ಶಿಕಾರಿಪುರ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ. ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆ ಹುಟ್ಟಿನಿಂದಲೇ ಬಂದಿರುತ್ತದೆ. ಅದನ್ನು ಗುರುತಿಸಿ ಅನಾವರಣಗೊಳಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರು ಆಗಿರುತ್ತದೆ ಎಂದು ಸ್ಥಳೀಯ ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಕೋಟೋಜಿರಾವ್ ಹೇಳಿದರು.
ಶುಕ್ರವಾರ ಪಟ್ಟಣದ ಭವಾನಿ ರಾವ್ ಕೇರಿಯಲ್ಲಿನ ಮೈತ್ರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಮತ್ತು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಮತ್ತು ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನದ ಅಂಗವಾಗಿ ತಾಲೂಕುಮಟ್ಟದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇಂದಿನ ಮಕ್ಕಳು ಕೇವಲ ಪುಸ್ತಕಗಳ ವಾಚನ ಮಾಡಿದರೆ ಸಾಲದು, ಅದರೊಂದಿಗೆ ಆಟ, ಪ್ರದರ್ಶನ, ಮನರಂಜನೆ ಸಹ ಮುಖ್ಯವಾದದು. ಪ್ರತಿಯೊಂದು ಮಗುವಿನಲ್ಲೂ ವಿಜ್ಞಾನದ ಅರಿವು ಇದ್ದೇ ಇರುತ್ತದೆ. ಅನಾವರಣಗೊಳಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಇಂತಹ ಒಂದು ಉತ್ತಮ ಕಾರ್ಯವನ್ನು ಮೈತ್ರಿ ಮತ್ತು ಕುಮದ್ವತಿ ಶಾಲೆ ಶಿಕ್ಷಕರು ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ವಿಜ್ಞಾನ ಎಂಬುದು ಪ್ರತಿಯೊಂದು ಮನೆಯಲ್ಲೂ ಪ್ರತಿಯೊಂದು ವಿಷಯದಲ್ಲೂ ಇದೆ. ವಿಜ್ಞಾನವಿಲ್ಲದೇ ಜೀವನವಿಲ್ಲ. ಬದುಕು ಹಾಗೂ ವಿಜ್ಞಾನ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಈ ರೀತಿಯ ರಸಪ್ರಶ್ನೆ ಕಾರ್ಯಕ್ರಮ ಮಕ್ಕಳಿಗೆ ಬಹು ಉಪಯೋಗ. ಇವುಗಳಿಂದ ಅವರಲ್ಲಿ ಉತ್ಸುಕತೆ ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು.ಅಧ್ಯಕ್ಷತೆ ವಹಿಸಿದ್ದ ಮೈತ್ರಿ ಪ್ರಾಥಮಿಕ ಶಾಲೆ ಮತ್ತು ಕುಮದ್ವತಿ ಪ್ರೌಢಶಾಲೆ ಪ್ರಾಚಾರ್ಯ ವಿಶ್ವನಾಥ ಪಿ. ಮಾತನಾಡಿ, ವಿಜ್ಞಾನದ ಹೊಸ ಹೊಸ ಆವಿಷ್ಕಾರವನ್ನು ಶಾಲಾ ತರಗತಿಯಲ್ಲಿ ಎಷ್ಟು ಹೆಚ್ಚು ಬೋಧಿಸುತ್ತೇವೆಯೋ, ಆಗ ವಿದ್ಯಾರ್ಥಿಗಳು ವಿಜ್ಞಾನಿಯಾಗಲು ಒಂದೊಂದೇ ಹೆಜ್ಜೆಯಿಡಲು ಪ್ರಾರಂಭಿಸುತ್ತಾರೆ. ಹೀಗೆ ಒಂದೊಂದೇ ಮೆಟ್ಟಿಲನ್ನು ಏರುತ್ತ ಮುಂದೆ ವಿಜ್ಞಾನಿಯಾಗಿ ಇಲ್ಲವೇ ವಿಜ್ಞಾನದ ವಿಚಾರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ವಿಜ್ಞಾನದ ಮನೋಭಾವನೆಯನ್ನು ಮಾಡಿಸುವುದು ರಸಪ್ರಶ್ನೆ ಕಾರ್ಯಕ್ರಮದ ಗುರಿಯಾಗಿದೆ ಎಂದರು.
ರಸಪ್ರಶ್ನೆಯ ಸಂಪನ್ಮೂಲ ವ್ಯಕ್ತಿ ಕುಮದ್ವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಭಿಲಾಷ್, ಮೈತ್ರಿ ಶಾಲೆ ಪ್ರಭಾರ ಮುಖ್ಯೋಪಾಧ್ಯಾಯ ಪ್ರಶಾಂತ ಕುಬಸದ ಹಾಗೂ ಶಾಲೆಯ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಚೇತನ ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಳಿನಾ ಸ್ವಾಗತಿಸಿ, ವಿದ್ಯಾ ನಿರೂಪಿಸಿದರು. ಲಕ್ಷ್ಮೀ ವಂದಿಸಿದರು.