ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಹಿಳೆ ಆರ್ಥಿವಾಗಿ ಬಲಶಾಲಿಯಾದಲ್ಲಿ ಆ ಕುಟುಂಬ ಸದೃಢವಾಗಿರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಮಾಳಪ್ಪನಹಟ್ಟಿ ತಿರುಮಲ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಒಕ್ಕೂಟದ ಪದಾಧಿಕಾರಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ಅಡುಗೆ ಮನೆಗೆ ಮಾತ್ರ ಸೀಮಿತಳಾಗಿದ್ದ ಮಹಿಳೆ ಈಗ ಎಲ್ಲಾ ರಂಗಗಳಲ್ಲಿಯೂ ಮುಂಚೂಣಿಯಲ್ಲಿರುವುದರಿಂದ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಯಾಗಿದೆ ಎಂದರು.
ವೀರವನಿತೆ ಒನಕೆ ಓಬವ್ವ, ಕಿತ್ತೂರು ರಾಣಿಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿ, ಇವರೆಲ್ಲ ಸಂಕೋಲೆಯನ್ನು ತೊರೆದು ದೇಶ ಸೇವೆಗಾಗಿ ಹೋರಾಡಿದ ದಿಟ್ಟ ಮಹಿಳೆಯರು. 21ನೇ ಶತಮಾನ ಮಹಿಳೆಯರ ಶತಮಾನ. ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರಹೆಗಡೆ ಅವರು ದೂರದೃಷ್ಟಿಯಿಂದ ಚಿಂತಿಸಿ ಮಹಿಳೆಯರ ಮೇಲೆ ನಂಬಿಕೆಯಿಟ್ಟು ಬ್ಯಾಂಕ್‍ಗಳಿಂದ ಸಾಲ ಸಿಗುವಂತ ವ್ಯವಸ್ಥೆ ಕಲ್ಪಿಸಿರುವುದು ನಿಜಕ್ಕೂ ಶ್ಲಾಘನೀಯ. ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಮನಸಲ್ಲಿ ಚಿಂತೆಯಿಟ್ಟುಕೊಳ್ಳುವ ಬದಲು ಧೈರ್ಯವಾಗಿ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಮನವರಿಕೆ ಮಾಡಿದರು.ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಮಂಜುನಾಥ್ ಮಾತನಾಡಿ, ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರನ್ನು ಸ್ವಾವಲಂಭಿಯನ್ನಾಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ನಾಡಿನಾದ್ಯಂತ ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿರುವುದನ್ನು ಕಂಡು ಸಹಿಸದ ಕೆಲವು ಪಟ್ಟಭದ್ರರು ಯೂಟೂಬ್‍ನಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರಹೆಗಡೆರವರ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಹೋರಾಟದ ಮೂಲಕ ಅಂತಹವರಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಂಗವಿಕಲರಿಗೆ ಮಾಸಾಶನ, ವಿದ್ಯಾರ್ಥಿ ವೇತನ, ನಿರಾಶ್ರಿತರಿಗೆ ವಾತ್ಸಲ್ಯ ಮನೆ ಕಟ್ಟಿಸಿಕೊಡುವುದು, ವಯೋವೃದ್ಧರಿಗೆ ವಾಟರ್ ಬೆಡ್ ಇನ್ನಿತರೆ ಅನೇಕ ಸವಲತ್ತುಗಳನ್ನು ನೀಡಲಾಗುತ್ತಿದೆ. ಸ್ವಸಹಾಯ ಸಂಘಗಳ ಮಹಿಳೆಯರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದುಪಯೋಗ ಪಡಿಸಿಕೊಂಡು ಜೀವನ ಮಟ್ಟ ಸುಧಾರಿಸಿಕೊಂಡಿದ್ದಾರೆ ಎಂದು ಹೇಳಿದರು.ತಾಲೂಕು ಯೋಜನಾಧಿಕಾರಿ ಬಿ.ಅಶೋಕ್ ಪ್ರಾಸ್ತಾವಿಕ ಮಾತನಾಡಿ, 6,751 ಪ್ರಗತಿ ಬಂಧು ಸ್ವಸಹಾಯ ಸಂಘಗಳಿದ್ದು, 62,759 ಸದಸ್ಯರುಗಳಿದ್ದಾರೆ. 35.11 ಕೋಟಿ ಉಳಿತಾಯವಾಗಿದೆ. ಡಾ.ಡಿ ವೀರೇಂದ್ರಹೆಗಡೆರವರು ಕೇವಲ ಸ್ವಸಹಾಯ ಸಂಘಗಳಿಂದ ಮಹಿಳೆಯರಿಗಷ್ಟೆ ಯಲ್ಲದೆ, ವೃದ್ಧರಿಗೆ, ನಿರಾಶ್ರಿತರಿಗೆ, ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಒಕ್ಕೂಟದ ಪದಾಧಿಕಾರಿಗಳು ಸವಲತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗುವಂತೆ ತಿಳಿಸಿದರು.
ಈ ವೇಳೆ ಬ್ಯಾಂಕ್ ಆಫ್ ಬರೋಡ ಚಿತ್ರದುರ್ಗ ಶಾಖೆಯ ಸಹಾಯಕ ಪ್ರಬಂಧಕಿ ಮಧುಶ್ರಿ, ಸುಬ್ಬಾರೆಡ್ಡಿ, ಸುರೇಂದ್ರ ಇದ್ದರು.