ಹಾಲು ಉತ್ಪಾದಕರ ಹಿತಾಸಕ್ತಿ ಕಾಪಾಡಿ ಲಾಭದತ್ತ ಒಯ್ಯುತ್ತೇನೆ

KannadaprabhaNewsNetwork |  
Published : Jul 17, 2024, 12:55 AM IST
16ಡಿಡಬ್ಲೂಡಿ12ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಹಲವು ಸಂಘಗಳೊಂದಿಗೆ ಡಾ.ರಾಜನ್‌ ದೇಶಪಾಂಡೆ ಆಸ್ಪತ್ರೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಂಕರ ಮುಗದ ಅಭಿನಂದನೆ ಸ್ವೀಕರಿಸಿದರು. | Kannada Prabha

ಸಾರಾಂಶ

ಹಾಲಿನ ಕೊರತೆಯಾಗಿ ಗ್ರಾಹಕರ ಬೇಡಿಕೆ ಈಡೇರಿಸಲು ಆರೇಳು ರುಪಾಯಿ ಹೆಚ್ಚಿನ ಹಣ ನೀಡಿ ಬೇರೆಡೆಯಿಂದ ಹಾಲು ಸಂಗ್ರಹಿಸುವ ಸ್ಥಿತಿ ಉಂಟಾಯಿತು. ಇದರಿಂದ ಒಕ್ಕೂಟ ತುಂಬ ಆರ್ಥಿಕವಾಗಿ ನಷ್ಟದಲ್ಲಿತ್ತು ಎಂದು ಶಂಕರ ಮುಗದ ತಿಳಿಸಿದ್ದಾರೆ.

ಧಾರವಾಡ:

ಹಾಲು ಉತ್ಪಾದಕರ, ಗ್ರಾಹಕರ ಹಾಗೂ ಒಕ್ಕೂಟದ ನೌಕರರ ಹಿತಾಸಕ್ತಿ ಕಾಪಾಡುವ ಮೂಲಕ ಒಕ್ಕೂಟವನ್ನು ಲಾಭದತ್ತ ಒಯ್ಯುತ್ತೇನೆಂದು ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಭರವಸೆ ನೀಡಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನವು ಹಲವು ಸಂಘಗಳೊಂದಿಗೆ ಡಾ. ರಾಜನ್‌ ದೇಶಪಾಂಡೆ ಆಸ್ಪತ್ರೆಯ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಅಭಿನಂದನೆಯಲ್ಲಿ ಮಾತನಾಡಿದ ಅವರು, ನಾನು 2ನೇ ಬಾರಿ ಅಧ್ಯಕ್ಷನಿದ್ದಾಗಲೇ ಒಕ್ಕೂಟದಿಂದ ಹಾವೇರಿ ಜಿಲ್ಲೆಯು ಬೇರ್ಪಟ್ಟಿತು. ಹಾಲಿನ ಕೊರತೆಯಾಗಿ ಗ್ರಾಹಕರ ಬೇಡಿಕೆ ಈಡೇರಿಸಲು ಆರೇಳು ರುಪಾಯಿ ಹೆಚ್ಚಿನ ಹಣ ನೀಡಿ ಬೇರೆಡೆಯಿಂದ ಹಾಲು ಸಂಗ್ರಹಿಸುವ ಸ್ಥಿತಿ ಉಂಟಾಯಿತು. ಇದರಿಂದ ಒಕ್ಕೂಟ ತುಂಬ ಆರ್ಥಿಕವಾಗಿ ನಷ್ಟದಲ್ಲಿತ್ತು. ದಿನಕ್ಕೆ ₹ 5 ಲಕ್ಷ ಹಾಗೂ ತಿಂಗಳಿಗೆ ₹ 1.5 ಕೋಟಿ ನಷ್ಟವಾಗುತ್ತಿತ್ತು. ಕಠಿಣ ನಿಲುವುಗಳ ಮೂಲಕ ಒಕ್ಕೂಟವನ್ನು ಮತ್ತೆ ಆರ್ಥಿಕವಾಗಿ ಚೇತರಿಸಿಕೊಳ್ಳುವಂತೆ ಮಾಡಲಾಗಿದೆ. ₹ 33 ಕೋಟಿ ಸಾಲದಿಂದ ಇದೀಗ ಬರೀ ₹ 7 ಕೋಟಿಗೆ ಬಂದಿದ್ದು, ಒಕ್ಕೂಟವು ಲಾಭದತ್ತ ಸಾಗುತ್ತಿದೆ ಎಂದರು.

ನಾನು ಈ ಸ್ಥಾನಕ್ಕೆ ಬರಲು ಮಾಜಿ ಸಚಿವ ಎ.ಬಿ. ದೇಸಾಯಿ ಹಾಗೂ ಅವರ ಪುತ್ರ, ಮಾಜಿ ಶಾಸಕ ಅಮೃತ ದೇಸಾಯಿ ಕಾರಣ. ಒಕ್ಕೂಟಕ್ಕೆ ಹಾಲು ತರುವ ವಾಹನ ಚಾಲಕನಾಗಿ, ಐದು ಬಾರಿ ನಿರ್ದೇಶಕನಾಗಿ, ಈಗ 3ನೇ ಬಾರಿ ಅಧ್ಯಕ್ಷನಾಗಿದ್ದು ಹೆಮ್ಮೆ ಎನಿಸುತ್ತಿದೆ. ಗ್ರಾಹಕರು, ಹಾಲು ಉತ್ಪಾದಕರು ನನ್ನ ಮೇಲೆ ಇಟ್ಚಿರುವ ಗೌರವ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇನೆಂದರು.

ಮಾಜಿ ಶಾಸಕ ಅಮೃತ ದೇಸಾಯಿ ಮಾತನಾಡಿ, ಮೂವತ್ತು ವರ್ಷಗಳ ಕಾಲ ಒಕ್ಕೂಟದೊಂದಿಗೆ ಒಡನಾಟ ಹೊಂದಿದ ಮುಗದ ಅವರು ಸಂಸ್ಥೆಯನ್ನು ಲಾಭದತ್ತ ಒಯ್ಯುತ್ತಾರೆ ಎಂಬ ನಂಬಿಕೆ ಇದೆ. ಬರೀ ಪುರುಷ ಹಾಲು ಉತ್ಪಾದಕ ಸಂಘಗಳು ಮಾತ್ರವಲ್ಲದೇ ಮಹಿಳಾ ಹಾಲು ಉತ್ಪಾದಕ ಸಂಘಗಳನ್ನು ತೆರೆದು ಅವರೂ ಸ್ವಾವಂಬಿಯಾಗಲು ಸಹಕಾರಿಯಾಗಿದ್ದಾರೆ. ಅವರೊಬ್ಬ ಸಹಕಾರಿ ಪಟು ಎಂದರು.

ಅಧ್ಯಕ್ಷತೆ ವಹಿಸಿದ್ದ ಮಕ್ಕಳ ತಜ್ಞ ಡಾ. ರಾಜನ್‌ ದೇಶಪಾಂಡೆ, ಎಲ್ಲರೂ ನಾಯಕರಾಗುವುದಿಲ್ಲ. ಅರ್ಹತೆ ಇದ್ದವರು ಮಾತ್ರ ನಾಯಕರಾಗುತ್ತಾರೆ. ಅದರಲ್ಲೂ ಶಂಕರ ಮುಗದ ಅಂತಹವರು ಯಶಸ್ವಿ ನಾಯಕರು ಎಂದು ಶ್ಲಾಘಿಸಿದರು. ಉತ್ತರ ಕರ್ನಾಟಕದಲ್ಲಿ ನಂದಿನಿಯ ಇನ್ನಷ್ಟು ಅಂಗಡಿಗಳು ತೆರೆಯುವ ಮೂಲಕ ಅಮೂಲ್‌ಗೆ ಪೈಪೋಟಿ ನೀಡಬೇಕೆಂದು ಸಲಹೆ ನೀಡಿದರು.

ವಕೀಲ ಅರುಣ ಜೋಶಿ, ರೋಟರಿ ಕ್ಲಬ್‌ ಅಸಿಸ್ಟೆಂಟ್ ಗೌವರ್ನರ್‌ ಡಾ. ಪಲ್ಲವಿ ದೇಶಪಾಂಡೆ, ರೋಟರಿ ಕ್ಲಬ್ ಪ್ರೈಮ್ ನ ಅಧ್ಯಕ್ಷೆ ಡಾ. ಶಿಲ್ಪಾ ಅಡೂರ, ಧಾರವಾಡ ಸೆಂಟ್ರಲ್ ಅಧ್ಯಕ್ಷೆ ಕರಣ ದೊಡ್ಡವಾಡ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್, ಎಂಜಿನಿಯರ್‌ ಸಂಘದ ಅಧ್ಯಕ್ಷ ಸುನೀಲ ಬಾಗೇವಾಡಿ ಮಾತನಾಡಿದರು. ಅಭಿನಂದನೆ ನಂತರ ಗಾಯಕರಾದ ಪ್ರೇಮಾನಂದ ಶಿಂಧೆ ಮತ್ತು ಶಿವಾನಂದ ಹೂಗಾರ ಸಂಗೀತ ಕಚೇರಿ ನಡೆಸಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ