ಜ್ಞಾನದ ಅನುಭವದಿಂದ ಮಾತ್ರ ಆದರ್ಶ ಸಮಾಜ: ಎಂ.ಡಿ. ಬಳ್ಳಾರಿ

KannadaprabhaNewsNetwork |  
Published : Oct 21, 2024, 12:51 AM IST
20ಡಿಡಬ್ಲೂಡಿ12ಕರ್ನಾಟಕ ವಿದ್ಯಾವರ್ಧಕ ಸಂಘವು ನಿಂಗಣ್ಣ ಕುಂಟಿ (ಇಟಗಿ) ದತ್ತಿ ಅಂಗವಾಗಿ ಆಯೋಜಿಸಿದ್ದ ‘ನಿವೃತ್ತರಾಗಿಯೂ ಕ್ರೀಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ ಸಮಾರಂಭ.  | Kannada Prabha

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ, ಭವಿಷ್ಯದ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವ ಸಾಮರ್ಥ್ಯ ಅವರಲ್ಲಿ ಶಿಕ್ಷಕರು ಬೆಳೆಸಬೇಕಿದೆ ಎಂದು ಗದಗ ನಿವೃತ್ತ ಶಿಕ್ಷಣಾಧಿಕಾರಿ ಎಂ.ಡಿ. ಬಳ್ಳಾರಿ ಹೇಳಿದರು.

ಧಾರವಾಡ: ಶಿಕ್ಷಕರು ಜ್ಞಾನದ ಅನುಭವದಿಂದ ಮಾತ್ರ ಆದರ್ಶ ಸಮಾಜ ಕಟ್ಟಲು ಸಾಧ್ಯ. ಅಂತಹ ಸೃಜನಶೀಲ ಶಿಕ್ಷಕರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಗದಗ ನಿವೃತ್ತ ಶಿಕ್ಷಣಾಧಿಕಾರಿ ಎಂ.ಡಿ. ಬಳ್ಳಾರಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ ನಿಂಗಣ್ಣ ಕುಂಟಿ (ಇಟಗಿ) ದತ್ತಿ ಅಂಗವಾಗಿ ಆಯೋಜಿಸಿದ್ದ ‘ನಿವೃತ್ತರಾಗಿಯೂ ಕ್ರೀಯಾಶೀಲರಾಗಿರುವ ಶಿಕ್ಷಕರಿಗೆ ಸನ್ಮಾನ’ದಲ್ಲಿ ಮಾತನಾಡಿದರು.ಹಿಂದಿಗಿಂತಲೂ ಶಿಕ್ಷಕರ ಮೇಲೆ ಇಂದು ಗುರುತರ ಜವಾಬ್ದಾರಿ ಇದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ, ಭವಿಷ್ಯದ ಸವಾಲುಗಳನ್ನು ವಿದ್ಯಾರ್ಥಿಗಳು ಎದುರಿಸುವ ಸಾಮರ್ಥ್ಯ ಅವರಲ್ಲಿ ಶಿಕ್ಷಕರು ಬೆಳೆಸಬೇಕಿದೆ. ವಿದ್ಯಾರ್ಥಿಗಳಲ್ಲಿ ಗುಣಾತ್ಮಕತೆ ತರುವಲ್ಲಿ ಶಿಕ್ಷಕರಷ್ಟೇ ಅಲ್ಲ ಪಾಲಕರು ಹಾಗೂ ಸಮಾಜದ್ದು ಮಹತ್ವದ ಪಾತ್ರವಿದೆ. ನಿವೃತ್ತಿಯ ನಂತರ ಕ್ರೀಯಾಶೀಲರಾದ ಶಿಕ್ಷಕರು ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿರುತ್ತಾರೆ ಎಂದು ಹೇಳಿದರು.

ನಿವೃತ್ತ ಡಿಡಿಪಿಐ ಎ.ಎನ್. ನಾಗರಳ್ಳಿ ಮಾತನಾಡಿ, ನಿಂಗಣ್ಣ ಕುಂಟಿ, ಓರ್ವ ಸೃಜನಶೀಲ ಶಿಕ್ಷಕರಾಗಿ, ಮಕ್ಕಳ ಸಾಹಿತಿಗಳಾಗಿ ಕೃಷಿ ಮಾಡಿದವರು. ಅವರ ಜೀವಮಾನದ ಸಾಧನೆಗೆ ಬಡತನ ಅಡ್ಡಿ ಆಗಲಿಲ್ಲ. ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕರೂ ಕೂಡ. ಶಿಕ್ಷಕ ವೃತ್ತಿ ಧರ್ಮವನ್ನು ನಿವೃತ್ತಿ ನಂತರವೂ ಕಾಪಾಡಿಕೊಂಡು ಇಂದು ೪ ಜನ ನಿವೃತ್ತ ಕ್ರೀಯಾಶೀಲ ಶಿಕ್ಷಕರನ್ನು ಸನ್ಮಾನಿಸಿದ್ದು ಅಭಿನಂದನೀಯ ಎಂದರು.

ಶಿಕ್ಷಕ ಸಾಹಿತಿ ಜೆ.ಕೆ. ಜಮಾದಾರ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯ ಜೊತೆಗೆ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸಿಕೊಂಡರೆ ಅಂತಹ ಶಿಕ್ಷಕರಿಗೆ ನಿವೃತ್ತಿಯೇ ಇಲ್ಲ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಬಾಲ್ಯದಲ್ಲಿ ಪಡೆದ ಶಿಕ್ಷಣವೇ ನಿಜವಾದ ಶಿಕ್ಷಣ. ಇಂದಿನ ಯುವಶಕ್ತಿಯನ್ನು ಶಿಕ್ಷಕರು ಲಾಭದಾಯಕ ಮಾರ್ಗದಲ್ಲಿ ಮುನ್ನಡೆಸುವಂತೆ ಇರಬೇಕು. ಶಿಕ್ಷಣ ಮಕ್ಕಳ ಮನಸ್ಸು ಅರಳಿಸುವಂತೆ ಇರಬೇಕು. ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಅದು ಸಾಧ್ಯ ಎಂದು ಹೇಳಿದರು.

ನಿವೃತ್ತ ಕ್ರೀಯಾಶೀಲ ಶಿಕ್ಷಕರಾದ ಬಸವರಾಜ ಜಗಾಪೂರ, ವೀಣಾ ಮೋಡಕ್, ಸಿ.ಎಸ್. ಮರಳಿಹಳ್ಳಿ ಅವರನ್ನು ಗೌರವಿಸಲಾಯಿತು. ನಿಂಗಣ್ಣ ಕುಂಟಿ ದತ್ತಿ ಆಶಯ ಕುರಿತು ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ