡರು, ಗ್ರಾಮಸ್ಥರು ಇದ್ದರು.

ಡಿಕೆಶಿ ಭೇಟಿಗೂ ಮುನ್ನ ಬೆಂಗಳೂರಿನ ಸದಾಶಿವ ನಗರದಲ್ಲಿ ಸಚಿವ ಎಸ್‌.ಎಸ್‌.ಎಂ. ನಿವಾಸದಲ್ಲಿ ರೈತರು ಸಭೆ ಮಾಡಿ, ನಂತರ ಡಿಸಿಎಂ ಡಿ.ಕೆ.ಶಿವಕುಮಾರ ನಿವಾಸದ ಸಭೆಗೆ ತೆರಳಿದರು.

- - -

(ಬಾಕ್ಸ್‌) * ಅಚ್ಚುಕಟ್ಟು ಕೊನೆ ಭಾಗಕ್ಕೆ ನೀರು ತಲುಪಿಸಲು ಪ್ರಾಮಾಣಿಕ ಪ್ರಯತ್ನ

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ, ಹರಪನಹಳ್ಳಿ ತಾಲೂಕಿನ ರೈತರ ಜೀವನಾಡಿ ಭದ್ರಾ ಡ್ಯಾಂ. ಇದೇ ಭದ್ರಾ ಕಾಲುವೆ ನೀರಿನಿಂದ ಭತ್ತ, ಅಡಕೆ, ಕಬ್ಬು ಬೆಳೆಗಳನ್ನು ಅಚ್ಚುಕಟ್ಟು ರೈತರು ಬೆಳೆಯುತ್ತಾರೆ. ಇಂತಹ ಬೆಳೆಗಳಿಗಾಗಿ ಅಂತಲೇ ನದಿಯಿಂದ ಕೆರೆಗಳನ್ನು ಮುಂಚೆಯೇ ಭರ್ತಿ ಮಾಡುತ್ತಿದ್ದೇವೆ. 22 ಕೆರೆ ಏತ ನೀರಾವರಿ ಯೋಜನೆ, ಸೂಳೆಕೆರೆ, ಕೊಂಡಜ್ಜಿ ಕೆರೆ ಸಹ ಭದ್ರಾ ನೀರು ಅವಲಂಬಿಸಿವೆ. ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆ ಶುರುವಾಗಿದೆ. ಹರಿಹರ ತಾ. ಭೈರನಪಾದ ಯೋಜನೆ ಆಗಬೇಕಿದೆ. ಇವೆಲ್ಲದರ ನೀರಿನ ಮೂಲ, ಅವಲಂಬನೆ ಭದ್ರಾ ಡ್ಯಾಂ, ನದಿ ನೀರನ್ನೇ ಎಂದರು. ನೀರಾವರಿ, ಬೆಸ್ಕಾಂ, ಪೊಲೀಸ್, ಕಂದಾಯ ಸೇರಿದಂತೆ ಎಲ್ಲ ಇಲಾಖೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಜಿಲ್ಲೆಯ ಅಚ್ಚುಕಟ್ಟು ರೈತರಿಗೆ ನೀರು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ನಾಲೆಯುದ್ದಕ್ಕೂ ಅಕ್ರಮ ಪಂಪ್‌ ಸೆಟ್‌ ಹಾವಳಿಯೂ ಇದೆ. ಕಾಲುವೆ ಕೆಳಭಾಗದಲ್ಲೇ ಎಲ್ಲೆಲ್ಲಿ ಪೈಪ್ ಲೈನ್ ಮಾಡಿಕೊಂಡಿದ್ದಾರೆ ಎಂಬುದೂ ಗೊತ್ತಾಗದ ಸ್ಥಿತಿ ಇದೆ. ವಿದ್ಯುತ್‌ ಪೂರೈಕೆ ತಪ್ಪಿಸಿದರೆ, ಟ್ರ್ಯಾಕ್ಟರ್‌ನ ಮೂಲಕ ಮೋಟಾರ್ ಹಚ್ಚಿ, ನೀರು ಲಿಫ್ಟ್ ಮಾಡುತ್ತಾರೆ. ಆದರೂ, ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗಕ್ಕೆ ನೀರು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಡಿಸಿಎಂ ಗಮನಕ್ಕೆ ತಂದರು.

- - -

(ಟಾಪ್‌ ಕೋಟ್‌)

ಭದ್ರಾ ಜಲಾಶಯ ವಿಚಾರವು ದಾವಣಗೆರೆ ಜಿಲ್ಲೆಯಲ್ಲಿ ರಾಜಕೀಯವಾಗಿ ಬೆಳೆಯುತ್ತಿದೆ. ನಮ್ಮ ಸರ್ಕಾರಕ್ಕೆ ಕೆಟ್ಟು ಹೆಸರು ತರಲೆಂದೇ ಕೆಲವರು ಹೊರಟ್ಟಿದ್ದಾರೆ. ರೈತರು ಬತ್ತದ ನಾಟಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜಗಳೂರು, ಹರಪನಹಳ್ಳಿ ಕ್ಷೇತ್ರ ಸೇರಿದಂತೆ ಭದ್ರಾ ಜಲಾಶಯ ಅವಲಂಬಿತ ರೈತರಿಗೆ ಸದ್ಯ ನೀರು ಒದಗಿಸಲು ಅಧಿಕಾರಿಗಳು ಮುಂದಾಗಬೇಕು.

- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಉಸ್ತುವಾರಿ ಸಚಿವ

- - -

-3ಕೆಡಿವಿಜಿ4, 5: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ಭೇಟಿಯಾದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದ ರೈತರ ನಿಯೋಗದೊಂದಿಗೆ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮಾತನಾಡಿದರು.

- - - (** ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಿ)-3ಕೆಡಿವಿಜಿ6, 7: ಬೆಂಗಳೂರಿನಲ್ಲಿ ಬುಧವಾರ ರಾತ್ರಿ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆಯ ಭದ್ರಾ ಅಚ್ಚುಕಟ್ಟು ರೈತ ಮುಖಂಡರು, ರೈತರ ಸಭೆ ನಡೆಯಿತು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡರ ಗಿರೀಶ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!