ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಚ್. ನಿಂಗಪ್ಪ ಭರವಸೆ
ಕನ್ನಡಪ್ರಭ ವಾರ್ತೆ ತುಮಕೂರು
ಜಿಲ್ಲೆಯಲ್ಲಿ ಜಾತ್ಯತೀತ ಜನತಾದಳ ಸುಭದ್ರವಾಗಿದೆ. ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸಲು ದಿನದ 24 ಗಂಟೆಯೂ ಶ್ರಮಿಸಲು ಸದಾ ಸಿದ್ಧ ನಾಗಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಪಕ್ಷದ ನೂತನ ಜಿಲ್ಲಾಧ್ಯಕ್ಷ ಎಚ್.ನಿಂಗಪ್ಪ ತಿಳಿಸಿದರು.ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಮಾಜಿ ಸಚಿವ ಡಿ. ನಾಗರಾಜಯ್ಯ, ಮಾಜಿ ಶಾಸಕ ಪಿ.ಆರ್. ಸುಧಾಕರಲಾಲ್ ಸೇರಿ ಪಕ್ಷದ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪನವರಿಂದ ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಜಿಲ್ಲಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷ ಸಂಘಟನೆಗಾಗಿ ದಿನದ 24 ಗಂಟೆಯೂ ಶ್ರಮಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಅವರು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಹುದ್ದೆ ಅಧಿಕಾರವಲ್ಲ, ಒಂದು ಜವಾಬ್ದಾರಿ, ಕರ್ತವ್ಯ ಎಂದು ನಾನು ತಿಳಿದಿದ್ದೇನೆ. ಪಕ್ಷದ ಸಂಘಟನೆ ಜವಾಬ್ದಾರಿ ನನ್ನ ಹೆಗಲ ಮೇಲಿದೆ. ಈ ಹಿಂದೆ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ ಪಕ್ಷ ಹೇಗಿತ್ತೋ ಅದೇ ಗತವೈಭವ ಮರುಕಳಿಸುವಂತೆ ಮಾಡುವ ಕರ್ತವ್ಯ ನನ್ನದಾಗಿದೆ. ಇದನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ತಳಮಟಮ್ಟದಿಂದ ಕಟ್ಟಲು ಶ್ರಮಿಸುತ್ತೇನೆ ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳು ಬರಲಿವೆ. ಈ ಚುನಾವಣೆ ಸಮರ್ಥವಾಗಿ ಎದುರಿಸಲು ಶಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಪ್ರಬಲ ಅಭ್ಯರ್ಥಿಗಳು ಇರುವ ಕ್ಷೇತ್ರಗಳಲ್ಲಿ ನಮಗೆ ಟಿಕೆಟ್ ಬೇಕು ಎಂದು ಕೇಳುವುದು ಸಹಜ. ಇದನ್ನು ಎರಡೂ ಪಕ್ಷಗಳ ವರಿಷ್ಠರು ತೀರ್ಮಾನಿಸುತ್ತಾರೆ. ಈ ಬಗ್ಗೆ ಸ್ಥಳೀಯವಾಗಿ ತಲೆಕೆಡಿಸಿಕೊಳ್ಳುವುದು ಅನಗತ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷ ತೊರೆದಿರುವ ಶಾಸಕ ಎಸ್.ಆರ್. ಶ್ರೀನಿವಾಸ್ ಹಾಗೂ ಮಾಜಿ ಶಾಸಕ ಗೌರಿಶಂಕರ್ ಅವರನ್ನು ಪಕ್ಷಕ್ಕೆ ಕರೆ ತರುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ, ಇವರಿಬ್ಬರು ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರ ಅನುಭವಿಸಿದ್ದಾರೆ. ಆದರೂ ಪಕ್ಷವನ್ನು ತೊರೆದು ಸಮೃದ್ಧವಾಗಿರುವ ಹುಲ್ಲುಗಾವಲಿಗೆ ಹೋಗಿ ಸೇರಿದ್ದಾರೆ. ಅವರಿಬ್ಬರು ವಾಪಸ್ ಬರುವ ಸನ್ನಿವೇಶ ಇಲ್ಲ. ಅವರಿಬ್ಬರು ಮತ್ತೆ ಪಕ್ಷಕ್ಕೆ ಬರಲು ಕಾರ್ಯಕರ್ತರ ವಿರೋಧವಿದೆ. ಆದರೂ ಅವರನ್ನು ಮತ್ತೆ ಪಕ್ಷ ಸೇರಿಸಿಕೊಳ್ಳುವುದು, ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು ಎಂದು ತಿಳಿಸಿದರು.
21ರಂದು ಜನರೊಂದಿಗೆ ಜನತಾ ದಳ
ನಿಕಟಪೂರ್ವ ಜಿಲ್ಲಾಧ್ಯಕ್ಷ ಆರ್.ಸಿ. ಆಂಜಿನಪ್ಪ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷ ಗೆಲುವು ಸಾಧಿಸಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ನಮ್ಮ ಪಕ್ಷದ ಗುರಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೮ ವರ್ಷ ಕಾಲ ಪಕ್ಷದ ಜಿಲ್ಲಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು, ಅತ್ಯಂತ ಸಂತೋಷದಿಂದ ಅಧಿಕಾರ ಹಸ್ತಾಂತರ ಮಾಡಿದ್ದೇನೆ. ಬದಲಾವಣೆ ಎನ್ನುವುದು ರಾಜಕೀಯ ಪಕ್ಷಗಳಲ್ಲಿ ಸರ್ವೇ ಸಾಮಾನ್ಯ. ಅಂದು ನನ್ನನ್ನು ಸರ್ವಾನುಮತದಿಂದ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಮಾಡಿದರು. ಸತತ ೮ ವರ್ಷ ಕಾಲ ಪಕ್ಷ ಸಂಘಟನೆಗಾಗಿ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ತಿಳಿಸಿದರು.ನಮ್ಮ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಬಳಿಕ ಲೋಕಸಭಾ ಚುನಾವಣೆಯಲ್ಲಿ ವಿ. ಸೋಮಣ್ಣ ಅವರನ್ನು 1.75 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಗೂ ಜಿಲ್ಲೆಯ 11 ಕ್ಷೇತ್ರಗಳಲ್ಲೂ ಮೈತ್ರಿ ಆಗಲಿದೆ. 11 ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಟಿ.ಆರ್. ನಾಗರಾಜು, ಎಸ್.ಆರ್. ಗೌಡ, ಕೃಷ್ಣಮೂರ್ತಿ, ಜಗದೀಶ್ ನಾಗರಾಜಯ್ಯ, ವಿಜಿಗೌಡ, ಪಾಲಿಕೆ ಮಾಜಿ ಸದಸ್ಯರಾದ ಧರಣೇಂದ್ರಕುಮಾರ್, ಮಂಜುನಾಥ್, ನಾಗವಲ್ಲಿ ರಾಮಣ್ಣ, ಗೂಳೂರು ನವೀನ್, ಕೆಂಪರಾಜು, ಬೇಕರಿ ಮಂಜಣ್ಣ, ಲೀಲಾವತಿ, ತಾಹೀರಾ ಬಾನು ಮತ್ತಿತರರು ಉಪಸ್ಥಿತರಿದ್ದರು.