ಕನ್ನಡಪ್ರಭ ವಾರ್ತೆ ಬೇಲೂರುಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಲು ಜಿಲ್ಲಾ ಜೆಡಿಎಸ್ ಅದ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಇದಕ್ಕೆ ರಾಜಕೀಯ ಬಣ್ಣಬಳಿದು ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಬಿತ್ತರವಾಗುತ್ತಿರುವುದು ವಾಸ್ತವಾಂಶಕ್ಕೆ ದೂರವಾಗಿದೆ ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ಪಟ್ಟಣದ ಪತ್ರಕರ್ತರ ಸಂಘದಲ್ಲಿ ಮಾತನಾಡಿ, ನನ್ನ ಜೀವ ಇರುವವರೆಗೂ ಜೆಡಿಎಸ್ ಬಿಡುವುದಿಲ್ಲ. ನನ್ನಲ್ಲಿ ಪಕ್ಷದ ನಿಷ್ಠೆ ಎಷ್ಟಿದೆ ಎಂಬುಂದು ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರಿಗೆ ತಿಳಿದಿದೆ. ಆದರೆ ಸಾರ್ವಜನಿಕರಿಗೆ ತಪ್ಪು ವಿಷಯ ರವಾನೆಯಾಗಬಾರದು ಎಂಬ ದೃಷ್ಟಿಯಿಂದ ಸೃಷ್ಟಿಕರಣ ನೀಡುತ್ತಿದ್ಧೆನೆ. 2028 ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷ ಸಂಘಟನೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ. ಹಾಗಾಗಿ 23 ವರ್ಷದಿಂದ ನಿರ್ವಹಿಸಿದ್ದ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ಸ್ವ ಇಚ್ಛೆಯಿಂದ ಬಿಟ್ಟು ಹಿರಿಯ ಜೆಡಿಎಸ್ ಮುಖಂಡ ನಟರಾಜು ಅವರಿಗೆ ಸ್ಥಾನವನ್ನು ನೀಡುವಂತೆ ಕೇಳಿಕೊಂಡಿದ್ದೆ. ಜಿಲ್ಲೆಯಲ್ಲಿ ಸಮಾಜಿಕ ನ್ಯಾಯ ಒದಗಿಸಿ ವೀರಶೈವ,ಲಿಂಗಾಯತರಿಗೆ 2 ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ಜೆಡಿಎಸ್ ಪಕ್ಷ ಮಾತ್ರ ಎಂದರು.ಮಾಧ್ಯಮದವರು ನನ್ನನ್ನು ಬೆಳೆಸಿದ್ದಾರೆ ಅದಕ್ಕಾಗಿ ಕೃತಜ್ಞನಾಗಿದ್ದೇನೆ. ನಾನು ಕಾಂಗ್ರೆಸ್ ಸೇರುತ್ತೇನೆ, ಕಳೆದ ಚುನಾವಣೆಯಲ್ಲಿ ಸಂಸದ ಶ್ರೇಯಸ್ಪಟೇಲ್ ಪರವಾಗಿ ನಾನು ಕೆಲಸ ಮಾಡಿದ್ದೇನೆ ಎಂದು ಸತ್ಯವಲ್ಲದ ಸುದ್ದಿ ಮಾಡಿರುವ ಪತ್ರಿಕೆಗಳು ವಿಷಾದ ವ್ಯಕ್ತಪಡಿಸಿ ಸತ್ಯವನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ಆ ಸುದ್ದಿ ಮಾಡಿದ ವರದಿಗಾರ ಹಾಗೂ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದಾಗಿ ಹೇಳಿದರು. ಅಧ್ಯಕ್ಷನಾಗಿದ್ದ ನನ್ನನ್ನು ಅಸಮರ್ಥ ಎಂದು ಕೆಳಗಿಳಿಸಿದ್ದಾರೆ ಎಂಬ ರೀತಿಯಲ್ಲಿ ಬರೆದಿರುವುದು ನೋವು ತಂದಿದೆ . ಮುಂಬರುವ ಸ್ಥಳೀಯ ಹಾಗೂ ವಿಧಾನಸಭಾ ಚುನಾವಣೆಗೆ ತಳ ಮಟ್ಟದಿಂದ ಪಕ್ಷವನ್ನು ಕಟ್ಟಲು ಹೈಕಮಾಂಡ್ ಸೂಚನೆ ನೀಡಿದ್ದು ಅದರಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು. ಜೆಡಿಎಸ್ ಮುಖಂಡರಾದ ಬಿ.ಡಿ.ಚಂದ್ರೇಗೌಡ, ಮರಿಯಪ್ಪ, ಡಿ.ಇ.ಮಲ್ಲೇಗೌಡ, ಬಲ್ಲೇನಹಳ್ಳಿ ರವಿಕುಮಾರ್, ಅದ್ದೂರಿಕುಮಾರ್ ಇದ್ದರು.