2028ಕ ವಿಧಾನಸಭಾ ಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Oct 05, 2026, 01:45 AM IST
4ಕೆಎಂಎನ್ ಡಿ17 | Kannada Prabha

ಸಾರಾಂಶ

ನಾನೊಬ್ಬ ಬಡ ರೈತನ ಮಗ. ನಾನು ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯನಾಗಿ ಸದಾ ಸಾರ್ವಜನಿಕರ ಸಂಪರ್ಕದಲ್ಲಿರುವ ವ್ಯಕ್ತಿ ನಾನು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ. 2023 ರ ಚುನಾವಣೆಯಲ್ಲಿ ನೀವು ನನ್ನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಶಾಸಕನನ್ನಾಗಿ ಮಾಡಿದ್ದೀರಿ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

2028ರ ವಿಧಾನ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತ್ತೊಮ್ಮೆ ನಾನೇ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಮ್ಮ ಮುಂದೆ ಬರುವುದು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ತಾಲೂಕಿನ ಶೀಳನೆರೆ ಗ್ರಾಮದಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಬಹುನಿರೀಕ್ಷಿತ ಸಂಪರ್ಕ ರಸ್ತೆಯ ಹಳ್ಳಕ್ಕೆ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಸುಮಾರು 80 ಲಕ್ಷ ರು. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ನೀವು ಕೊಟ್ಟಿರುವ ಆಶೀರ್ವಾದಕ್ಕೆ ನಾನು ಚಿರಋಣಿಯಾಗಿದ್ದೇನೆ ಮತ್ತೊಂದು ಅವಧಿಗೆ ನೀವು ಆಶೀರ್ವಾದ ಮಾಡಿದರೆ ನಿಮ್ಮ ಈ ಋಣವನ್ನು ತೀರಿಸಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ನಾನೊಬ್ಬ ಬಡ ರೈತನ ಮಗ. ನಾನು ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯನಾಗಿ ಸದಾ ಸಾರ್ವಜನಿಕರ ಸಂಪರ್ಕದಲ್ಲಿರುವ ವ್ಯಕ್ತಿ ನಾನು. ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗುತ್ತಿಲ್ಲ. 2023 ರ ಚುನಾವಣೆಯಲ್ಲಿ ನೀವು ನನ್ನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ ಕ್ಷೇತ್ರದ ಶಾಸಕನನ್ನಾಗಿ ಮಾಡಿದ್ದೀರಿ. ಇದರಿಂದಾಗಿ ನಿಮ್ಮ ಸೇವೆ ಮಾಡುವ ಸೇವಕನಾಗಿ ನಿಮ್ಮ ಮುಂದೆ ಇದ್ದೇನೆ ಎಂದರು.

ನನಗೆ ಶಾಸಕನೆಂಬ ಯಾವುದೇ ಹಮ್ಮು-ಬಿಮ್ಮು ಇಲ್ಲ. ಶಾಸಕ ಸ್ಥಾನ ನೀವು ಕೊಟ್ಟ ಅಧಿಕಾರ. ಅದು ನಿಮಗಾಗಿ ಮೀಸಲಿರುತ್ತದೆ ನೀವು ಯಾವಾಗ ಬೇಕಾದರೂ ನನ್ನನ್ನು ಬೇಟಿಯಾಗಬಹುದು. ದಿನದ 24 ಗಂಟೆಯೂ ನಿಮ್ಮೊಂದಿಗೆ ಇರುತ್ತೇನೆ. ನನಗೆ ರಾಜಕೀಯ ನೆಲೆ ನೀಡಿದ ಈ ಶೀಳನೆರೆಯ ಪವಿತ್ರ ನೆಲದಲ್ಲಿ ನಿಂತು ಮಾತು ಕೊಡುತ್ತಿದ್ದೇನೆ ಎಂದು ಭರವಸೆ ನೀಡಿದರು.

ಜನರ ತೆರಿಗೆ ಹಣ ವ್ಯರ್ಥವಾಗಬಾರದು...

ಜನರ ತೆರಿಗೆ ಹಣ ವ್ಯರ್ಥವಾಗದಂತೆ ಗುತ್ತಿಗೆದಾರರು ಗುಣಮಟ್ಟದ ಭದ್ರ, ಗಟ್ಟಿಮುಟ್ಟಾದ ಸೇತುವೆ ನಿರ್ಮಿಸಬೇಕು. ಕಳೆದ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಶೀಳನೆರೆ ಗ್ರಾಮಸ್ಥರು ಕೆ.ಆರ್.ಪೇಟೆಗೆ ಬರಲು ಹರಸಾಹಸ ಪಡುತ್ತಿದ್ದರು. ಹಳ್ಳ ದಾಟಲು ಪರದಾಡುವ ಪರಿಸ್ಥಿತಿ ಇತ್ತು. ಈಗ ಈ ಸೇತುವೆ ನಿರ್ಮಾಣದಿಂದ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ ಎಂದರು.

ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳು ಪ್ರತಿದಿನ ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರ ಎನ್.ಆರ್.ರಮೇಶ್ ಅವರಿಗೆ ಸಲಹೆ ನೀಡಿದರು.

ಗ್ರಾಮಸ್ಥರು ಚುನಾವಣೆ ವೇಳೆ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಮಯದಲ್ಲಿ ಪಕ್ಷ, ಬೇಧ ಮರೆತು ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕು. ಈ ಸೇತುವೆ ನಿಮ್ಮದು, ಇದನ್ನು ಬೇಗ ಪೂರ್ಣಗೊಳಿಸಲು ಸಹಕರಿಸಿ ಎಂದು ಮನವಿ ಮಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಹತ್ತು ಹಲವು ಯೋಜನೆಗಳನ್ನು ಮುಂದಿಟ್ಟುಕೊಂಡು ನಿಮ್ಮ ಸೇವೆಗಾಗಿ ಹಗಲಿರುಳು ಓಡಾಡುತ್ತಿದ್ದೇನೆ. ಆದರೆ, ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಅನುದಾನ ಸರಿಯಾಗಿ ಬರುತ್ತಿಲ್ಲ. ನಾನು ಹಾಕಿದ ಯೋಜನೆಗಳಿಗೆ ತಡೆ ಆಗಿದೆ. ಕ್ಷೇತ್ರದ ಅಭಿವೃದ್ಧಿಗೆ ನಾನು ಅಂದುಕೊಂಡಿದ್ದನ್ನು ಮಾಡಲು ಈ ಸರ್ಕಾರ ಬಿಡುತ್ತಿಲ್ಲ. ಈ ನೋವನ್ನು ನಾನು ಇಂದು ನಿಮ್ಮ ಮುಂದೆ ಮುಚ್ಚು ಮರೆಯಿಲ್ಲದೆ ಹೇಳುತ್ತಿದ್ದೇನೆ. ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ದಿಗಿಂತ ಪಕ್ಷ ರಾಜಕಾರಣವೇ ಮುಂದಿದ್ದು ವಿರೋಧ ಪಕ್ಷದ ಶಾಸಕರ ಕ್ಷೇತ್ರಾಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ದೂರಿದರು.

ಈ ವೇಳೆ ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಟಿ.ಬಲದೇವ್, ಪುರಸಭಾ ಮಾಜಿ ಸದಸ್ಯ ಎಚ್.ಡಿ.ಅಶೋಕ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಗೌತಮಿ, ಗುತ್ತಿಗೆದಾರ ಎನ್.ಆರ್.ರಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಲಿಂಗು, ಮುಖಂಡರಾದ ಶೀಳನೆರೆ ರಾಘು, ನಾಟನಹಳ್ಳಿ ಎನ್.ಜಿ.ಸಾಗರ್, ಕೆ.ಎನ್.ರಾಘವೇಂದ್ರ, ಪ್ರಸನ್ನ, ವಿಜಯಕುಮಾರ್ ಸೇರಿದಂತೆ ಶೀಳನೆರೆ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡ ರೈತರಿಗೆ ಕಾನೂನು ಬದ್ಧವಾಗಿಯೇ ಬಗರ್‌ಹುಕುಂ ಸಾಗುವಳಿ ಜಮೀನು ಮಂಜೂರು
ಮಂಡ್ಯ: ಗುರುದೇವ ಅಕಾಡೆಮಿಯ ಗುರು ದೇವೋತ್ಸವಕ್ಕೆ ತೆರೆ