ಕನ್ನಡಪ್ರಭ ವಾರ್ತೆ ಮಂಡ್ಯನಾನೂ ಕೂಡ ಟ್ರಯಲ್ ಬ್ಲಾಸ್ಟ್ ವಿರೋಧಿ. ನನಗೆ ಕೃಷ್ಣರಾಜಸಾಗರ ಅಣೆಕಟ್ಟು ಕಾಪಾಡುವುದೇ ಮುಖ್ಯ. ಕಾವೇರಿಪುರದ ಜನರಿಗೆ ಕೈಕುಳಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದಕ್ಕಷ್ಟೇ ನನ್ನ ಆದ್ಯತೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣಕ್ಕೆ ಬಂದಂತಹ ಕಾವೇರಿಪುರ ಸೇರಿದಂತೆ ಎಂಟು ಪಂಚಾಯಿತಿ ಜನರ ಬದುಕು ಗಣಿಗಾರಿಕೆ ಸ್ಥಗಿತದಿಂದ ಅತಂತ್ರವಾಗಿದೆ. ಆ ಜನರ ಬದುಕು ಕೂಡ ಬದಲಾಗಬೇಕು. ಅವರು ಶಾಶ್ವತವಾಗಿ ಗಣಿಗಾರಿಕೆಯನ್ನೇ ಮಾಡಿಕೊಂಡಿರಬಾರದು. ಅದಕ್ಕೆ ಪೂರಕವಾಗಿ ಅವಕಾಶಗಳನ್ನು ತೆರೆದಿಟ್ಟು ಮನವರಿಕೆ ಮಾಡುತ್ತಿದ್ದೇವೆ ಎಂದರು.
ಈ ಜನರನ್ನು ಮುಂದಿಟ್ಟುಕೊಂಡು ಗಣಿ ಮಾಲೀಕರು ದೊಡ್ಡ ಪ್ರಮಾಣದ ಗಣಿಗಾರಿಕೆಗೆ ಕುತಂತ್ರ ನಡೆಸಿದ್ದರೆ ಅಥವಾ ಎಂಟು ಪಂಚಾಯಿತಿಯ ಜನರು ಸ್ಫೋಟ ಮಾಡಿಯೇ ಗಣಿಗಾರಿಕೆ ನಡೆಸುತ್ತೇವೆಂದರೆ ಅದಕ್ಕೆ ನಾವು ಅವಕಾಶವನ್ನು ನೀಡುವುದಿಲ್ಲ. ಅವರ ಪರವಾಗಿಯೂ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದರು.ನನ್ನನ್ನು ಭೇಟಿಯಾಗಿರುವುದು ಸತ್ಯ:
ನಾನೂ ಸೇರಿದಂತೆ ಇತರೆ ಕಾಂಗ್ರೆಸ್ ಶಾಸಕರನ್ನೂ ಅಭ್ಯರ್ಥಿಗಳು ಭೇಟಿಯಾಗಿದ್ದಾರೆ. ಅವರೊಂದಿಗೆ ಏನೇನು ಚರ್ಚೆ ಮಾಡಿದ್ದಾರೆ ಎಂಬ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಆಧರಿಸಿ ಶಾಸಕ ಪಿ.ರವಿಕುಮಾರ್ ದೂರು ಕೊಟ್ಟಿರಬಹುದು ಎಂದು ಸಮರ್ಥಿಸಿಕೊಂಡರು.
ಪಕ್ಷದವರೊಂದಿಗೆ ಚರ್ಚಿಸುವೆ:
ಇದು ನನ್ನೊಬ್ಬನ ನಿರ್ಧಾರವಲ್ಲ. ಪಕ್ಷದ ನಾಯಕರು ಮತ್ತು ರೈತಸಂಘದ ಮುಖಂಡರೆಲ್ಲರ ಜೊತೆ ಮಾತುಕತೆ ನಡೆಸಿ ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ. ಅವರೆಲ್ಲರ ನಿರ್ಧಾರದಂತೆ ನಾನೂ ನಡೆಯುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಚಂದ್ರಣ್ಣ, ದಯಾನಂದ, ವಿಜಯಕುಮಾರ್, ನಾಗರಾಜು ಮತ್ತಿತರರಿದ್ದರು.