ಜೀವಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಹೊಸ ಪ್ರಯೋಗವೊಂದು ಇದೀಗ ಶ್ಲಾಘನೆಗೆ ಪಾತ್ರವಾಗಿದೆ
ವಡಗೇರಾ : ಜೀವಸಂಕುಲಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ವಡಗೇರಾ ತಾಲೂಕು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಹೊಸ ಪ್ರಯೋಗವೊಂದು ಇದೀಗ ಶ್ಲಾಘನೆಗೆ ಪಾತ್ರವಾಗಿದೆ. ಒಂದು ಕೆಜಿ ಪ್ಲಾಸ್ಟಿಕ್ - ತ್ಯಾಜ್ಯ ನೀಡಿದರೆ ಒಂದು ಕೆಜಿ ಸಕ್ಕರೆ ನೀಡುವ ವಿನೂತನ ಅಭಿಯಾನ ಎಲ್ಲರ ಗಮನ ಸೆಳೆದಿದೆ. ತಡಿಬಿಡಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗೋವಿಂದ ರಾಠೋಡ ಈ ಅಭಿಯಾನದ ಹಿಂದಿನ ರೂವಾರಿ. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಹಾಗೂ ಪ್ಲಾಸ್ಟಿಕ್ ಮುಕ್ತ ಗ್ರಾಮ ನಿರ್ಮಾಣಕ್ಕೆಂದು ಈ ವಿನೂತನ ಅಭಿಯಾನ ನಡೆಸಿದ್ದಾರೆ.
ಈ ವಿಶಿಷ್ಟ ಅಭಿಯಾನಕ್ಕೆಈಗಾಗಲೇ ಗ್ರಾಮಸ್ಥರು ಆಕರ್ಷಿತರಾಗಿ ಅಧಿಕಾರಿ ಗೋವಿಂದ ರಾಠೋಡಗೆ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ. ಇದಕ್ಕೆಂದೇ ತಡಿಬಿಡಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಕ್ವಿಂಟಾಲ್ ಗಟ್ಟಲೇ ಸಕ್ಕರೆ ದಾಸ್ತಾನು ಮಾಡಲಾಗಿದೆ. ಪ್ಲಾಸ್ಟಿಕ್ ವಸ್ತುಗಳ ನೀಡಿ, ಸಕ್ಕರೆ ತೆಗೆದುಕೊಂಡು ಹೋಗಲು ಗ್ರಾಮದಲ್ಲಿ ಪಂಚಾಯ್ತಿ ವಾಹನದ ಮೂಲಕ ವ್ಯಾಪಕ ಜಾಗೃತಿ ಮೂಡಿಸಲಾಗುತ್ತಿದೆ.
ಈ ಅಭಿಯಾನದಿಂದ ಬುಧವಾರ ಒಂದೇ ದಿನಕ್ಕೆ 25 ಕೆಜಿ ಪ್ಲಾಸ್ಟಿಕ್ ಸಂಗ್ರಹವಾಗಿದ್ದು, ಗುರುವಾರ 6 - 8 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಹೀಗಾಗಲೇ ಜನರು ಪ್ಲಾಸ್ಟಿಕ್ ನೀಡಿ ಸಕ್ಕರೆಯನ್ನು ಕೊಂಡೊಯ್ಯುತ್ತಿದ್ದಾರೆ. ಇದಕ್ಕೆಂದೇ ಸುಮಾರು ₹3900 ಮೌಲ್ಯದ ಒಂದು ಕ್ವಿಂಟಾಲ್ ಸಕ್ಕರೆ ಖರೀದಿಸಲಾಗಿದೆ ಎಂದು ಗೋವಿಂದ್ ರಾಠೋಡ್ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಸದ್ಯ, ಈ ಅಭಿಯಾನ ಕೇವಲ ಒಂದು ಗ್ರಾಮ ಪಂಚಾಯ್ತಿಯಲ್ಲಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ 17 ಗ್ರಾಮ ಪಂಚಾಯ್ತಿಗಳಲ್ಲಿಯೂ ಕೂಡ ಈ ಪ್ರಯೋಗ ನಡೆಸಲಾಗುವುದಂತೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ವಿನೂತನ ಕಾರ್ಯಕ್ರಮಕ್ಕೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಚಾಲನೆ ನೀಡಲಾಗಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮಾರಡ್ಡಿ ಸೇರಿದಂತೆ ಹಲವರ ಉಪಸ್ಥಿತಿಯಲ್ಲಿ ವಡಗೇರಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಈ ಅಭಿಯಾನಕ್ಕೆ ಚಾಲನೆ ನೀಡಿದರು.