ಕನ್ನಡಪ್ರಭ ವಾರ್ತೆ ಬೇಲೂರು
ತಾಲೂಕಿನ ಇಬ್ಬೀಡು ಗ್ರಾಮದಲ್ಲಿ ಮದ್ಯದ ಅಂಗಡಿ ತೆರೆಯದಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಮುಂಭಾಗ ಗ್ರಾಮದ ಮಹಿಳೆಯರು ಪ್ರತಿಭಟನೆ ನಡೆಸಿದರು.ನಂತರ ತಂಡೇಕೆರೆ ಗ್ರಾಮದ ಮಾತಾ ಮಹಿಳಾ ಸಂಘದ ಸದಸ್ಯರಾದ ಲತಾ ,ಅಂಬಿಕ, ಲಕ್ಷ್ಮಮ್ಮ, ಗಿರಿಜಾ ಮಾತನಾಡಿ, ಈಗಾಗಲೇ ನಮ್ಮ ಇಬ್ಬೀಡು ಗ್ರಾಪಂ ವ್ಯಾಪ್ತಿಯಲ್ಲಿ ಎರಡು ಮದ್ಯದಂಗಡಿ ಇದ್ದು, ಪ್ರತಿನಿತ್ಯ ಮನೆಯ ಗಂಡಸರು ಹಾಗೂ ಕೆಲ ವಿದ್ಯಾವಂತ ಯುವಕರು ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದಾರೆ, ನಾವು ಮಾನಸಿಕವಾಗಿ ನೊಂದು ಹೋಗಿದ್ದೇವೆ. ಈ ಗ್ರಾಮದಲ್ಲಿರುವ ಎಲ್ಲಾ ೨೦೦ ಕುಟುಂಬಗಳಲ್ಲಿ ೧೫೦ ಕ್ಕೂ ಹೆಚ್ಚು ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಕೂಲಿಯಲ್ಲಿ ಬಂದಂತ ಅರ್ಧ ಹಣ ಕುಡಿತದಿಂದಾಗಿ ನಮ್ಮ ಜೀವನ ನಾಶವಾಗುತ್ತಿದೆ. ಆದರೂ ಸಹ ಮತ್ತೊಂದು ಬಾರ್ ತೆರೆಯಲು ಈಗಾಗಲೇ ಹುನ್ನಾರ ನಡೆಯುತ್ತಿದೆ.ಒಂದು ವೇಳೆ ಇಲ್ಲಿ ಬಾರ್ ತೆರೆದರೆ ಗ್ರಾಪಂ ಮುಂದೆ ಹಾಗೂ ಶಾಸಕರ ಮನೆ ಮುಂದೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದರು.
ನಮ್ಮ ಶಾಲೆಯ ಹಾಗೂ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ಬಾರ್ ಅನ್ನು ನಿರ್ಮಾಣ ಮಾಡಲು ಹೊರಟಿದ್ದಾರೆ. ಹೊಸದಾಗಿ ಮದ್ಯದ ಅಂಗಡಿ ನಿರ್ಮಾಣಕ್ಕೆ ಮುಂದಾಗಿರುವ ಮಾಲೀಕರಿಗೆ ಗ್ರಾಮಸ್ಥರು ಸೇರಿ ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದರೆ ನಮ್ಮ ಮೇಲೆ ಉಡಾಫೆಯಿಂದ ವರ್ತಿಸುತ್ತಾರೆ. ನಮಗೆ ಹಣ ಬಲ ಹಾಗೂ ಜನಬಲ ಇರುವುದರಿಂದ ನಾವಿಲ್ಲಿ ಬಾರ್ ನಿರ್ಮಾಣ ಮಾಡುತ್ತೇವೆ ಎಂದು ನಮ್ಮ ಮೇಲೆ ಜಗಳಕ್ಕೆ ಬರುತ್ತಾರೆ. ಈಗಾಗಲೇ ಇಲ್ಲಿ ಬಾರ್ ನಿರ್ಮಾಣ ಮಾಡದಂತೆ ಗ್ರಾಮಸ್ಥರು ಶಾಸಕರಿಗೆ, ಜಿಲ್ಲಾಧಿಕಾರಿಗೆ, ತಹಸೀಲ್ದಾರ್ ಅವರಿಗೆ ಹಾಗೂ ಗ್ರಾಪಂಗೂ ಸಹ ಮನವಿ ಮಾಡಿದ್ದೇವೆ. ಇಲ್ಲಿ ಬಾರ್ ನಿರ್ಮಾಣಕ್ಕೆ ಅನುಮತಿ ನೀಡಬಾರದು. ನಮ್ಮ ಗ್ರಾಮದಲ್ಲಿ ಸುಮಾರು ೧೦ ಮನೆಗಳಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದರೂ ಇದರ ಬಗ್ಗೆ ಗಮನಹರಿಸಿಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.ಗ್ರಾಪಂ ಅಭಿವೃದ್ಧಿ ಅಧಿಕಾರಿ ರವಿಕುಮಾರ್ ನಂತರ ಮಾತನಾಡಿ, ಈಗಾಗಲೇ ಗ್ರಾಪಂ ಸಭೆಯಲ್ಲಿ ಗ್ರಾಮಸ್ಥರು ಮದ್ಯದಂಗಡಿಗೆ ಇಲ್ಲಿ ಯಾವುದೇ ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸರ್ಕಾರದ ನಿರ್ದೇಶನದಂತೆ ಶಾಲೆಯ ಬಳಿ ಜನವಸತಿ ಪ್ರದೇಶದಲ್ಲಿ ಅನುಮತಿ ನೀಡುವುದಿಲ್ಲ. ನಮಗೆ ಗ್ರಾಮಸ್ಥರ ನೆಮ್ಮದಿ ಮುಖ್ಯ, ನಾಳೆ ತುರ್ತು ಸಭೆಯನ್ನು ಕರೆಯುವ ಮೂಲಕ ಇದರ ಬಗ್ಗೆ ಚರ್ಚಿಸಲಾಗುವುದು. ಮೇಲಾಧಿಕಾರಿಗಳ ಆದೇಶ ಏನು ಬರುತ್ತದೆ ಅದನ್ನು ನಾವು ಪಾಲನೆ ಮಾಡುತ್ತೇವೆ. ಗ್ರಾಮಸ್ಥರು ಇಲ್ಲಿಗೆ ಬಾರ್ ಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದ್ದು ಅದನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು ಎಂದರು.
ತೆಂಡೇಕೆರೆ ಗ್ರಾಮಸ್ಥರಾದ ರೇಣುಕಾ, ಐಶ್ವರ್ಯ, ಲೋಲಾಕ್ಷಿ, ವಿಜಯ, ಸಿಂಧು, ಮಲ್ಲಿಗಮ್ಮ, ಜ್ಯೋತಿ, ಪದ್ಮ , ಸುಚಿತ್ರ, ಪಾರ್ವತಿ, ರೂಪ. ,ದ್ಯಾವಮ್ಮ ,ಜಯಮ್ಮ,ಇತರರು ಹಾಜರಿದ್ದರು.