ಸಿದ್ದುಗಾಗಿ 3 ಸಲ ಸೋನಿಯಾ ಮನೆಗೆ ಹೋಗಿದ್ದೆ : ಎಚ್‌.ಡಿ.ದೇವೇಗೌಡ

KannadaprabhaNewsNetwork |  
Published : Nov 23, 2025, 02:00 AM ISTUpdated : Nov 23, 2025, 12:43 PM IST
HD Devegowda

ಸಾರಾಂಶ

  ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಮೂರು ಬಾರಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮನೆ ಬಾಗಿಲಿಗೆ ನಾನು ಹೋಗಿದ್ದೆ. ಜೆಡಿಎಸ್‌ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.

  ಬೆಂಗಳೂರು :  ಜಮ್ಮು-ಕಾಶ್ಮೀರ ಮಾದರಿಯಲ್ಲಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷದಿಂದ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಮೂರು ಬಾರಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮನೆ ಬಾಗಿಲಿಗೆ ನಾನು ಹೋಗಿದ್ದೆ. ಜೆಡಿಎಸ್‌ ಪಕ್ಷಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಏನು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.

ಜೆಡಿಎಸ್‌ ರಜತ ಮಹೋತ್ಸವದ ಪ್ರಯುಕ್ತ ಪಕ್ಷದ ರಾಜ್ಯ ಕಚೇರಿಯಲ್ಲಿ ಶನಿವಾರ ನಡೆದ ಜೆಡಿಎಸ್‌ ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲೇ ಇದ್ದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಅಪ್ಪ-ಮಗ ಸಿಎಂ ಆಗಲು ಬಿಡುತ್ತಿರಲಿಲ್ಲ ಎಂಬ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರನ್ನು ನಾನು ಸಿಎಂ ಮಾಡಲು ತಯಾರಿದ್ದೆ. ಆದರೆ ಸೋನಿಯಾ ಗಾಂಧಿ ಅವರು ಧರ್ಮಸಿಂಗ್ ಅವರನ್ನು ಸಿಎಂ ಮಾಡಲು ಪಟ್ಟು ಹಿಡಿದರು. ಕಾಶ್ಮೀರದಲ್ಲಿ ಗುಲಾಮ್ ನಬಿ ಆಜಾದ್ ಅವರನ್ನು ಡಿಸಿಎಂ ಮಾಡಿದ್ದೀರಿ, ಮುಫ್ತಿ ಮೊಹಮ್ಮದ್ ಸಯೀದ್ ಅವರನ್ನು ಸಿಎಂ ಮಾಡಿದ್ದೀರಿ. ಅದೇ ರೀತಿ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡಿ ಎಂದು ಮೂರು ಬಾರಿ ಸೋನಿಯಾ ಗಾಂಧಿ ಮನೆ ಬಾಗಿಲಿಗೆ ಹೋಗಿ ಕೇಳಿದ್ದೆ. ಸೋನಿಯಾ ಗಾಂಧಿ ಇನ್ನೂ ಬದುಕಿದ್ದಾರೆ. ಬೇಕಿದ್ದರೆ ಅವರನ್ನೇ ಸಿದ್ದರಾಮಯ್ಯ ಕೇಳಲಿ ಎಂದು ಹೇಳಿದರು.

ಚೆಕ್‌ ಕೊಟ್ಟು ₹2 ಕೋಟಿ ಸಾಲ ತಂದಿದ್ದೆ:

2004ರ ಚುನಾವಣೆಯಲ್ಲಿ ಜೆಡಿಎಸ್‌ 58 ಸ್ಥಾನ ಗೆದ್ದಿತ್ತು. ಈ ಚುನಾವಣೆಗೆ ನಾನು ಚನ್ನಪ್ಪ ಎನ್ನುವ ಲೇವಾದೇವಿಗಾರನ ಮನೆಗೆ ರಾತ್ರಿ ಹನ್ನೆರಡು ಗಂಟೆಗೆ ಹೋಗಿ ಎರಡು ಚೆಕ್‌ ಕೊಟ್ಟು ₹2 ಕೋಟಿ ಸಾಲ ತಂದಿದ್ದೆ. ಆಗ ಸಿದ್ದರಾಮಯ್ಯ ಏನು ಮಾಡುತ್ತಿದ್ದರು. ಮಾತಾಡುವಾಗ ಕನಿಷ್ಠ ಪ್ರಮಾಣದ ಕ್ರಿಯೆ ಇರಬೇಕು, ಪ್ರಾಮಾಣಿಕತೆ ಇರಬೇಕು. ಸುಳ್ಳು ಹೇಳಬಾರದು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ರಾಜ್ಯಾಧ್ಯಕ್ಷ ಮಾಡಬೇಡಿ ಎಂದಿದ್ದರು:

ಅನೇಕ ಸಂದರ್ಭಗಳಲ್ಲಿ ನಾನು ಈ ವ್ಯಕ್ತಿಯನ್ನು ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕಣ್ಣೀರು ಇಟ್ಟೆ. ಅವರನ್ನು ಹಣಕಾಸು ಮಂತ್ರಿ ಮಾಡಿದ್ದು ಹೆಗಡೆ ಅಲ್ಲ, ನಾನು. ಅದನ್ನು ಆ ಮನುಷ್ಯ ನೆನಪು ಇಟ್ಟುಕೊಳ್ಳಬೇಕು. ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಏನೂ ಕೊಡುಗೆ ನೀಡಿಲ್ಲ. ನಾನು ಆ ವ್ಯಕ್ತಿಯನ್ನು ಪಕ್ಷದ ರಾಜ್ಯದ ಅಧ್ಯಕ್ಷ ಮಾಡಬೇಕು ಎಂದು ಹೊರಟಾಗ ರಾಮಕೃಷ್ಣ ಹೆಗಡೆ ಅವರು ತಮ್ಮ ಕೋಣೆಯಲ್ಲಿ ನನ್ನ ಕೈ ಹಿಡಿದು ಯಾರನ್ನಾದರೂ ಮಾಡು, ಆತನನ್ನು ಮಾತ್ರ ಮಾಡಬೇಡ ಎಂದು ಹೇಳಿದ್ದರು. ಆದರೂ ನಾನು ಹೆಗಡೆ ಅವರ ಮಾತು ಕೇಳಲಿಲ್ಲ ಎಂದು ದೇವೇಗೌಡರು ಹೇಳಿದರು.

ಅಹಿಂದ ಸಮಾವೇಶ ಬೇಡ ಎಂದು ವಿನಂತಿಸಿದ್ದೆ:

ಸಿದ್ದರಾಮಯ್ಯ ಅವರು ಅಹಿಂದ ಸಮಾವೇಶ ಮಾಡಲು ಹೊರಟಾಗ ಅದನ್ನು ಪಕ್ಷದ ವೇದಿಕೆಯಲ್ಲಿ ಮಾಡಿ ಎಂದು ಸೂಚಿಸಿದೆ. ಅದನ್ನು ಅವರು ಕೇಳಲಿಲ್ಲ. ಪ್ರತ್ಯೇಕವಾಗಿ ಹುಬ್ಬಳ್ಳಿಯಲ್ಲಿ ಸಮಾವೇಶ ಮಾಡುವುದಾಗಿ ಹೊರಟರು. ಕೊನೆಗೆ ಬೇರೆ ದಾರಿ ಇರಲಿಲ್ಲ. ಹೀಗಾಗಿ ನಾನು ಅವರನ್ನು ಪಕ್ಷದಿಂದ ಹೊರ ಹಾಕಲು ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಯಾವ ಪಶ್ಚಾತ್ತಾಪವು ಇಲ್ಲ. ಇಂತಹವರು ಅನೇಕರು ಬಂದಿದ್ದಾರೆ, ಹೋಗಿದ್ದಾರೆ. ಹೆದರುವುದಿಲ್ಲ. ನಾನು ಪಕ್ಷ ಕಟ್ಟುತ್ತೇನೆ. ಎಲ್ಲಿ ಕರೆದರೂ ಹೋಗುತ್ತೇನೆ. ದೇವೇಗೌಡ ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಅಬ್ಬರಿಸಿದರು.

ಎನ್‌ಡಿಎ ಮೈತ್ರಿ ಅಭಾದಿತ

ಯಾವುದೇ ಕಾರಣಕ್ಕೂ ನಾವು ಎನ್‌ಡಿಎ ಮೈತ್ರಿ ಕಡಿದುಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ನಾಯಕತ್ವದಲ್ಲಿ ವಿಶ್ವಾಸ ಇರಿಸಿದ್ದೇವೆ. ನಾವು ಎನ್‌ಡಿಎ ಜತೆ ಇದ್ದೇವೆ. ಮೋದಿ ಅವರ ನೇತೃತ್ವದಲ್ಲಿ ವಿಶ್ವಾಸ ಇಟ್ಟಿದ್ದೇವೆ. ಅವರ ನೇತೃತ್ವದಲ್ಲಿ ಬಲಿಷ್ಠ ಸರ್ಕಾರ ಇದೆ. ಇದನ್ನು ನಮ್ಮ ಕಾರ್ಯಕರ್ತರು, ಮುಖಂಡರು ಯಾರು ಮರೆಯಬಾರದು. ನಾವು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಬೇಕಿದೆ. ಕಾಂಗ್ರೆಸ್ ಪಕ್ಷದ ಕೆಟ್ಟ ಆಡಳಿತಕ್ಕೆ ಪಾಠ ಕಲಿಸಬೇಕು ಎಂದು ಎಚ್‌.ಡಿ.ದೇವೇಗೌಡರು ಗುಡುಗಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮರಳು ಮಾಫಿಯಾದಿಂದ ಶಾಸಕಿ ಕರೆಮ್ಮಗೆ ಬೆದರಿಕೆ
ಉಡುಪಿಯ ಕೃಷ್ಣಮಠದಲ್ಲಿ ಇನ್ನು ಭಕ್ತರಿಗೆ ಕಟ್ಟುನಿಟ್ಟಿನ ನಿಯಮ ಜಾರಿ