ಕನ್ನಡಪ್ರಭ ವಾರ್ತೆ ಕಡೂರು
ನೀರಾವರಿ ಸೇರಿದಂತೆ ಕಡೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶಾಸಕರೊಂದಿಗೆ ಕೈಜೋಡಿಸುತ್ತೇನೆ ಎಂದು ಹಾಸನ ಲೋಕಸಭಾ ಕ್ಷೇತ್ರದ ನೂತನ ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದರು.ಅವರು ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಎಮ್ಮೇದೊಡ್ಡಿಯ ಮದಗದ ಕೆರೆಗೆ ಭಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿನ ಸಮರ್ಪಿಸಿ ಮಾತನಾಡಿದರು.
ಸಂಸದನಾಗಿ ರೈತರ ಜೀವನಾಡಿ ಕೆರೆಗೆ ಭಾಗಿನ ಅರ್ಪಿಸುವ ಅವಕಾಶ ದೊರೆತಿದೆ. ಇದು ನನಗೆ ಐತಿಹಾಸಿಕ ದಿನವಾಗಿದೆ. ಇತಿಹಾಸ ಪ್ರಸಿದ್ದ ಈ ಮದಗದಕೆರೆಗೆ ಹರಿದು ಈ ಭಾಗದ ಸರಣಿ ಕೆರೆಗಳಿಗೆ ನೀರು ಹರಿಯುತ್ತಿರುವುದು ಮ್ಯಾಜಿಕ್ ನಂತಿದೆ. ಶಾಸಕ ಕೆ.ಎಸ್. ಆನಂದ್ ಇಚ್ಚಾ ಶಕ್ತಿಯಿಂದ ಅಭಿವೃದ್ದಿ ಕಾರ್ಯ ಮಾಡುತಿದ್ದು, ಮತ್ತೊಂದೆಡೆ ಸ್ನೇಹಮಹಿ ವ್ಯಕ್ತಿತ್ವ ಅವರದ್ದಾಗಿದೆ ಎಂದರು.ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಮದಗದ ಕೆರೆ ತುಂಬಿದರೆ 32 ಉಪ ಕೆರೆಗಳಿಗೂ ನೀರು ಹರಿಯಲಿದೆ. ಕಡೂರು ತಾಲೂಕಿನಲ್ಲಿ ಮೂರು ವರ್ಷಕ್ಕೆ ಒಂದು ಮಳೆ ಬೆಳೆ ಎಂಬ ಮಾತಿದೆ. ಅಧಿ ದೇವತೆ ಕೆಂಚಮ್ಮನವರ ಕೃಪೆಯಿಂದ ರೈತರ ಜಮೀನುಗಳಿಗೆ ನೀರು ದೊರೆಯುತ್ತಿದೆ. ಶಾಸಕರು ಈಗಾಗಲೇ ಕೆರೆ ಸುತ್ತ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಸರಸ್ವತೀಪುರ ಗ್ರಾ.ಪಂ. ಮಾಜಿ ಅಧ್ಯಕ್ಷ ಕಂಸಾಗರ ಸೋಮಶೇಖರ್ ಮಾತನಾಡಿ, ಕಡೂರು ತಾಲೂಕಿನ ಇನ್ನೊಂದು ಜೀವನಾಡಿ ಅಯ್ಯನಕೆರೆಯ ಸುಣ್ಣಗೋಡ್ ಚಾನೆಲ್ ನ ನೀರು ಜಿಗಣೆಹಳ್ಳಿ, ಪಟ್ಟಣಗೆರೆ ಮತ್ತು ಸರಸ್ವತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹರಿಯುವಂತೆ ಶಾಸಕರು ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ಮುಖಂಡ ಎಂ.ಎಚ್.ಚಂದ್ರಪ್ಪ ಮಾತನಾಡಿ, ಮದಗದ ಕೆರೆ ಅಶ್ರಿತ ಕೆರೆಗಳ ಅಭಿವೃದ್ದಿಗೆ ಶಾಸಕರು ಕ್ರಮ ಕೈಗೊಂಡಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ತಹಶೀಲ್ದಾರ್ ಪೂರ್ಣಿಮಾ, ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಇಓ ಪ್ರವೀಣ್, ಜಿ.ಪಂ.ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಎಚ್.ಚಂದ್ರಪ್ಪ, ತಿಮ್ಲಾಪುರ ದಿನೇಶ್,ಪ್ರಕಾಶನಾಯ್ಕ, ಪುರಸಭೆ ಸದಸ್ಯರಾದ ಈರಳ್ಳಿ ರಮೇಶ್, ಕೆ.ಎಂ.ಮೋಹನ್ ಕುಮಾರ್,ಮರಗುದ್ದಿ ಮನು,ಯಾಸೀನ್ ಹಾಗು ರೈತರು ಇದ್ದರು.ಸಾಗುವಳಿದಾರರ ಒಕ್ಕಲೆಬ್ಬಿಸಲು ಬಿಡಲ್ಲ: ಶಾಸಕ ಆನಂದ್
ಬಾಗಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಎಸ್. ಆನಂದ್ ಮಾತನಾಡಿ, ಎಮ್ಮೆದೊಡ್ಡಿ ಭಾಗದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಇಲ್ಲಿ ಅರಣ್ಯ, ಅಮೃತ ಮಹಲ್ ಸಮಸ್ಯೆ ಬಗ್ಗೆ ಗಾಳಿ ಮಾತುಗಳು ಹರಡಿವೆ. ಯಾವುದೇ ಕಾರಣಕ್ಕೂ ಇಲ್ಲಿನ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ರೈತರು ಆತಂಕಕ್ಕೊಳಗಾಗುವುದು ಬೇಡ. ಅವರ ಭೂಮಿಯ ರಕ್ಷಣೆ ನನ್ನ ಹೊಣೆ ಎಂದು ಭರವಸೆ ನೀಡಿದರು.ಮದಗದ ಕೆರೆ ಈ ಭಾಗದ ರೈತರು ಮತ್ತು ಆಶ್ರಿತ ಕೆರೆಗಳಿಗೆ ಜೀವನಾಡಿಯಾಗಿದೆ. ಮದಗದ ಕೆರೆಗೆ ಹೆಬ್ಬೆ ಜಲಪಾತದಿಂದ ನೀರು ತರುವ ಯೋಜನೆ ತಾಂತ್ರಿಕವಾಗಿ ಕಾರ್ಯಸಾಧುವಲ್ಲದ ಕಾರಣ ಗೋಂಧಿ ಅಥವಾ ಭಧ್ರಾ ಉಪಕಣಿವೆ ಯೋಜನೆಯಲ್ಲಿ ತಾಳುಕಿನ 116 ಕೆರೆ ತುಂಬಿಸುವ ಯೋಜನೆಗೆ ಅನುಮೋದನೆ ದೊರೆತರೂ ಹಣ ಮೀಸಲಿಟ್ಟಿರಲಿಲ್ಲ ಎಂದರು.
ಇದರ 2 ನೇ ಹಂತದ ಕಾಮಗಾರಿ ಪೂರ್ಣವಾಗಲು ಈ ಯೋಜನೆಗೆ ನಬಾರ್ಡ್ ನಿಂದ ಒಮ್ಮೆಗೇ ₹400 ಕೋಟಿ ಹಣ ತರಲು ಪ್ರಯತ್ನಿಸಿ ಯಶಸ್ವಿಯಾಗಿದ್ದೇನೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.2025ರ ಏಪ್ರಿಲ್ ಒಳಗೆ ಈ ಯೋಜನೆಯ 2 ನೇ ಹಂತದಲ್ಲಿ ಒಟ್ಟು 32 ಕೆರೆಗಳಿಗೆ ನೀರುಣಿಸುವ ಕಾಮಗಾರಿ ಮುಗಿಯಲಿದೆ. ಇನ್ನು 3 ನೇ ಹಂತದ ಕಾಮಗಾರಿಯ ಡಿ.ಪಿ.ಆರ್. ಮುಗಿದಿದೆ. ತಾಲೂಕಿನ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ ಅವರಿಗೆ ನೆಮ್ಮದಿ ಕಲ್ಪಿಸುವ ಆಶಯ ನನ್ನದಾಗಿದ್ದು, ಆ ಕಾರ್ಯದಲ್ಲಿ ಯಶಸ್ವಿಯಾಗಿ ಬರದ ನಾಡು ಹಸಿರು ನಾಡು ಆಗುವುದರಲ್ಲಿ ಸಂಶಯವಿಲ್ಲ ಎಂದರು.