ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ । ಜಿಲ್ಲಾಡಳಿತಕ್ಕೆ ಮನವಿ
ಪ್ರತಿಭಟನೆಯಲ್ಲಿ ಹಾಸನ ಜಿಲ್ಲಾ ಸಂಚಾಲಕಿ ಚೈತ್ರ ಮಾಧ್ಯಮದೊಂದಿಗೆ ಮಾತನಾಡಿ, ‘ಹಾಸನದ ಡೈರಿ ಸರ್ಕಲ್‌ನಲ್ಲಿರುವ ಬಿಸಿಎಂ ಬಾಲಕಿಯರ ಎಂಜಿನಿಯರಿಂಗ್/ ಮೆಡಿಕಲ್ ವೃತ್ತಿಪರ ಹಾಸ್ಟೆಲ್‌ನಲ್ಲಿ ಇತ್ತೀಚಿಗೆ ನಡೆದಿರುವ ಘಟನೆಗಳು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳಿಸಿದೆ. ಒಂದು ತಿಂಗಳ ನಡುವೆ ಎರಡು ಬಾರಿ ಅಪರಿಚಿತ ವ್ಯಕ್ತಿಗಳು ನಿಲಯದ ಒಳಗಡೆ ನುಗ್ಗಿದ್ದರು ಎಂದು ಕೆಲವು ವಿದ್ಯಾರ್ಥಿನಿಯರಿಂದ ತಿಳಿದು ಬಂದಿತ್ತು. ನಿಲಯದ ಪಾಲಕರಿಗೆ ಹಾಗೂ ಇಲಾಖೆಯ ತಾಲೂಕು ಅಧಿಕಾರಿಗಳಿಗೂ ಈ ಘಟನೆಯನ್ನು ತಿಳಿಸಿದ್ದರೂ ಅವರಿಂದ ಯಾವುದೇ ಸೂಕ್ತ ಪ್ರತಿಕ್ರಿಯೆ ಹಾಗೂ ಭದ್ರತೆ ದೊರೆತಿಲ್ಲ’ ಎಂದು ದೂರಿದರು.
‘ಅಪರಿಚಿತ ವ್ಯಕ್ತಿ ಹಾಸ್ಟೆಲ್ ಒಳಗೆ ನುಗ್ಗಿರುವುದು ಸಿಸಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಈ ಘಟನೆಗಳು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಆತಂಕ ಹುಟ್ಟಿಸಿದೆ. ರಾತ್ರಿ ವೇಳೆಯಲ್ಲಿ ಹಾಸ್ಟೆಲ್‌ನಲ್ಲಿ ಇರಲು ಭಯ ಹುಟ್ಟಿಸುತ್ತಿದೆ. ಬಿಸಿಎಂ ಇಲಾಖೆಯ ತಾಲೂಕು ಅಧಿಕಾರಿಗಳು ಒಮ್ಮೆಯೂ ಬಂದು ವಿದ್ಯಾರ್ಥಿಗಳಿಗೆ ಧೈರ್ಯವನ್ನು ತುಂಬುವ ಕೆಲಸವನ್ನು ಮಾಡದೆ ಕೇವಲ ನಿಲಯ ಪಾಲಕರೊಂದಿಗೆ ಮಾತನಾಡಿಕೊಂಡು ಹೋಗಿದ್ದಾರೆ’ ಎಂದು ಹೇಳಿದರು.‘ಎಂಜಿನಿಯರಿಂಗ್/ ಮೆಡಿಕಲ್ ವಿದ್ಯಾರ್ಥಿನಿಲಯವನ್ನು ಸರಿಯಾದ ಸೂಕ್ತ ಭದ್ರತೆ ಇರುವ ನಿಲಯಕ್ಕೆ ವರ್ಗಾಯಿಸಬೇಕು. ಇಲ್ಲವೇ ನಿಲಯಕ್ಕೆ ಕಟ್ಟು ನಿಟ್ಟಿನ ಸೂಕ್ತ ಭದ್ರತೆಯನ್ನು ಒದಗಿಸಬೇಕು. ಜತೆಗೆ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.