ಗಂಡುಮಗ ನಾನು, ಭದ್ರಾ ಸಕ್ಕರೆ ಕಾರ್ಖಾನೆ ನುಂಗೋಕೆ ಬಿಡಲ್ಲ: ಎಚ್.ಎಸ್.ಶಿವಶಂಕರ

KannadaprabhaNewsNetwork | Updated : May 02 2024, 10:37 AM IST

ಸಾರಾಂಶ

ಪಂಚಮಸಾಲಿ ಸಮಾಜದವರ ಆಸ್ತಿಯಾದ ಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಬಳಿಸಲು ಕೆಲವರು ಹೊರಟಿದ್ದು, ನಾನು ಗಂಡು ಮಗ ಅಂತಹದ್ದಕ್ಕೆಲ್ಲಾ ಬಿಟ್ಟಿಲ್ಲ ಎಂದು ಹರಿಹರದ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಎಚ್.ಎಸ್.ಶಿವಶಂಕರ ದಾವಣಗೆರೆಯಲ್ಲಿ ಗುಡುಗಿದ್ದಾರೆ.

 ದಾವಣಗೆರೆ :  ಪಂಚಮಸಾಲಿ ಸಮಾಜದವರ ಆಸ್ತಿಯಾದ ಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಬಳಿಸಲು ಕೆಲವರು ಹೊರಟಿದ್ದು, ನಾನು ಗಂಡು ಮಗ ಅಂತಹದ್ದಕ್ಕೆಲ್ಲಾ ಬಿಟ್ಟಿಲ್ಲ ಎಂದು ಹರಿಹರದ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಎಚ್.ಎಸ್.ಶಿವಶಂಕರ ಗುಡುಗಿದ್ದಾರೆ.

ನಗರದ ಬಂಟರ ಭವನದಲ್ಲಿ ಬುಧವಾರ ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಸಕ್ಕರೆ ಕಾರ್ಖಾನೆ ನಮ್ಮ ಸಮಾಜದ ಆಸ್ತಿ. ಗಾಂಜಿ ವೀರಪ್ಪನವರು, ಎಚ್.ಶಿವಪ್ಪನಂತಹ ಹಿರಿಯರು, ಸಮಾಜದವರು, ರೈತರು, ಕಾರ್ಮಿಕರು ಕಟ್ಟಿ, ಬೆಳೆಸಿದ ಕಾರ್ಖಾನೆ ಎಂದರು.

ಕಾರ್ಖಾನೆಯನ್ನು 2003ರಲ್ಲಿ ಬರದ ಹಿನ್ನೆಲೆಯಲ್ಲಿ ಮುಚ್ಚಲಾಯಿತು. ನಂತರ 300-400 ಕೋಟಿ ರು. ಸಾಲದ ಕಾರಣಕ್ಕೆ ಹರಾಜಿಗೆ ಮುಂದಾಗಿದ್ದರು. ಆದರೆ, ಕೇವಲ 52 ಕೋಟಿಗೆ ಹರಾಜಿಗೆ ನಿಲ್ಲಿಸಿದ್ದರು. ನಾನು ಗಂಡು ಮಗ ಕಾರ್ಖಾನೆ ಪಡೆದುಕೊಳ್ಳಲು ಬಿಟ್ಟಿಲ್ಲ. ಸಮಾಜದ ಆಸ್ತಿಯನ್ನು ಕಬಳಿಸಲು ಕೆಲವರು ಹೊರಟಿದ್ದರೆ, ಬೆಲೆ ಕಟ್ಟಲಾಗದ ಇಂತಹ ಆಸ್ತಿಯನ್ನು ಉಳಿಸಲು ನಾನು ಹೋರಾಟ ನಡೆಸಿದ್ದೇನೆ. ಸಂಸದ ಸಿದ್ದೇಶ್ವರ ಕಾರ್ಖಾನೆ ಖರೀದಿಸಲು ಹೊರಟಿದ್ದರೆಂಬುದು ಸುಳ್ಳು. ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಕಾರ್ಖಾನೆ ಖರೀದಿಸಲು ನಡೆಸಿದ ಪ್ರಯತ್ನ ತಡೆದವನು ನಾನು ಎಂದು ಅವರು ಭಾವುಕರಾದರು.

ಪಂಚಮಸಾಲಿ ಸಮಾಜದಲ್ಲಿ ಕೊಂಡಿ ಮಂಜಣ್ಣ, ಮಲ್ಲಪ್ಪ ಶೆಟ್ಟಿ, ಮೀರ್ ಸಾದಿಕ್‌ನಂತಹ ಮನಸ್ಥಿತಿಯ ಕೆಲವರು ಕಾಂಗ್ರೆಸ್ ಪಕ್ಷಕ್ಕೆ ಪಂಚಮಸಾಲಿ ಸಮಾಜದ ಬೆಂಬಲವಿದೆಯೆಂದು ಬಿಂಬಿಸಲು ಹೊರಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನು ಒಡೆದು, ಕಾಂಗ್ರೆಸ್ಸನ್ನು ಬೆಂಬಲಿಸುತ್ತಿದ್ದಾರೆ. 2 ಎ ಮೀಸಲಾತಿ ಹೋರಾಟದ ಪಾದಯಾತ್ರೆಗೆ ಬಂದಾಗ ಕಾಂಗ್ರೆಸ್ಸಿನ ಯಾವ ನಾಯಕ ಬಂದು, ಬೆಂಬಲಿಸಿದ್ದರು. ಯಾರಾದರೂ ಬಂದು ಬೆಂಬಲಿಸಿದ್ದರೆ ಅದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಮಾತ್ರ ಎಂದು ಅವರು ಸ್ಪಷ್ಟಪಡಿಸಿದರು.

ಮೀಸಲಾತಿ ಹೋರಾಟಕ್ಕೆ ನಡುವಲ್ಲೇ ಬಂದು, ಅರ್ಧದಲ್ಲೇ ಸ್ವಾಮೀಜಿಯೊಬ್ಬರು ಬಿಟ್ಟು ಹೋದರು. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸ್ವಾಮೀಜಿ ಕರೆಸಿಕೊಂಡು ಸನ್ಮಾನಿಸಿದರು. ಈಗ ಅದೇ ಸ್ವಾಮಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ಪಂಚಮಸಾಲಿ ಮತಗಳೇ ನಿರ್ಣಾಯಕ. ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಗೆಲುವು ನಿಶ್ಚಿತವಾಗಿದೆ. ಗೆಲುವಿನ ನಂತರ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ, ಸಮಾಜಕ್ಕೆ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು. ಸಮಾಜದ ನಾಯಕ ಆದವರು ಸಿಂಹದಂತೆ ಇರಬೇಕೆ ಹೊರತು, ಕಳ್ಳ ಬೆಕ್ಕಿನಂತೆ ಅಲ್ಲಿ, ಇಲ್ಲಿ ಹೋಗಬಾರದು. ಸಮಾಜದಿಂದ ತಿರಸ್ಕೃತಗೊಂಡವರು, ಪಕ್ಷದಿಂದ ಹೊರ ಹಾಕಲ್ಪಟ್ಟವರು, ಗತಿಯಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಸಿದ್ದವೀರಪ್ಪನವರು ಕಟ್ಟಿದ ಸಕ್ಕರೆ ಕಾರ್ಖಾನೆ ನುಂಗಿದ್ದಾರೆ. ಗಾಂಜಿ ವೀರಪ್ಪನವರು, ಎಚ್.ಶಿವಪ್ಪನವರು ಕಟ್ಟಿದ ಕಾರ್ಖಾನೆಗೆ ಕೈ ಹಾಕಲು ನಾನು ಬಿಡುವುದಿಲ್ಲ. ಭದ್ರಾ ಕಾರ್ಖಾನೆ ಹೇಗೆ ಹುಟ್ಟಿತು, ಹೇಗೆ ಮುಚ್ಚಿತೆಂಬುದು ಗೊತ್ತಿದೆಯಾ? ಬಿಚ್ಚಿಡಲು ಹೋದರೆ ದಿನಗಟ್ಟಲೇ ಮಾತನಾಡಬೇಕಾಗುತ್ತದೆ. ನಾನಿರೋವರೆಗೂ ಭದ್ರಾ ಕಾರ್ಖಾನೆ ಸುಭದ್ರವಾಗಿರುತ್ತದೆ ಎಂದು ಎಚ್ಚೆಸ್ ಶಿವಶಂಕರ್ ಪುನರುಚ್ಛರಿಸಿದರು.

ಹುಬ್ಬಳ್ಳಿ ಧಾರವಾಡ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಲಿಂಗಾಯತ ಸಮುದಾಯಕ್ಕೆ 2 ಡಿ ಅಡಿ ನೀಡಿದ್ದ ಶೇ.7 ಮೀಸಲಾತಿ ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ರವಿ

ಕುಮಾರ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಮುಸ್ಲಿಮರಿಗೆ 2 ಬಿ ಅಡಿಯಲ್ಲಿ ಧರ್ಮಾದಾರಿತವಾಗಿ ನೀಡಿರುವ ಮೀಸಲಾತಿಯು ಸಂವಿಧಾನ ಬಾಹಿರವಾಗಿದೆ. ಈ ಬಗ್ಗೆ ತಾವು ಬಿಜೆಪಿ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಸಂವಿಧಾನ ಬಾಹಿರವಾದ ಈ ಮೀಸಲಾತಿ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದೆ ಎಂದರು. 

Share this article