ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಮ್ಮ ಅಪ್ಪನಾಣೆಗೂ ಸರ್ಕಾರ ಆಗಲಿ, ನಾವಾಗಲಿ ನೀರು ಬಿಟ್ಟಿಲ್ಲ. ನನಗೆ ನೀರಾವರಿಯಲ್ಲಿ ಎಲ್ಲರಿಗಿಂತ ಪ್ರಭುತ್ವ ಸ್ಥಾಪಿಸಿದ್ದೀನಿ. ನನಗೆ ಕ್ಷಣ ಕ್ಷಣದ ಮಾಹಿತಿ ಇದ್ದು, ನಾನು ಅಣೆಕಟ್ಟೆಯಿಂದ ನೀರು ಎಷ್ಟು ಹೋಗುತಿದೆ ಎಂದು ಪ್ರತಿ ಸೆಕೆಂಡ್‌ಗೂ ಮಾಹಿತಿ ಪಡೆಯುತ್ತಿದ್ದೇನೆ. ಈ ಹಿಂದೆ ಕುಡಿಯುವ ಉದ್ದೇಶಕ್ಕಾಗಿ ನದಿಗೆ ನೀರು ಬಿಟ್ಟಿದ್ದೀವಿ. ಆವಾಗ ಯಾವ ರೈತರು ಕೇಳಲೇ ಇಲ್ಲ ಎಂದು ಹೇಳಿದ್ದಾರೆ.
ಎಲ್ಲರ ಕಣ್ಣೆದುರೇ ಹೆಚ್ಚಿನ ಪ್ರಮಾಣದಲ್ಲಿ ನದಿ ಮೂಲಕ ನೀರು ಹರಿದು ಹೋಗುತ್ತಿದೆ. ಹೀಗಿದ್ದರೂ ಶಾಸಕರು ಸರ್ಕಾರವನ್ನು ಮೆಚ್ಚಿಸಲು ನಮ್ಮಪ್ಪನಾಣೆಗೂ ತಮಿಳುನಾಡಿಗೆ ಕೆಆರ್ ಎಸ್ ಅಣೆಕಟ್ಟೆಯಿಂದ ನೀರು ಬಿಟ್ಟಿಲ್ಲ ಎಂದು ಉಡಾಫೆ ಉತ್ತರ ನೀಡಿರುವುದು ಅವರಿಗೆ ಶೋಭೆಯಲ್ಲ. ಈ ಕ್ಷೇತ್ರದ ಜನಪ್ರತಿನಿಧಿಯಾಗಿ ದಿ.ಬಂಡಿಸಿದ್ದೇಗೌಡರ ಮೇಲೆ ಆಣೆ ಮಾಡಿರುವುದು ಸರಿಯಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.ಈ ಸಂಬಂಧ ರೈತ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ಪ್ರತಿಕ್ರಿಯಿಸಿ, ಕೆಆರ್‌ಎಸ್ ಅಣೆಕಟ್ಟೆಯಿಂದ ವಿಶ್ವೇಶ್ವರಯ್ಯ ನಾಲೆಗೆ ನೇರವಾಗಿ ನೀರು ಬಿಡಲಾಗುತ್ತದೆ. ಉಳಿದಂತೆ ಸಿಡಿಎಸ್, ವಿರಿಜಾ, ಬಂಗಾರದೊಡ್ಡಿ, ರಾಮಸ್ವಾಮಿ ಮತ್ತು ಕೊನೆಯದಾಗಿ ರಾಜಪರಮೇಶ್ವರಿ ಅಣೆಕಟ್ಟೆ ಇದೆ. ಆ ಅಣೆಕಟ್ಟೆ ಮೇಲೆ ಸುಮಾರು ಒಂದರಿಂದ ಎರಡು ಅಡಿಯಷ್ಟು ನೀರು ಹರಿದು ಹೋಗುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕ ದಿ.ಬಂಡಿಸಿದ್ದೇಗೌಡ ಅವರ ಬಗ್ಗೆ ನಾನು ಸೇರಿದಂತೆ ಕ್ಷೇತ್ರದ ಜನತೆ ಅಪಾರವಾದ ಗೌರವವಿತ್ತು. ಅವರ ಮೇಲೆ ಆಣೆ ಮಾಡುವುದು ಸರಿಯಲ್ಲ. ಬಂಡಿಸಿದ್ದೇಗೌಡರು ನಿಮ್ಮ ತಂದೆ ಇರಬಹುದು. ಆದರೆ, ಈ ಕ್ಷೇತ್ರದ ಪ್ರತಿನಿಧಿಯಾಗಿ ಬಹಳ ಗೌರವಯುತ ರಾಜಕಾರಣ ಮಾಡಿದ್ದರು. ಅವರ ಮೇಲೆ ಆಣೆ ಮಾಡುವಂಥ ಸಣ್ಣತನಕ್ಕೆ ಶಾಸಕರು ಇಳಿಯಬಾರದು ಎಂದರು.