ಚುಂಚನಕಟ್ಟೆಯಲ್ಲಿ ಎತ್ತ ನೋಡಿದ್ರೂ ಜೋಡಿ ರಾಸುಗಳ ಸಮೂಹ...!

KannadaprabhaNewsNetwork | Published : Jan 6, 2024 2:00 AM

ಸಾರಾಂಶ

ದಕ್ಷಿಣ ಭಾರತದಲ್ಲಿಯೆ ಅತ್ಯಂತ ಹೆಸರುವಾಸಿಯಾಗಿರುವ ಜಾತ್ರೆಯ ಆವರಣದಲ್ಲಿ 10 ಸಾವಿಕ್ಕಿಂತ ಹೆಚ್ಚು ಜೋಡಿ ರಾಸುಗಳು ಮೇಳೈಸಿದ್ದು, ನೋಡುಗರನ್ನು ಕಣ್ಮನ ಸೆಳೆಯುವುದರ ಜತೆಗೆ ಗೋ-ಸಂಪತ್ತಿನ ದರ್ಬಾರ್ ಕಳೆಗಟ್ಟಿದೆ.ಸುಗ್ಗಿ ಮುಗಿದ ನಂತರ ವರ್ಷವೆಲ್ಲ ತಮ್ಮ ಜಮೀನಿನಲ್ಲಿ ದುಡಿಯುವ ತಮ್ಮ ರಾಸುಗಳನ್ನು ಜಾತ್ರೆಗೆ ಕರೆತಂದು ಮೆರೆಸುವ ರೈತರು ಅವುಗಳ ಪ್ರದರ್ಶನ ಮಾಡುವುದಲ್ಲದೆ ತಮಗಿರುವ ಗೋ-ಪ್ರೇಮವನ್ನು ತೋರ್ಪಡಿಸಿ ಸಂತಸ ಪಡುತ್ತಾರೆ.

ಕುಪ್ಪೆ ಮಹದೇವಸ್ವಾಮಿ

ಕನ್ನಡಪ್ರಭ ವಾರ್ತೆ ಕೆ.ಆರ್.ನಗರ

ಎತ್ತ ನೋಡಿದರು ಜೋಡಿ ರಾಸುಗಳ ಸಮೂಹ, ರೈತರ ಮುಗಿಲು ಮುಟ್ಟಿದ ಸಂಭ್ರಮ, ಕಾರಿಗಿಂತ ದುಬಾರಿ ಬೆಲೆ ಬಾಳುವ ಜೋಡೆತ್ತುಗಳ ಮೇಳ, ಮದುವೆ ಮಂಟಪವನ್ನು ಮೀರಿಸುವ ಚಪ್ಪರದ ವೈಭವ.

ಇವು ಮೈಸೂರು ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಟ್ಟೆಯ ಗ್ರಾಮಿಣ ಸೊಗಡಿನ ಸಿರಿಯ ಚುಂಚನಕಟ್ಟೆ ಜಾತ್ರೆಯಲ್ಲಿ ಕಂಡು ಬರುತ್ತಿರುವ ದೃಶ್ಯ ವೈಭವ.

ದಕ್ಷಿಣ ಭಾರತದಲ್ಲಿಯೆ ಅತ್ಯಂತ ಹೆಸರುವಾಸಿಯಾಗಿರುವ ಜಾತ್ರೆಯ ಆವರಣದಲ್ಲಿ 10 ಸಾವಿಕ್ಕಿಂತ ಹೆಚ್ಚು ಜೋಡಿ ರಾಸುಗಳು ಮೇಳೈಸಿದ್ದು, ನೋಡುಗರನ್ನು ಕಣ್ಮನ ಸೆಳೆಯುವುದರ ಜತೆಗೆ ಗೋ-ಸಂಪತ್ತಿನ ದರ್ಬಾರ್ ಕಳೆಗಟ್ಟಿದೆ.

ಸುಗ್ಗಿ ಮುಗಿದ ನಂತರ ವರ್ಷವೆಲ್ಲ ತಮ್ಮ ಜಮೀನಿನಲ್ಲಿ ದುಡಿಯುವ ತಮ್ಮ ರಾಸುಗಳನ್ನು ಜಾತ್ರೆಗೆ ಕರೆತಂದು ಮೆರೆಸುವ ರೈತರು ಅವುಗಳ ಪ್ರದರ್ಶನ ಮಾಡುವುದಲ್ಲದೆ ತಮಗಿರುವ ಗೋ-ಪ್ರೇಮವನ್ನು ತೋರ್ಪಡಿಸಿ ಸಂತಸ ಪಡುತ್ತಾರೆ.

ಚುಂಚನಕಟ್ಟೆ ಜಾತ್ರೆಗೆ ಮೈಸೂರು ಜಿಲ್ಲೆಯಿಂದಲ್ಲದೆ ಹಾಸನ, ಚಾಮರಾಜನಗರ, ಕೊಡಗು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳಿಂದ ರೈತರು ತಮ್ಮ ಜಾನುವಾರುಗಳೊಂದಿಗೆ ಬಂದು ಪ್ರದರ್ಶನ ಮಾಡುವುದರ ಜತೆಗೆ ಭರ್ಜರಿ ವ್ಯಾಪಾರವನ್ನು ಮಾಡುತ್ತಾರೆ.

ಈಗಾಗಲೆ ಜಾತ್ರೆಯಲ್ಲಿ ಸಿಗುವ ಅಪರೂಪದ ಹಳ್ಳಿಕಾರ್ ತಳಿಗಳನ್ನು ಕೊಳ್ಳಲು ದೂರದ ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಸೇರಿದಂತೆ ಇತರ ಜಿಲ್ಲೆಗಳಿಂದ ರೈತರು ಜಾತ್ರೆಗೆ ಆಗಮಿಸಿದ್ದು ತಮಗಿಷ್ಟ ಬಂದ ಜೋಡಿಯನ್ನು ತೆಗೆದುಕೊಳ್ಳುತ್ತಿದ್ದು ವ್ಯಾಪಾರವು ಭರ್ಜರಿಯಾಗಿ ನಡೆಯುತ್ತಿದೆ.

ರಾಸುಗಳನ್ನು ನೋಡಲು ನಿತ್ಯ ಸಾವಿರಾರು ಮಂದಿ ದೂರದುರುಗಳಿಂದ ಆಗಮಿಸುತ್ತಿದ್ದು, ಲಕ್ಷಾಂತರ ರು. ಬೆಲೆ ಬಾಳುವ ಜೋಡಿಗಳನ್ನು ನೋಡಿ ಅವುಗಳ ಮೈದಡವಿ ಸಂತಸ ಪಡುತ್ತಿದ್ದಾರಲ್ಲದೆ ಜಾತ್ರೆಯ ಸೊಬಗನ್ನು ಸವಿಯುತ್ತಿದ್ದಾರೆ.

ಕೊರೋನಾ ಮತ್ತು ಚರ್ಮಗಂಟು ರೋಗದ ಹಿನ್ನೆಲೆ ಕಳೆದ ನಾಲ್ಕು ವರ್ಷಗಳಿಂದ ಕಳೆಗುಂದಿದ ಜಾತ್ರೆ ಈ ಬಾರಿ ಅತ್ಯಂತ ವೈಭವದಿಂದ ನಡೆಯುತ್ತಿದ್ದು, ಇದು ರೈತರ ಉತ್ಸಾಹ ಇಮ್ಮಡಿಯಾಗುವಂತೆ ಮಾಡಿದೆ.

ಇದರ ಜತೆಗೆ ಜಾತ್ರಾ ಆವರಣ ಮತ್ತು ಶ್ರೀರಾಮ ದೇವಾಲಯದ ರಸ್ತೆಯಲ್ಲಿ ತಲೆ ಎತ್ತಿರುವ ಸಿಹಿ ತಿಂಡಿ, ವಿವಿದ ಆಟಿಕೆ ಮತ್ತಿತರ ಅಂಗಡಿಗಳು ನೋಡುಗರನ್ನು ಸೆಳೆಯುತ್ತಿದ್ದು ಚುಂಚನಟ್ಟೆ ಈಗ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.13ರಂದು ಸೀತಾ ಶ್ರೀರಾಮ

ದೇವರ ಕಲ್ಯಾಣೋತ್ಸವ

ತಿಂಗಳ ಮೊದಲ ವಾರದಲ್ಲಿ ನಡೆಯುವ ಜಾನುವಾರು ಜಾತ್ರೆಯೊಂದಿಗೆ ಚುಂಚನಕಟ್ಟೆಯ ಸೀತಾ ಸಮೇತ ಶ್ರೀರಾಮ ದೇವಾಲಯದಲ್ಲಿ ತಿಂಗಳು ಪೂರ್ತಿ ವಿವಿದ ಧಾರ್ಮಿಕ ಕಾರ್ಯಗಳು, ಸೀತಾ ಕಲ್ಯಾಣ, ಬ್ರಹ್ಮರಥೋತ್ಸವ, ತೆಪ್ಪೋತ್ಸವ ನಡೆಯಲಿವೆ.

ಜ, 13ರ ಶನಿವಾರ ಸೀತಾ ಶ್ರೀರಾಮ ದೇವರ ಕಲ್ಯಾಣೋತ್ಸವ, 16ರ ಸೋಮವಾರ ಶ್ರೀರಾಮ ದೇವರ ಬ್ರಹ್ಮರಥೋತ್ಸವ, 18 ರಂದು ಗುರುವಾರ ಕಾವೇರಿ ನದಿ ತಟದಲ್ಲಿ ತೆಪ್ಪೋತ್ಸವ ನಡೆಯಲಿದೆ.

Share this article