ಆಪರೇಷನ್‌ ಸಿಂದೂರ ಬೆಂಬಲಿಸುತ್ತೇನೆ : ಸಿದ್ದರಾಮಯ್ಯ

KannadaprabhaNewsNetwork |  
Published : May 08, 2025, 12:35 AM ISTUpdated : May 08, 2025, 05:10 AM IST
Karnataka Chief Minister Siddaramaiah (File Photo/ANI)

ಸಾರಾಂಶ

  ಆಪರೇಷನ್‌ ಸಿಂದೂರ ನಡೆಸಿದ ಸೈನಿಕರ ದಾಳಿ ಬೆಂಬಲಿಸುತ್ತೇನೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

 ಬೆಂಗಳೂರು : ‘ನಮ್ಮ ಸೈನಿಕರು ಉಗ್ರಗಾಮಿಗಳ ನೆಲೆ ನಾಶ ಮಾಡಿ ಪರಾಕ್ರಮ ಮೆರೆದಿದ್ದಾರೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕಾಲು ಕೆರೆದುಕೊಂಡು ಬಂದರೂ ಸುಮ್ಮನೆ ಕೂರಲು ಆಗುವುದಿಲ್ಲ. ಹೀಗಾಗಿ ಆಪರೇಷನ್‌ ಸಿಂದೂರ ನಡೆಸಿದ ಸೈನಿಕರ ದಾಳಿ ಬೆಂಬಲಿಸುತ್ತೇನೆ. ಇದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಆಪರೇಷನ್‌ ಸಿಂದೂರ ಬೆನ್ನಲ್ಲೇ ಅಧಿಕೃತ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಮ್ಮ ಸರ್ಕಾರ ಸೇನೆ ಕೈಗೊಂಡಿರುವ ಕ್ರಮವನ್ನು ನೂರಕ್ಕೆ ನೂರರಷ್ಟು ಬೆಂಬಲಿಸುತ್ತದೆ. ಪಾಕಿಸ್ಥಾನಕ್ಕೆ ಮಾತ್ರವಲ್ಲ, ಭಾರತದ ಜೊತೆ ಈ ರೀತಿಯ ಕಿಡಿಗೇಡಿತನ ನಡೆಸುವ ನೆರೆಯ ಎಲ್ಲ ದೇಶಗಳಿಗೆ ಕೂಡಾ ಇಂದಿನ ಸೇನಾದಾಳಿ ಎಚ್ಚರಿಕೆ ಗಂಟೆ ಎಂದು ಹೇಳಿದರು.

ಬಸವಣ್ಣ ಹಾಗೂ ಮಹಾತ್ಮಗಾಂಧಿ ಅವರ ಕಾಲದ ಸನ್ನಿವೇಶ ಬೇರೆ, ಈಗಿನ ಕಾಲ ಬೇರೆ. ಕಾಲು ಕೆರೆದುಕೊಂಡು ಬಂದರೂ ಸುಮ್ಮನೆ ಕೂರಲು ಆಗುತ್ತಾ? ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು.

ಕಾಶ್ಮೀರದ ಪಹಲ್ಗಾಂನಲ್ಲಿ ಅಮಾಯಕ 26 ಮಂದಿ ಹತ್ಯೆ ನಡೆಸಿದ ಉಗ್ರರನ್ನು ಬೆಂಬಲಿಸುವವರು, ಪೋಷಕರು ಸಹ ಪಾಕಿಸ್ತಾನದವರೇ ಎಂಬುವುದು ಸ್ಪಷ್ಟ. ಈ ಕೃತ್ಯಕ್ಕೆ ಪಾಕಿಸ್ತಾನ ಖಂಡನೆಯೂ ವ್ಯಕ್ತಪಡಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ದಾಳಿ ಮಾಡಿದ್ದು, ನಮ್ಮ ಸೈನಿಕರು ಕೇವಲ ಭಯೋತ್ಪಾದಕರ ಮೇಲೆ ದಾಳಿ ಮಾಡಿದ್ದಾರೆ. ಎಲ್ಲೂ ಮುಗ್ದರ ಮೇಲೆ ದಾಳಿ ಮಾಡಿಲ್ಲ ಎಂದು ಸಮರ್ಥಿಸಿದರು.

ಕೇಂದ್ರ ಸರ್ಕಾರದ ಜತೆ ಇದ್ದೇವೆ:

ನಾವು ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದೇವೆ. ಇಂತಹ ಸಮಯದಲ್ಲಿ ನಾವು ನೂರಕ್ಕೆ ನೂರು ದೇಶದ ಜತೆ ನಿಲ್ಲುತ್ತೇವೆ. ರಾಜ್ಯದಲ್ಲಿ ಸುರಕ್ಷತೆ ಕುರಿತು ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಉಗ್ರಗಾಮಿಗಳ ನೆಲೆಗಳನ್ನು ಧೂಳೀಪಟ ಮಾಡಿ ಉಗ್ರರನ್ನು ಶಿಕ್ಷಿಸಿದ ನಮ್ಮ ಸೈನಿಕರ ಧೀರೋದ್ದಾತ ಪರಾಕ್ರಮದಿಂದ ಪಹಲ್ಗಾಂ ಹತ್ಯಾಕಾಂಡದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತುಸು ನೆಮ್ಮದಿ, ಸಮಾಧಾನ ಸಿಕ್ಕಿರಬಹುದೆಂದು ಭಾವಿಸಿದ್ದೇನೆ ಎಂದರು.

ರಾಜ್ಯದಲ್ಲಿ ಭದ್ರತಾ ವ್ಯವಸ್ಥೆ ಮೇಲೆ ನಿಗಾಕ್ಕೆ ಸೂಚಿನೆ ನೀಡಿದ್ದೇನೆ: ಸಿಎಂ

ಇದು ನಾವೆಲ್ಲರೂ ಒಗ್ಗಟ್ಟಿನಿಂದ ಮತ್ತು ಅಷ್ಟೇ ಎಚ್ಚರದಿಂದ ಇರಬೇಕಾದ ಕಾಲ. ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆ ನಿಗಾ ಇಡುವಂತೆ ಪೊಲೀಸ್ ವರಿಷ್ಠರಿಗೆ ತಿಳಿಸಿದ್ದೇನೆ. ನಮ್ಮ ಸರ್ಕಾರ ಕೇಂದ್ರ ಸರ್ಕಾರದ ಜೊತೆಯಲ್ಲೂ ಸಂಪರ್ಕದಲ್ಲಿರುತ್ತದೆ. ಅಲ್ಲಿಂದ ಬರುವ ಸೂಚನೆಗಳನ್ನು ಪಾಲಿಸಲಾಗುತ್ತದೆ. ಹಲವು ಕಡೆ ಮಾಕ್‌ ಡ್ರಿಲ್‌ ಮಾಡಿದ್ದೇವೆ. ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!