ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮೀಕ್ಷೆ ಆರಂಭವಾಗಿದೆ.
ಮಡಿಕೇರಿ : ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿರುವ ಕುಟುಂಬಗಳ ಸದಸ್ಯರ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮೀಕ್ಷೆ ಆರಂಭವಾಗಿದ್ದು, ರಾಷ್ಟ್ರೀಯ ಸಪಾಯಿ ಕರ್ಮಚಾರಿಗಳ ನಾಯಕ ಐ.ಪಿ.ಡಿ ಸಾಲಪ್ಪ ಅವರ ಕುಲ ಬಾಂಧವರು ಸ್ವಾಭಿಮಾನಕ್ಕಾಗಿ ಅರುಂಧತಿಯಾರ್ ಜಾತಿಗೆ ಸೇರಿದವರೆಂದು ಸಮೀಕ್ಷೆ ಸಂದರ್ಭ ತಿಳಿಸುವಂತೆ ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾದ ರಾಜ್ಯಾಧ್ಯಕ್ಷ ಆರ್.ಕೃಷ್ಣ ಮನವಿ ಮಾಡಿದ್ದಾರೆ.
ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಹಾಗೂ ಆದಿ ದ್ರಾವಿಡ ಸಮುದಾಯ ಅರುಂಧತಿಯಾರ್ ಜಾತಿಗೆ ಸೇರಿದೆ. ಇವರು ಮ್ಯಾನ್ಯುವಲ್ ಸ್ಕ್ಯಾವೆಂಜರ್ ವೃತ್ತಿಯಲ್ಲಿ ತೊಡಗಿದ್ದು, ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಈ ಹಿಂದೆ ಮಾಡಿದ ಸಮೀಕ್ಷೆ ಕಾರ್ಯದ ಮಾಹಿತಿ ಸರಿಯಾಗಿ ಗೊತ್ತಿಲ್ಲದೆ ಅವಕಾಶ ವಂಚಿತರಾಗಿರುವುದರಿಂದ ಹಲವು ಯೋಜನೆಗಳನ್ನು ಕೈತಪ್ಪಿವೆ. ಶಿಕ್ಷಣ ಮತ್ತು ಆರೋಗ್ಯ ಸೇವೆಯು ಸಮರ್ಪಕವಾಗಿ ನಮಗೆ ಸಿಗುತ್ತಿಲ್ಲ. ಎಲ್ಲದರಿಂದಲೂ ನಾವು ವಂಚಿತರಾಗುತ್ತಿದ್ದೇವೆ. ಆದ್ದರಿಂದ ಈಗಾಗಲೇ ಆರಂಭವಾಗಿರುವ ಸಮೀಕ್ಷೆಯಲ್ಲಿ ಅರುಂಧತಿಯಾರ್ ಜಾತಿಗೆ ಸೇರಿದವರೆಂದು ಬರೆಸುವಂತಾಗಬೇಕು ಎಂದು ಹೇಳಿದರು. ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಕುಟುಂಬದವರೆಂದು ಪರಿಗಣಿಸುವ ಮೂಲಕ ನಮಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಿಕೊಡಬೇಕು. ಗ್ರಾಮೀಣ ಭಾಗದಲ್ಲಿ ಅಗತ್ಯ ದಾಖಲೆಗಳನ್ನು ನೀಡುವುದಕ್ಕಾಗಿ ಅವರಿಗೆ ಅವಕಾಶ ನೀಡಬೇಕು. ಪೌರಕಾರ್ಮಿಕರಿಗೆ ಶೇ.3ರಷ್ಟು ಒಳಮೀಸಲಾತಿ ನೀಡಬೇಕು. ಪರಿಶಿಷ್ಟ ಜಾತಿಗೆ ಸೇರಿದ ನಮಗೆ ಅರುಂಧತಿಯಾರ್ ಎಂಬ ಜಾತಿಯ ದೃಢೀಕರಣ ಪತ್ರ ನೀಡಲು ಸರ್ಕಾರ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಕುಶಾಲನಗರ ತಾಲೂಕು ಅಧ್ಯಕ್ಷ ಹೆಚ್.ಆರ್.ಮಂಜು, ಅರಕಲಗೋಡು ತಾಲೂಕು ಅಧ್ಯಕ್ಷ ವೆಂಕಟೇಶ್, ಪೆರುಮಾಳ್, ಸಿ.ಆರ್.ಮಹದೇವಯ್ಯ ಸುದ್ದಿಗೋಷ್ಠಿಯಲ್ಲಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.