ಮನುಷ್ಯ ಹೃದಯವಂತನಾದರೆ ಆತನ ಬದುಕೇ ಭೂಷಣ: ಶಂಭುನಾಥ ಸ್ವಾಮೀಜಿ

KannadaprabhaNewsNetwork | Published : Jul 14, 2024 1:32 AM

ಸಾರಾಂಶ

ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಾಗೂ ನಂತರದ ಶೈಕ್ಷಣಿಕ ಕಾಲಘಟ್ಟವು ವಿದ್ಯಾರ್ಥಿಗಳು ಭವಿಷ್ಯ ನಿರ್ಧರಿಸುವ ದಿನಗಳಾಗಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜಕ್ಕೆ ಮಾರಕ ವ್ಯಕ್ತಿಗಳು ಆಗಬಹುದು, ಡ್ರಗ್ಸ್, ಗಾಂಜಾದಂತಹ ದುಶ್ಚಟಗಳು ಯಾವಾಗ ಬೇಕಾದರೂ ನಿಮ್ಮನ್ನು ಆವರಿಸಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಒತ್ತಡ ನಿವಾರಣೆ, ಸಹವಾಸ ದೋಷದಿಂದ ಇಂತಹ ದುಶ್ಚಟಗಳಿಗೆ ದಾಸರಾದರೆ ನಿಮ್ಮ ಬದುಕು ಬರಡಾಗುವುದರಲ್ಲಿ ಸಂದೇಹವಿಲ್ಲ,

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯೆಗೆ ವಿನಯ ಭೂಷಣ, ವಿನಯಕ್ಕೆ ವಿವೇಕ ಭೂಷಣ, ವಿವೇಕವಂತ ಮನುಷ್ಯ ಹೃದಯವಂತನಾದರೆ ಅಂತಹ ಮನುಷ್ಯನ ಬದುಕೇ ಭೂಷಣ ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜು ವತಿಯಿಂದ ಶ್ರೀ ಜೇನುಕಲ್ಲು ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಫ್ರೆಷರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ಎಸ್ಎಸ್ಎಲ್ ಸಿ ನಂತರ ಬರುವ ಪಿಯುಸಿ ಶಿಕ್ಷಣ ಹುಡುಗಾಟದ ಸಮಯವಾಗಿರುವುದಿಲ್ಲ, ಬದುಕಿನ ಹುಡುಕಾಟದ ಆದಿ ಆಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತು ಶಿಕ್ಷಣದ ಜತೆಗೆ ಶಿಸ್ತು ಮತ್ತು ಸಂಯಮವನ್ನು ಮೈಗೂಡಿಸಿಕೊಂಡು ತಮ್ಮ ಭವ್ಯ ಭವಿಷ್ಯಕ್ಕೆ ಅಡಿಪಾಯ ಹಾಕಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹೆತ್ತವರು ಕಂಡ ಕನಸು, ಕಾಲೇಜಿನಲ್ಲಿ ಅಧ್ಯಾಪಕ ವೃಂದ ನಿಮ್ಮ ಏಳಿಗೆಗಾಗಿ ಪಡುವ ಶ್ರಮ ಸಾರ್ಥಕವಾಗಬೇಕಾದರೆ ಕಲಿಕೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ಬೆಳೆಸಿಕೊಳ್ಳಬೇಕು. ಇದಕ್ಕೆ ಶ್ರೀಮಠದ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ಮಾರ್ಗದರ್ಶನ ಸದಾ ದೊರಕಲಿದೆ ಎಂದು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಡಿವೈಎಸ್ ಪಿ ಲೋಕೇಶ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಹಾಗೂ ನಂತರದ ಶೈಕ್ಷಣಿಕ ಕಾಲಘಟ್ಟವು ವಿದ್ಯಾರ್ಥಿಗಳು ಭವಿಷ್ಯ ನಿರ್ಧರಿಸುವ ದಿನಗಳಾಗಿವೆ. ಸ್ವಲ್ಪ ಎಚ್ಚರ ತಪ್ಪಿದರೂ ಸಮಾಜಕ್ಕೆ ಮಾರಕ ವ್ಯಕ್ತಿಗಳು ಆಗಬಹುದು, ಡ್ರಗ್ಸ್, ಗಾಂಜಾದಂತಹ ದುಶ್ಚಟಗಳು ಯಾವಾಗ ಬೇಕಾದರೂ ನಿಮ್ಮನ್ನು ಆವರಿಸಿಕೊಳ್ಳಬಹುದು. ಇಂಥ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಒತ್ತಡ ನಿವಾರಣೆ, ಸಹವಾಸ ದೋಷದಿಂದ ಇಂತಹ ದುಶ್ಚಟಗಳಿಗೆ ದಾಸರಾದರೆ ನಿಮ್ಮ ಬದುಕು ಬರಡಾಗುವುದರಲ್ಲಿ ಸಂದೇಹವಿಲ್ಲ, ಈ ನಿಟ್ಟಿನಲ್ಲಿ ಪೋಷಕರು ಸಹ ತಮ್ಮ ಮಕ್ಕಳ ಚಲನ ವಲನಗಳ ಬಗ್ಗೆ ನಿಗವಹಿಸುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಸಿಇಟಿ, ನೀಟ್ ಹೀಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಶಿಕ್ಷಣ ತಜ್ಞ ಅನಿಲ್ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ ಲಿಂಗರಾಜು ಎಂ,ಜೆ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.

Share this article