ಮಂಡ್ಯ ಮಂಜುನಾಥ
ಆಸ್ಪತ್ರೆ ಜಾಗದಲ್ಲಿ ನೆಲೆಯೂರಿರುವ ತಮಿಳು ಕಾಲೋನಿಯಲ್ಲಿರುವ ಮನೆಗಳ ಸರ್ವೇ ಕಾರ್ಯ ನಡೆಸಲಾಗಿದ್ದು, ಕಾಲೋನಿಯಲ್ಲಿ ೪೯೮ ಮನೆಗಳಿರುವುದು ಕಂಡುಬಂದಿದೆ. ಮನೆಗಳಿಗೆ ಸಂಬಂಧಿಸಿದಂತೆ ಕೇವಲ ೩೫ ಜನರು ಮಾತ್ರ ದಾಖಲೆಗಳನ್ನು ಒದಗಿಸಿದ್ದು, ಉಳಿದಂತೆ ಯಾರೊಬ್ಬರೂ ದಾಖಲೆಗಳನ್ನು ಒದಗಿಸದೆ ಹೆಸರುಗಳನ್ನಷ್ಟೇ ಹೇಳಿರುವುದಾಗಿ ತಿಳಿದುಬಂದಿದೆ.
ಮಂಗಳವಾರದಿಂದ ನಗರಸಭೆ ಹಾಗೂ ಕೊಳಗೇರಿ ಮಂಡಳಿ ಅಧಿಕಾರಿಗಳು ತಮಿಳು ಕಾಲೋನಿಯಲ್ಲಿರುವ ಮನೆಗಳ ಸರ್ವೇ ಕಾರ್ಯಕ್ಕಿಳಿದಿದ್ದಾರೆ. ಈ ಸಮಯದಲ್ಲಿ ಸ್ಥಳೀಯರು ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ವಿಷಯ ತಿಳಿದ ಜಿಲ್ಲಾಧಿಕಾರಿಗಳು ಸರ್ವೇ ಕಾರ್ಯಕ್ಕೆ ಅಡ್ಡಿ ಪಡಿಸಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಇದರಿಂದ ಭಯಗೊಂಡ ನಿವಾಸಿಗಳು ಸರ್ವೇ ಕಾರ್ಯಕ್ಕೆ ಸಹಕಾರ ನೀಡಿದರು. ಸಂಘಟನೆಯ ಮುಖಂಡರೂ ಸರ್ವೇಗೆ ಅಡ್ಡಿಪಡಿಸುವ ಧೈರ್ಯ ತೋರದೆ ದೂರ ಉಳಿದರು. ಪೊಲೀಸರ ಭದ್ರತೆಯಲ್ಲಿ ಬುಧವಾರವೂ ಕಾಲೋನಿಯಲ್ಲಿ ಮನೆಗಳ ಸರ್ವೇ ಕಾರ್ಯ ನಡೆದು ಅಂತಿಮವಾಗಿ ೪೯೮ ಮನೆಗಳಿರುವುದು ಕಂಡುಬಂದಿದೆ ಎಂದು ಹೇಳಲಾಗಿದೆ.ದಾಖಲೆಗಳಿಲ್ಲದೆ ಅನಧಿಕೃತ ವಾಸ:
ಸರ್ವೇ ಸಮಯದಲ್ಲಿ ಕೆಲವೇ ಮಂದಿಯ ಬಳಿಯಷ್ಟೇ ದಾಖಲೆಗಳಿರುವುದು ಕಂಡುಬಂದಿದ್ದು, ನೂರಾರು ಜನರು ದಾಖಲೆಗಳಿಲ್ಲದೆ ತಮಿಳು ಕಾಲೋನಿಯಲ್ಲಿ ಅನಧಿಕೃತವಾಗಿ ವಾಸವಾಗಿರುವುದು ಬಹಿರಂಗಗೊಂಡಿದೆ. ಕೆಲವರು ತಮ್ಮಲ್ಲಿರುವ ವಾಸ ಸ್ಥಳದ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿ ಹೆಸರು ಬರೆಸಿದ್ದಾರೆ. ಉಳಿದವರು ತಾವು ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಅಧಿಕಾರಿಗಳು ಅವರ ಹೆಸರುಗಳನ್ನಷ್ಟೇ ಪಟ್ಟಿ ಮಾಡಿಕೊಂಡಿದ್ದಾರೆ. ಸರ್ವೇ ಕಾರ್ಯಕ್ಕೆ ತೆರಳಿದ ಅಧಿಕಾರಿಗಳು ಪ್ರತಿಯೊಂದು ಮನೆಗೂ ಸಂಖ್ಯೆಯನ್ನು ಬರೆದುಕೊಂಡು ಬಂದಿದ್ದಾರೆ. ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ ಕೇಳಿದರೂ ಕೊಟ್ಟಿಲ್ಲ. ಹಲವಾರು ಮಂದಿ ಮಾಹಿತಿ ನೀಡುವುದಕ್ಕೂ ನಿರಾಕರಿಸಿದರು. ಆ ಪ್ರಕಾರವಾಗಿ ೪೯೮ ಮನೆಗಳಿರುವುದು ಕಂಡುಬಂದಿದೆ ಎಂದು ಗೊತ್ತಾಗಿದೆ. ಈ ಹಿಂದೆ ತಮಿಳು ಕಾಲೋನಿಗೆ ಬೆಂಕಿ ಬಿದ್ದ ಸಮಯದಲ್ಲಿ ೫೧೮ ಮನೆಗಳಿರುವುದಾಗಿ ಪಟ್ಟಿ ಮಾಡಲಾಗಿತ್ತು. ಈಗ ಕೇವಲ ೪೯೮ ಮನೆಗಳಿರುವುದು ಅಧಿಕೃತವಾಗಿ ದೃಢಪಟ್ಟಿದೆ.ಮನೆಗಳನ್ನು ಕಳೆದುಕೊಳ್ಳುವ ಆತಂಕ:
ತಮಿಳು ಕಾಲೋನಿಯ ನಿವಾಸಿಗಳಿಗೆ ಚಿಕ್ಕಮಂಡ್ಯ ಕೆರೆಯಂಗಳದಲ್ಲಿ ೫೭೬ ಮನೆಗಳನ್ನು ನಿರ್ಮಿಸಲಾಗಿದೆ. ಹಾಲಿ ಇರುವವರಲ್ಲಿ ಕೇವಲ ೩೫ ಜನರಷ್ಟೇ ಅಧಿಕೃತ ದಾಖಲೆಯನ್ನು ಹೊಂದಿದ್ದಾರೆ. ಉಳಿದವರ ಬಳಿ ದಾಖಲೆಗಳಿಲ್ಲವೆಂದು ಹೇಳಲಾಗುತ್ತಿದೆ. ಒಮ್ಮೆ ಅವರ ಬಳಿ ದಾಖಲೆಗಳೇನಾದರೂ ಇದ್ದರೆ ನಿಗದಿತ ಸಮಯದೊಳಗೆ ದಾಖಲೆಗಳನ್ನು ಅಧಿಕಾರಿಗಳ ಎದುರು ಹಾಜರುಪಡಿಸಿ ವಸತಿ ಪಡೆಯುವುದಕ್ಕೆ ಫಲಾನುಭವಿಗಳಾಗಬೇಕು. ಇಲ್ಲವಾದಲ್ಲಿ ವಸತಿ ಹಕ್ಕಿನಿಂದ ವಂಚಿತರಾಗಬೇಕಾದ ಆತಂಕ ನಿವಾಸಿಗಳಲ್ಲಿ ಮನೆಮಾಡಿದೆ.ಎರಡನೇ ಕೋಗಿಲು ಪ್ರಕರಣ?
ಬೆಂಗಳೂರಿನಲ್ಲಿ ಕೋಗಿಲು ನಿವಾಸಿಗಳ ಪ್ರಕರಣದಲ್ಲಿ ಮೊದಲು ಎಲ್ಲರಿಗೂ ವಸತಿ ದೊರಕಿಸಿಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಆ ನಂತರದಲ್ಲಿ ಸರ್ವೇ ನಡೆಸಿದಾಗ ಕೆಲವೇ ಮಂದಿ ಬಳಿ ಮಾತ್ರ ದಾಖಲೆಗಳಿದ್ದು ಅವರಿಗಷ್ಟೇ ವಸತಿ ಕಲ್ಪಿಸಿಕೊಡುವುದಾಗಿ ಸರ್ಕಾರ ನಿರ್ಧಾರ ಮಾಡಿತು. ಅದೇ ಮಾದರಿಯಲ್ಲಿ ತಮಿಳು ಕಾಲೋನಿ ನಿವಾಸಿಗಳು ದಾಖಲೆಗಳನ್ನು ಒದಗಿಸದಿದ್ದರೆ ಕೋಗಿಲು ನಿವಾಸಿಗಳ ಮಾದರಿಯಲ್ಲೇ ಇಲ್ಲಿನ ನಿವಾಸಿಗಳೂ ವಸತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ಒಮ್ಮೆ ಜಿಲ್ಲಾಡಳಿತ ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ವಸತಿ ದೊರಕಿಸುವುದಾದರೆ ನಿವಾಸಿಗಳು ಸಂಕಷ್ಟದಿಂದ ಪಾರಾಗಬಹುದು. ಮುಂದೆ ಈ ವಿಚಾರವಾಗಿ ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.೫ ಎಕರೆ ೨೫ ಗುಂಟೆಯಲ್ಲಿ ತಮಿಳು ಕಾಲೋನಿಆಸ್ಪತ್ರೆಗೆ ಮಂಜೂರಾಗಿದ್ದ ಜಮೀನಿನ ಪೈಕಿ ೫ ಎಕರೆ ೨೫ ಗುಂಟೆ ಪ್ರದೇಶದಲ್ಲಿ ತಮಿಳು ಕಾಲೋನಿ ಪ್ರದೇಶವಿದ್ದು, ಅದನ್ನು ೧೧ ಮೇ ೧೯೭೯ರಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲಾಗಿತ್ತು. ಆದರೆ, ಜಿಲ್ಲಾಸ್ಪತ್ರೆಯ ಮೇಲೆ ರೋಗಿಗಳ ಒತ್ತಡ, ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಡಬೇಕಾಗಿದ್ದರಿಂದ ೧೯ ಅಕ್ಟೋಬರ್ ೨೦೧೦ರಲ್ಲಿ ರಾಜ್ಯ ಉಚ್ಛ ನ್ಯಾಯಾಲಯ ಕೊಳಚೆ ಪ್ರದೇಶವಾಗಿ ಘೋಷಣೆಯಾಗಿದ್ದ ೫ ಎಕರೆ ೨೫ ಗುಂಟೆ ಜಮೀನನ್ನು ಜಿಲ್ಲಾಸ್ಪತ್ರೆಗೆ ಉಳಿಸಿಕೊಟ್ಟಿತು. ಈ ಜಾಗದಲ್ಲಿರುವ ನಿವಾಸಿಗಳಿಗೆ ಬೇರೆ ಸ್ಥಳದಲ್ಲಿ ಜಮೀನು ನೀಡಲು ಮತ್ತು ಮನೆಗಳನ್ನು ನಿರ್ಮಿಸಿಕೊಡಲು ಸೂಚಿಸಲಾಗಿತ್ತು. ಅದರಂತೆ ಕೆರೆಯಂಗಳದಲ್ಲಿ ತಮಿಳು ಕಾಲೋನಿ ನಿವಾಸಿಗಳಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರೂ ಅಲ್ಲಿಗೆ ತೆರಳದೆ ಆಸ್ಪತ್ರೆ ಜಾಗದಲ್ಲೇ ಉಳಿದಿದ್ದಾರೆ. ರಾಜ್ಯ ಹೈಕೋರ್ಟ್ ಸೂಚನೆಯಂತೆ ಆಸ್ಪತ್ರೆ ಜಾಗದಿಂದ ತಮಿಳು ನಿವಾಸಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಮೂರ್ನಾಲ್ಕು ಬಾರಿ ಅವರ ಮನವೊಲಿಸಲು ನಡೆಸಿದ ಯತ್ನ ಫಲ ಕೊಡಲಿಲ್ಲ. ಸರ್ವೇ ಕಾರ್ಯ ನಡೆಸುವುದಕ್ಕೂ ಅಡ್ಡಿಪಡಿಸಿದ್ದರು.ಫೆ.೩ರಂದು ಹೈಕೋರ್ಟ್‌ನಲ್ಲಿ ವಿಚಾರಣೆ
ಆಸ್ಪತ್ರೆ ಜಾಗಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಫೆ.೩ರಂದು ವಿಚಾರಣೆಗೆ ಬರುತ್ತಿದ್ದು, ಅಷ್ಟರೊಳಗೆ ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ನೇತೃತ್ವದ ಸಮಿತಿ ಸ್ಯಾಟಲೈಟ್ ಸರ್ವೇ ನಡೆಸಿರುವ ವರದಿಯನ್ನು ಪಡೆದು ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆಗಳಿವೆ. ಜಾಗದ ವಿಚಾರವಾಗಿ ತಮಿಳು ಕಾಲೋನಿ ನಿವಾಸಿಗಳು ಹೈಕೋರ್ಟ್‌ನಿಂದ ತಂದಿದ್ದಾರೆನ್ನಲಾದ ತಡೆಯಾಜ್ಞೆಯನ್ನು ತೆರವುಗೊಳಿಸಿ ಆ ಜಾಗವೂ ಸೇರಿದಂತೆ ಒತ್ತುವರಿ ಜಾಗವನ್ನು ತೆರವುಗೊಳಿಸುವ ಕಾರ್ಯಕ್ಕೆ ಚುರುಕು ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ.