ಅಧಿಕಾರಿ ಲಂಚ ಕೇಳಿದರೆ ದೂರು ದಾಖಲಿಸಿ

KannadaprabhaNewsNetwork |  
Published : May 07, 2025, 12:47 AM IST
ಸಿಕೆಬಿ-3 ಜಿಲ್ಲಾ ಪಂಚಾಯತ್ ನ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ದೂರು ಪ್ರಕರಣಗಳ ವಿಚಾರಣೆ ಕಾರ್ಯಕ್ರಮದಲ್ಲಿ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಮಾತನಾಡಿದರು | Kannada Prabha

ಸಾರಾಂಶ

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಲಂಚ ನೀಡಿದರೆ ಮಾತ್ರ ಕೆಲಸ ಕಾರ್ಯಗಳು ಆಗುತ್ತವೆ ಹಾಗೂ ಕಡತಗಳು ವಿಲೆವಾರಿಯಾಗುತ್ತವೆ ಎಂದು ಸಾರ್ವತ್ರಿಕವಾಗಿ ಸುಖಾಸುಮ್ಮನೆ ಮಾತನಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಲೋಕಾಗೆ ದೂರು ನೀಡಿ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಯಾವುದೇ ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳಿದರೆ ಅಂತಹವರ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಮನವಿ ಮಾಡಿದರು. ಜಿಲ್ಲಾಡಳಿತ ಭವನದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಲೋಕಾಯುಕ್ತದಲ್ಲಿನ ಬಾಕಿ ದೂರು ಪ್ರಕರಣಗಳ ವಿಲೇವಾರಿಗಾಗಿ ವಿಚಾರಣೆ ನಡೆಸಿ, ಅವರು ಮಾತನಾಡಿದರು.

ಸಾರ್ವಜನಿಕರ ಪಾತ್ರ ಮುಖ್ಯ

ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸಾರ್ವಜನಿಕರ ಪಾತ್ರ ಮುಖ್ಯವಾಗಿದೆ. ಪ್ರತಿ ಸರ್ಕಾರಿ ಕಚೇರಿಗಳಲ್ಲೂ ಲಂಚ ನೀಡಿದರೆ ಮಾತ್ರ ಕೆಲಸ ಕಾರ್ಯಗಳು ಆಗುತ್ತವೆ ಹಾಗೂ ಕಡತಗಳು ವಿಲೆವಾರಿಯಾಗುತ್ತವೆ ಎಂದು ಸಾರ್ವತ್ರಿಕವಾಗಿ ಸುಖಾಸುಮ್ಮನೆ ಮಾತನಾಡುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಲಂಚಕ್ಕೆ ಬೇಡಿಕೆ ಇಡುವ ಅಥವಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸುವ ಅಧಿಕಾರಗಳು ಮತ್ತು ಸಿಬ್ಬಂದಿ ಮೇಲೆ ದೂರು ಕೊಟ್ಟರೆ ಸೂಕ್ತ ಕಾನೂನು ಕ್ರಮಗಳನ್ನು ಲೋಕಾಯುಕ್ತವು ಜರುಗಿಸಲಾಗುತ್ತದೆ. ಆ ನಿಟ್ಟಿನಲ್ಲಿ ಸಾರ್ವಜನಿಕರು ಜಾಗೃತರಾಗಬೇಕು ಎಂದರು. ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿ ತನಿಖೆ ಬಾಕಿ ಇರುವ 200 ದೂರು ಪ್ರಕರಣಗಳಲ್ಲಿ ನೆನ್ನೆ 65 ಪ್ರಕರಣಗಳನ್ನು ವಿಚಾರಣೆ ನಡೆಸಿ 48 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗಿದೆ ಹಾಗೂ ಸದರಿ ದೂರುದಾರರಿಗೆ ನ್ಯಾಯ ಒದಗಿಸಲಾಗಿದೆ. ಮಂಗಳವಾರ 55 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 23 ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ ಎಂದರು.

ಎಲ್ಲರಿಗೂ ಕಾನೂನಿನ ಜ್ಞಾನ

ವಿಚಾರಣೆ ವೇಳೆ ದೂರುದಾರರಿಗೆ ಕಾನೂನು ಸಲಹೆ ನೀಡಲಾಗಿದೆ. ಜೊತೆಗೆ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಹಾಗೂ ಕಾನೂನು ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ತಿಳಿಸಲಾಗಿದೆ. ನಾಗರಿಕರಿಗೆ ಸೂಕ್ತ ಕಾನೂನಿನ ಜ್ಞಾನ ದೊರೆತರೆ ನ್ಯಾಯಾಧೀಶರಿಗೂ ಕೆಲಸಗಳು ಕಡಿಮೆಯಾಗುತ್ತದೆ. ನಿರ್ದಿಷ್ಟವಾಗಿ ಯಾವ ಪ್ರಕರಣಗಳನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ನೀಡಬಹುದು ಎಂಬುದನ್ನು ಅರಿತರೆ ನ್ಯಾಯಾಲಯದ ಸಮಯವು ಉಳಿತಾಯವಾಗಿ ಹೆಚ್ಚಿನ ಪ್ರಕರಣಗಳನ್ನು ವಿಲೆವಾರಿ ಮಾಡಲು ಸಹಕಾರಿಯಾಗುತ್ತದೆ ಎಂದರು.

ಮುಖ್ಯವಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧ ಪಟ್ಟ ದೂರು ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲಿದ್ದು, ಅವುಗಳ ತ್ವರಿತ ವಿಲೆವಾರಿಗೆ ವಿಚಾರಣೆ ನಡೆಸಲಾಗಿದೆ. ಖಾತೆ ಬದಲಾವಣೆ, ಈ ಖಾತೆ ಬದಲಾವಣೆ, ಆಸ್ತಿ ದುರಸ್ತಿ ಪ್ರಕರಣ, ಪೊಡಿ ಪ್ರಕರಣಗಳೇ ಹೆಚ್ಚು ಕಂಡುಬರುತ್ತಿವೆ ಎಂದು ಉಪ ಲೋಕಾಯುಕ್ತರು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಂತೆ ಇತರ ಜಿಲ್ಲೆಗಳಲ್ಲೂ ಭೇಟಿ ಮಾಡಿ ಅಲ್ಲಿಯೂ ಸಮಸ್ಯೆಗಳು ಇದೇ ರೀತಿ ಕಂಡು ಬಂದರೆ ಭ್ರಷ್ಟಾಚಾರ ನಿರ್ಮೂಲನೆಗೆ ಸರ್ಕಾರಕ್ಕೆ ಸಲಹೆ ನೀಡಲಾಗುವುದು. ಒಟ್ಟಾರೆ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಹಾಗೂ ಆಡಳಿತವರ್ಗವೂ ಕರ್ತವ್ಯ ನಿಷ್ಠೆ ಹಾಗೂ ಬದ್ಧತೆಯನ್ನು ತೋರಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಉಪ ಲೋಕಾಯುಕ್ತರ ಕಾರ್ಯದರ್ಶಿ ನ್ಯಾ.ಕಿರಣ್.ಎಂ.ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಎಂ.ಶಿಲ್ಪ. ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಡಿಸಿಎಫ್ಓ ಹೆಚ್.ಸಿ.ಗಿರೀಶ್, ಹೆಚ್ಚುವರಿ ಪೋಲಿಸ್ ವರಿಷ್ಟಾಧಿಕಾರಿ ಬಿ.ಜಗನ್ನಾಥ್ ರೈ,ಲೋಕಾಯುಕ್ತ ಎಸ್ ಪಿ ಜಾನ್ ಅಂಟೋನಿ, ದೂರುದಾರರು,ಸಾರ್ವಜನಿಕರು, ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''