ಕಂಪ್ಲಿ: ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬೀದಿ ನಾಯಿ ನಿಯಂತ್ರಣ ಕುರಿತ ಸಭೆಯಲ್ಲಿ, ಪಟ್ಟಣದೊಳಗೆ ಹೆಚ್ಚುತ್ತಿರುವ ಬೀದಿ ನಾಯಿಗಳ ಸಂಖ್ಯೆ ಹಾಗೂ ಅವುಗಳಿಂದ ಉಂಟಾಗುತ್ತಿರುವ ಉಪಟಳಕ್ಕೆ ತಡೆಗಟ್ಟುವ ಕುರಿತು ಪ್ರಮುಖ ಚರ್ಚೆಗಳು ಜರುಗಿದವು.
ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು, ವಿದ್ಯಾಸಂಸ್ಥೆಗಳು, ಆಸ್ಪತ್ರೆಗಳು, ವ್ಯಾಪಾರಿಕ ಪ್ರದೇಶಗಳು ಸೇರಿದಂತೆ ನಾನಾ ಸಂಸ್ಥೆಗಳ ಒಳವಲಯಗಳಲ್ಲಿ ವಾಸಿಸುವ ನಾಯಿಗಳನ್ನು ಗುರುತಿಸಿ, ಅವರಿಗೆ ಅಂಕಿ ಸಂಖ್ಯೆಯನ್ನು ನೀಡುವಂತೆ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ. ಜೊತೆಗೆ ಜನಜಾಗೃತಿ ಮೂಡಿಸಲು ಪಟ್ಟಣದ ಪ್ರಮುಖ ರಸ್ತೆಗಳಲ್ಲೂ ಬ್ಯಾನರ್‌ಗಳನ್ನು ಪ್ರದರ್ಶಿಸುವುದರೊಂದಿಗೆ ಕಸ ವಿಲೇವಾರಿ ವಾಹನಗಳ ಮೂಲಕ ಮಾಹಿತಿ ನೀಡಲಾಗಿದೆ.ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಬೀದಿ ನಾಯಿ ಶೆಡ್ ನಿರ್ಮಿಸಿ, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ವೇಗಗೊಳಿಸಿ ಬೀದಿ ನಾಯಿ ಸಂಖ್ಯೆಯನ್ನು ನಿಯಂತ್ರಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಬೀದಿ ಬದಿ ವ್ಯಾಪಾರಿಗಳು, ಪತ್ರಿಕೆ ವಿತರಕರು, ಸೈಕಲ್–ಬೈಕ್ ಮೇಲೆ ಓಣಿಗಳಲ್ಲಿ ಸಂಚರಿಸುವ ತರಕಾರಿ ಮಾರಾಟಗಾರರು ಮೊದಲಾದವರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವ ಹಿನ್ನೆಲೆ, ಅವರಿಗೆ ಮುಂಜಾಗ್ರತಾ ಕ್ರಮವಾಗಿ ರೇಬೀಸ್ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಪ್ರಾಣಿದಯೆಯುಳ್ಳ ನಾಗರಿಕರು ನಿಯಮಾನುಸಾರ ಬೀದಿ ನಾಯಿಗಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿ ಇರುವವರು ಪುರಸಭೆಯ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ಕೆ.ಯು. ಬಸವರಾಜ, ಆರೋಗ್ಯ ನಿರೀಕ್ಷಕರಾದ ಪ್ರಕಾಶಬಾಬು, ಜೀವನ್‌ಸ್ವಾತಿ, ಸಮುದಾಯ ಸಂಚಾಲಕರಾದ ಸಿ. ಜಾನಕಿ, ಗೌಡರ ನಾಗರತ್ನಾ, ಭೂಮಿಕಾ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದ ಸದಸ್ಯ ಜೆ.ಎ. ದೇವಿಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.