ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರವಾದ ಮ್ಹಾತೋಬಾರ ವಿನಾಯಕನ ಸನ್ನಿಧಿಯಲ್ಲಿ ಶುಕ್ರವಾರ ವಿಜೃಂಭಣೆಯಿಂದ ಮಹಾಸ್ಯಂದನ ರಥೋತ್ಸವ ನಡೆಯಿತು.ದೇವರ ಕೀರ್ತಿಯನ್ನು ಸಾರುವ ರಥದ ತುತ್ತತುದಿಯಲ್ಲಿರುವ ಕಲಶ ದೇವಾಲಯದಲ್ಲಿ ಆಗಮ ಶಾಸ್ತ್ರಾನುಸಾರ ತ್ರಿಕಾಲ ಪೂಜಾ ಕೈಂಕರ್ಯವನ್ನು ನಡೆಸಿಕೊಂಡು ಬರುತ್ತಿರುವ ಪಾರಂಪರಿಕ ಅರ್ಚಕ ಕುಟುಂಬದವರಿಂದಲೇ ಸಮರ್ಪಣೆಗೊಂಡು ಕಂಗೊಳಿಸುತ್ತಿರುವುದು ವಿಶೇಷವಾಗಿ ಕಂಡು ಬಂದಿತು. ದೇವಾಲಯ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಸರ್ವೋಚ್ಚ ನ್ಯಾಯಾಲಯ ದೇವಾಲಯಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ರಿಸೀವರ್ ಆಗಿ ನೇಮಿಸಿದೆ. ಪ್ರಸ್ತುತ ಜಿಲ್ಲಾ ನ್ಯಾಯಾಧೀಶರು ಮುಂದಾಳತ್ವದಲ್ಲಿ, ವಿವಿಧ ಧಾರ್ಮಿಕ ಕಾರ್ಯಕ್ರಮ ನೇರವೇರಿತು. ಎಲ್ಲ ವೃತ್ತಿಯವರೂ ತಮ್ಮ ತಮ್ಮ ವೃತ್ತಿಗನುಗುಣವಾಗಿ ಇಲ್ಲಿ ಸೇವೆ ಸಲ್ಲಿಸುತ್ತಾರೆ. ರಥ ಸಪ್ತಮಿಯ ದಿನ ಸುತ್ತಲಿನ ಬಹುತೇಕ ರೈತರು ತಾವು ಬೆಳೆದ ಬೆಳೆಗಳನ್ನು ತಂದು ದೇವರಿಗೆ ಕಾಣಿಕೆಯಾಗಿ ಸಲ್ಲಿಸುತ್ತಾರೆ. ಅಡಕೆ ಗೊನೆ, ತೆಂಗಿನ ಕಾಯಿ, ಬಾಳೆಗೊನೆಗಳನ್ನು ರಥಕ್ಕೆ ಕಟ್ಟಿ ಉತ್ತಮ ಫಸಲಿಗಾಗಿ ಬೇಡಿಕೊಂಡರು. ಅಂದಾಜು ನಲವತ್ತು ಕ್ವಿಂಟಲ್ ಪಂಚಖಾದ್ಯ ನೈವೇದ್ಯವಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಸೇವೆ ಸಲ್ಲಿಸಿದರು. ಮಾಘ ಶುಕ್ಲ ಬಿದಿಗೆಯಂದು ಫಲ ಸಮರ್ಪಣೆ, ಮೃತ್ತಿಕಾಹರಣ, ಅಂಕುರಾರ್ಪಣದೊಂದಿಗೆ ಪ್ರಾರಂಭವಾಗುವ ಜಾತ್ರೆ ಮಾಘ ಶುಕ್ಲ ಸಪ್ತಮಿಯಂದು ಮಹಾಸ್ಯಂದನ ರಥೋತ್ಸವದೊಂದಿಗೆ ಸಂಪನ್ನವಾಗುತ್ತದೆ. ಸದಾ ನಿಂತುಕೊಂಡೇ ತನ್ನ ಸನ್ನಿಧಿಗೆ ಬರುವ ಭಕ್ತರ ದುಗುಡ ದುಮ್ಮಾನಗಳನ್ನು ಆಲಿಸುವ ಬಾಲ ಗಣಪತಿ ರಥಾರೂಢನಾದಾಗ ಕಣ್ತುಂಬಿಕೊಳ್ಳುವ ಕ್ಷಣಗಳು ತಮ್ಮ ಜೀವನದ ಪಾವನ ಕ್ಷಣಗಳೆಂದು ಭಕ್ತರು ಎಣಿಸುತ್ತಾರೆ.
ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿವಿಧ ರಂಗದ ಬಹುತೇಕ ಸಾಧಕರು ಇಡಗುಂಜಿಗೆ ಆಗಮಿಸಿ ಗಣಪತಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸುತ್ತಾರೆ. ಹಣ್ಣು ಕಾಯಿ, ಪಂಚಕಜ್ಜಾಯ, ಮೋದಕ ನಿತ್ಯ ನೈವೇದ್ಯವಾಗುತ್ತದೆ. ಆಗಮಿಸುವ ಭಕ್ತರಿಗೆ ಪ್ರತಿದಿನವು ಪ್ರಸಾದ ಭೋಜನ ವ್ಯವಸ್ಥೆಯಿದೆ. ಗಣ ಹೋಮ ಸತ್ಯನಾರಾಯಣ ಕಥೆ, ಯಜ್ಞ ಯಾಗಗಳು ನಿರಂತರ ನಡೆಯುತ್ತಿರುತ್ತವೆ.