ಗದಗ: ಅಪೂರ್ಣ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಲು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಖಡಕ್ ಎಚ್ಚರಿಕೆ ನೀಡಿದರು.
"ಯೋಜನೆಗಳು ನನೆಗುದಿಗೆ " ಶೀರ್ಷಿಕೆಯಡಿ ಪ್ರಕಟವಾದ ಕನ್ನಡಪ್ರಭದ ಸರಣಿ ವರದಿಗಳಿಗೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವುಗಳನ್ನು ಪ್ರಸ್ತಾಪಿಸಿ, ನನೆಗುದಿಗೆ ಬಿದ್ದ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಇಂದಿರಾ ಕ್ಯಾಂಟೀನ್:ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಸೌಲಭ್ಯ ಬಡಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಇಲಾಖೆಯ ಅಧಿಕಾರಿಗಳದ್ದಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಪಂ. ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣದ ಆವರಣದಲ್ಲಿ ಆ. 15ರಂದು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದರು.
ಹಲವು ವರ್ಷದಿಂದ ತಾ.ಪಂ. ಕಚೇರಿಯ ನೂತನ ಕಟ್ಟಡದ ನಿರ್ಮಾಣ ಕಾರ್ಯ ನಿಧಾನಗತಿಯಲ್ಲಿ ಸಾಗಿದೆ. ಪರಿಷ್ಕೃತ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿ ಸುಮ್ಮನೆ ಕೂಡದೇ ನಿರಂತರ ಸಂಪರ್ಕದಲ್ಲಿದ್ದು ಕಾಮಗಾರಿ ಪೂರ್ಣಗೊಳಿಸುವಂತೆ ತಾ.ಪಂ. ಇಒ ಮಲ್ಲಯ್ಯ ಅವರಿಗೆ ಸೂಚಿಸಿದರು.
ಲಿಂ. ಪಂಡಿತ ಪುಟ್ಟರಾಜ ಗವಾಯಿಗಳವರ ಸ್ಮಾರಕ ಭವನದ ಎಲ್ಲ ಹಂತದ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇದಕ್ಕೆ ಅಗತ್ಯವಿರುವ ಪರಿಷ್ಕೃತ ಅಂದಾಜು ಪಟ್ಟಿಯನ್ನು ಇಂದೇ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಚಿವರು ಲೋಕೋಪಯೋಗಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಸಭೆಯಲ್ಲಿ ಗದಗ -ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಡಿಸಿ ಸಿ.ಎನ್.ಶ್ರೀಧರ್, ಜಿ ಪಂ ಸಿಇಓ ಭರತ್ ಎಸ್, ಎಡಿಸಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, ಲೋಕೋಪಯೋಗಿ ಇಲಾಖೆ ರಮೇಶ ಪಾಟೀಲ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.