ಜನತೆಯಲ್ಲಿ ಬಂಗಾರಪ್ಪನವರ ಪ್ರತಿರೂಪ ಕಾಣುತ್ತಿರುವೆ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Oct 13, 2026, 01:30 AM IST
ಫೋಟೊ:೧೨ಕೆಪಿಸೊರಬ-೦೧ : ಸೊರಬ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಗಳೂರಿನಲ್ಲಿ ಶ್ರೀ ಎಸ್. ಬಂಗಾರಪ್ಪ ಪ್ರತಿಷ್ಠಾನ (ರಿ) ಹಾಗೂ ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು. | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು. ಆದರೆ ಕ್ಷೇತ್ರದ ಲಕ್ಷಾಂತರ ಜನತೆಯಲ್ಲಿ ತಂದೆಯವರ ಪ್ರತಿರೂಪವನ್ನು ಕಾಣುತ್ತಿದ್ದೇನೆ. ಇಂಥ ಸೌಭಾಗ್ಯ ತಮಗಲ್ಲದೇ ಇನ್ಯಾರೂ ಕಾಣಲು ಸಾಧ್ಯವಿಲ್ಲ ಎನ್ನುವ ಹೆಮ್ಮೆ ನನಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ನುಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ಕಳೆದುಕೊಂಡಿರಬಹುದು. ಆದರೆ ಕ್ಷೇತ್ರದ ಲಕ್ಷಾಂತರ ಜನತೆಯಲ್ಲಿ ತಂದೆಯವರ ಪ್ರತಿರೂಪವನ್ನು ಕಾಣುತ್ತಿದ್ದೇನೆ. ಇಂಥ ಸೌಭಾಗ್ಯ ತಮಗಲ್ಲದೇ ಇನ್ಯಾರೂ ಕಾಣಲು ಸಾಧ್ಯವಿಲ್ಲ ಎನ್ನುವ ಹೆಮ್ಮೆ ನನಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭಾವುಕರಾಗಿ ನುಡಿದರು.

ಬೆಂಗಳೂರಿನಲ್ಲಿ ಶ್ರೀ ಎಸ್. ಬಂಗಾರಪ್ಪ ಪ್ರತಿಷ್ಠಾನ (ರಿ) ಹಾಗೂ ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಬೆಂಗಳೂರಿನಲ್ಲಿ ನೆಲೆಸಿರುವ ಸೊರಬ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ತಂದೆ ಎಸ್. ಬಂಗಾರಪ್ಪ ಅವರು ನಮ್ಮ ಕುಟುಂಬದ ಆಸ್ತಿಯಲ್ಲ, ಇಡೀ ಸೊರಬ ತಾಲೂಕಿನ ಜನತೆಯ ಆಸ್ತಿ. ಅಂದಿನ ದಿನಗಳಲ್ಲಿ ಕುಟುಂಬದ ಹಿರಿಯರು ಮತ ನೀಡಿ ಅವರನ್ನು ಗೆಲ್ಲಿಸಿದ್ದರಿಂದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಆ ಋಣ ನಮ್ಮ ಮೇಲಿದೆ. ಸೊರಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ನಮ್ಮ ತಂದೆಯವರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.

ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ಸಚಿವನಾಗಿದ್ದೇನೆ. ಶಿಕ್ಷಣ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಪಕ್ಷ ಮತ್ತು ನಾಯಕರು ಮತ್ತೊಮ್ಮೆ ಅವಕಾಶ ನೀಡಿದ್ದಾರೆ. ಈ ವಿಶ್ವಾಸವನ್ನು ಉಳಿಸಿಕೊಂಡು ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಹೀಗೆಯೇ ಇರಲಿ ಎಂದ ಅವರು, ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಿರುವ ವಿದ್ಯಾರ್ಥಿಗಳು ತಾವು ಯಾವುದೇ ಸ್ಥಾನದಲ್ಲಿದ್ದರೂ ತಂದೆ-ತಾಯಿಯರನ್ನು ಮರೆಯಬಾರದು. ನಿಮ್ಮ ಸಾಧನೆಯ ಗರಿಯನ್ನು ಹೆತ್ತವರಿಗೆ ಅರ್ಪಿಸಿ, ಇದರಿಂದ ಇನ್ನಷ್ಟು ಎತ್ತರಕ್ಕೆ ಬೆಳೆದು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ಉದ್ಯೋಗ ಹಾಗೂ ವಿವಿಧ ಕಾರಣಗಳಿಗಾಗಿ ನೆಲೆಸಿರುವ ಸೊರಬದ ಜನರು ತಮ್ಮ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಮುಂದಾಗಿರುವುದು ಸಂತಸದ ಸಂಗತಿ. ನೀವೆಲ್ಲರೂ ಸೇರಿ ಟೀಮ್ ಸಮ್ಮಿಲನ ಸಂಘಟನೆಯನ್ನು ಕಟ್ಟಿಕೊಂಡು ಕಳೆದ ಎರಡು ವರ್ಷಗಳಿಂದ ಅಚ್ಚುಕಟ್ಟಾಗಿ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮದ ಶ್ರೇಯಸ್ಸು ಸಂಘಟಕರಿಗೆ ಸಲ್ಲುತ್ತದೆ ಎಂದರು.

ನಂತರ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ. ೮೦ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಮತ್ತು ಕ್ರೀಡೆ, ಸಾಂಸ್ಕೃತಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಒಟ್ಟು ೪೫ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ರು. ೧೫ ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ತಂದು ಹೆಚ್ಚು ಜನಪ್ರಿಯತೆಗೆ ಪಾತ್ರರಾಗುತ್ತಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಪತ್ನಿ ಅನಿತಾ ಮಧು ಬಂಗಾರಪ್ಪ ಅವರನ್ನು ಬೆಂಗಳೂರಿನ ಟೀಮ್ ಸಮ್ಮಿಲನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಟೀಮ್ ಬೆಂಗಳೂರು ಸಮ್ಮಿಲನ ಸದಸ್ಯರು, ಸೂರ್ಯ ಮಧು ಬಂಗಾರಪ್ಪ ಹಾಜರಿದ್ದರು. ಆರ್‌ಡಿಪಿಆರ್ ಇಲಾಖೆಯ ನಿರ್ದೇಶಕ ಏಕಾಂತಪ್ಪ ಸ್ವಾಗತಿಸಿ, ಗಣಪತಿ ಹಳೆಸೊರಬ ಹಾಗೂ ಬಿಂದು ಎಚ್.ಎನ್. ನಿರೂಪಿಸಿ, ಸೃಷ್ಟಿ ಇ. ಪ್ರಾರ್ಥಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರ ಸಚಿವ ವಿ.ಸೋಮಣ್ಣ ಕಾರಿಗೆ ಮುತ್ತಿಗೆ ಯತ್ನ
ಬಿಎಸ್‌ಸಿ ಕುಟುಂಬದ ಶ್ರಮ ನಿಜಕ್ಕೂ ಶ್ಲಾಘನೀಯ: ಬಿ.ಎಸ್. ಯಡಿಯೂರಪ್ಪ