ಉಪ ಚುನಾವಣೆಗೆ ನಾನೂ ಸ್ಪರ್ಧೆ: ಕೃಷ್ಣಮೂರ್ತಿ ಪವಾರ್‌

KannadaprabhaNewsNetwork |  
Published : Mar 08, 2026, 02:00 AM IST
6ಕೆಡಿವಿಜಿ13-ದಾವಣಗೆರೆಯಲ್ಲಿ ಶುಕ್ರವಾರ ಬಿಜೆಪಿ ಹಿರಿಯ ಮುಖಂಡ ಎಂ.ಪಿ.ಕೃಷ್ಣಮೂರ್ತಿ ಪವಾರ್ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಾವೂ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ದಶಕಗಳ ತಮ್ಮ ಪಕ್ಷನಿಷ್ಠೆ ಸೇವೆಯನ್ನು ಗುರುತಿಸಿ, ಸಾಮಾನ್ಯ ಕಾರ್ಯಕರ್ತನಾದ ತಮಗೆ ಅವಕಾಶ ನೀಡುವಂತೆ ಬಿಜೆಪಿ ಹಿರಿಯ ಮುಖಂಡ, ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಪಿ.ಕೃಷ್ಣಮೂರ್ತಿ ಪವಾರ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

- ಸಂಘ, ಬಿಜೆಪಿ ಸೇವೆಗಳ ಪರಿಗಣಿಸಿ ವರಿಷ್ಠರು ಅವಕಾಶ ನೀಡುವ ವಿಶ್ವಾಸ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ತಾವೂ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದೇನೆ. ದಶಕಗಳ ತಮ್ಮ ಪಕ್ಷನಿಷ್ಠೆ ಸೇವೆಯನ್ನು ಗುರುತಿಸಿ, ಸಾಮಾನ್ಯ ಕಾರ್ಯಕರ್ತನಾದ ತಮಗೆ ಅವಕಾಶ ನೀಡುವಂತೆ ಬಿಜೆಪಿ ಹಿರಿಯ ಮುಖಂಡ, ಪಾಲಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಂ.ಪಿ.ಕೃಷ್ಣಮೂರ್ತಿ ಪವಾರ್ ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮೂಲಕ ಸಮಾಜಕ್ಕೋಸ್ಕರ ನನ್ನ ಸೇವೆ ಸಲ್ಲಿಸಿದ್ದೇನೆ. ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದೇನೆ. 90ರ ದಶಕದಲ್ಲಿ ಅವಿಭಜಿತ ಚಿತ್ರದುರ್ಗ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದೆ. 1998ರಲ್ಲಿ ನೂತನ ದಾವಣಗೆರೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷನಾಗಿದ್ದೆ. 2004ರಲ್ಲಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ, 2006ರಲ್ಲಿ ರಾಜ್ಯ ಸ್ಲಂ ಮೋರ್ಚಾ ಉಪಾಧ್ಯಕ್ಷ, 2008ರಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ, 2009ರಲ್ಲ ಪಾಲಿಕೆ ಸದಸ್ಯನಾಗಿ, 2015ರಿಂದ 16ರವರೆಗೆ ಜಿಲ್ಲಾ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಹೇಳಿದರು.

ಪಕ್ಷ ನೀಡಿದ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಕ್ಕೆ ನೂತನ ಪಾಲಿಕೆ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಅವಕಾಶ ನೀಡಿತ್ತು. 2009ರಿಂದ 2013ರವರೆಗೆ ಪಾಲಿಕೆ ಸದಸ್ಯನಾಗಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಜನಸಾಮಾನ್ಯರ ನೆಚ್ಚಿನ ಚುನಾಯಿತ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೇನೆ. 1989ರಲ್ಲಿ ಧರ್ಮದ ಹೋರಾಟವಾಗಿದ್ದ ಶ್ರೀರಾಮನ ಪಾದುಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. 1990 ಮತ್ತು 1993ರಲ್ಲಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ನೇತೃತ್ವದ ಶ್ರೀರಾಮ ರಥಯಾತ್ರೆಯಲ್ಲಿ ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

ದಶಕಗಳ ಹಿಂದೆ ದಾವಣಗೆರೆಯ ಗೋಲಿಬಾರ್‌ನಲ್ಲಿ ಗಾಯಗೊಂಡ ರಾಮಭಕ್ತರಿಗೆ ಚಿಕಿತ್ಸೆ ಕೊಡಿಸುವ, ಜೀವ ಉಳಿಸುವ ಕೆಲಸ ಮಾಡಿದ್ದೇನೆ. ರಥಯಾತ್ರೆಗೆ ಸಂಬಂಧಿಸಿದಂತೆ ಅಂದಿನ ಕಾಂಗ್ರೆಸ್ ಸರ್ಕಾರ ನಡೆಸಿದ ಸಿಒಡಿ ತನಿಖೆಗೊಳಪಟ್ಟು ಸೆರೆವಾಸ, ಆಗ ನೀಡಿದ್ದ ಹೀನಶಿಕ್ಷೆ ಅನುಭವಿಸಿದ್ದೇನೆ. ಅನಂತರ ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿ ಬಳಗವನ್ನ ಸ್ಥಾಪಿಸಿ, 1993ರ ರಥಯಾತ್ರೆಯಲ್ಲಿ ಹುತಾತ್ಮರು ಹಾಗೂ ಗಾಯಾಳುಗಳ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ನೈತಿಕ ಧೈರ್ಯವನ್ನು ತುಂಬಿ, ಕೈಲಾದ ನೆರವನ್ನು ಸಿ.ಟಿ.ರವಿ ನೇತೃತ್ವದಲ್ಲಿ ನೀಡಿದ್ದೇನೆ ಎಂದು ವಿವರಿಸಿದರು.

ಪಕ್ಷದ ಹಿರಿಯ ಮುಖಂಡರಾದ ಬಿ.ಎಂ.ಷಣ್ಮುಖಯ್ಯ ಆವರಗೊಳ್ಳ, ಎಚ್.ಎಸ್.ಲಿಂಗರಾಜ, ರಾಮಚಂದ್ರ, ಗೌಳಿ ಲಿಂಗರಾಜ, ಪಿ.ಎಸ್.ಜಗದೀಶ ಕುಮಾರ ಪಿಸೆ, ಕೆಟಿಜೆ ನಗರ ಲೋಕೇಶ, ಮಹಾಂತೇಶ ಇತರರು ಇದ್ದರು.

- - -

(ಬಾಕ್ಸ್‌) * ಟಿಕೆಟ್‌ ಸಿಗದಿದ್ದರೆ ಅಭ್ಯರ್ಥಿ ಪರ ಕೆಲಸದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ತಮ್ಮನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿ, ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕು. ಈ ಕುರಿತು ಈಗಾಗಲೇ ರಾಜ್ಯ ಉಸ್ತುವಾರಿ ರಾಧಾಮೋಹನ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜಗದೀಶ ಶೆಟ್ಚರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ ಸೇರಿದಂತೆ ರಾಜ್ಯ ನಾಯಕರಿಗೂ ಮನವಿ ಮಾಡಿದ್ದೇನೆ. ನನ್ನಂತಹ ಹಿರಿಯ ಕಾರ್ಯಕರ್ತನಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ. ಇಲ್ಲವಾದರೆ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತೇನೆ ಎಂದು ಎಂ.ಪಿ.ಕೃಷ್ಣಮೂರ್ತಿ ಪವಾರ್ ಸ್ಪಷ್ಪಪಡಿಸಿದರು.

- - -

-6ಕೆಡಿವಿಜಿ13: ದಾವಣಗೆರೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಎಂ.ಪಿ.ಕೃಷ್ಣಮೂರ್ತಿ ಪವಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರ್ಖಾನೆಯ ಮಾಲಿನ್ಯದಿಂದ ಕೃಷಿ ವಲಯಕ್ಕೆ ಬಿಕ್ಕಟ್ಟು; ಕ್ರಮಕ್ಕೆ ಆಗ್ರಹ
ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಎಸಿ ವ್ಯವಸ್ಥೆಯೇ ಇಲ್ಲ