ಕಲಾವಿದರನ್ನು ಪ್ರೋತ್ಸಾಹಿಸಿದರೆ ಕಲೆ ಬೆಳೆಯಲು ಸಾಧ್ಯ

KannadaprabhaNewsNetwork | Published : Apr 24, 2025 12:05 AM

ಸಾರಾಂಶ

ಸರ್ಕಾರ ಕಲಾ ವಿದ್ಯಾರ್ಥಿಗಳ ನೇಮಕಾತಿ ಮಾಡುವ ಮುಖಾಂತರ ಕಲಾಕ್ಷೇತ್ರ ಬೆಳೆಸಬೇಕು. ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೂ ಕಲಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು

ಗದಗ: ಕಲಾವಿದರಿಗೆ ಸ್ಥಾನಮಾನ ನೀಡಿ, ಪ್ರೋತ್ಸಾಹ ನೀಡಿ ಸಹಕರಿಸಿದರೆ ಮಾತ್ರ ಕಲಾ ಕ್ಷೇತ್ರ ಬೆಳೆಯುತ್ತದೆ ಎಂದು ಹಿರಿಯ ಕಲಾವಿದ ಪ್ರೊ. ಅಶೋಕ ಅಕ್ಕಿ ಹೇಳಿದರು.

ನಗರದ ಡಾ. ತೋಂಟದ ಸಿದ್ದಲಿಂಗ ಶ್ರೀಗಳ ಕನ್ನಡ ಭವನ ಕಸಾಪ ಕಾರ್ಯಾಲಯದಲ್ಲಿ ವಿಶ್ವಕಲಾ ದಿನಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ದೃಶ್ಯಕಲಾವಿದರ ಸಂಘ, ಪೂರ್ಣತಾರೆ ಜನಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ವರ್ಣ ಸಿಂಚನ, ಶರಣರ ವಚನ ಚಿತ್ರ ಪ್ರದರ್ಶನ, ಗಾನ ಕುಂಚ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಠಿಣ ಪರಿಶ್ರಮದಿಂದ ಮಾತ್ರ ಕಲೆ ಎಂಬ ಅಭಿವ್ಯಕ್ತಿ ಸಿದ್ಧಿಸಲು ಸಾಧ್ಯವಾಗುತ್ತದೆ. ಅದೊಂದು ದೈವದತ್ತ ಕೊಡುಗೆ. ಕಲೆಗಾಗಿ ತಮ್ಮ ಜೀವನ ಸಮರ್ಪಿಸಿದ ಕಲಾವಿದ ಲಿಯೋನಾರ್ಡ ಡ. ವಿಂಚಿ ಅಪ್ರತಿಮ ಕಲಾವಿದ, ಬಹುಮಖ ಪ್ರತಿಭೆಯನ್ನು ಪಡೆದ ಒಬ್ಬ ಕಲಾ ಸಂತರು ಎಂದರು.

ಸರ್ಕಾರ ಕಲಾ ವಿದ್ಯಾರ್ಥಿಗಳ ನೇಮಕಾತಿ ಮಾಡುವ ಮುಖಾಂತರ ಕಲಾಕ್ಷೇತ್ರ ಬೆಳೆಸಬೇಕು. ಪ್ರಾಥಮಿಕ ಶಿಕ್ಷಣದಿಂದ ಪದವಿಪೂರ್ವ ಶಿಕ್ಷಣದ ವರೆಗೂ ಕಲಾ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಾಚಾರ್ಯ ಪ್ರೇಮಾ ಹಂದಿಗೋಳ ಮಾತನಾಡಿ, ಲಿಯೋನಾರ್ಡ ಡ. ವಿಂಚಿ ರಚಿಸಿದ ಮೊನಾಲಿಸಾ ಕಲಾಕೃತಿ ಈ ಜಗತ್ತಿಗೆ ನೀಡಿದ ಮಹಾನ್ ಕೊಡುಗೆ, ಈ ಕಲಾಕೃತಿಯ ಆಕರ್ಷಣೆ ಎಂದರೆ ಮುಗುಳುನಗೆ, ಒಬ್ಬ ವಾಸ್ತುಶಿಲ್ಪಿಯಾಗಿ, ಸಂಗೀತ ಕಲಾವಿದನಾಗಿ ಹಲವಾರು ಕಲೆಗಳನ್ನು ಸಿದ್ಧಿಸಿದ ಮಹಾ ಕಲಾಚೇತನ ಅವರು, ಕಲಾವಿದರಾದ ನಾವೆಲ್ಲ ಅವರ ಆದರ್ಶ ಬದುಕನ್ನು ಅನುಕರಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕಲಾವಿದರಿಗೆ ಅವಕಾಶ ನೀಡಲು ಕಸಾಪ ಇಂತಹ ವಿಭಿನ್ನ ಕಾರ್ಯಕ್ರಮ ರೂಪಿಸುತ್ತ ಬಂದಿದೆ. ಕೇವಲ ಉಪನ್ಯಾಸಕ್ಕೆ ಮಾತ್ರ ಪ್ರಾಮುಖ್ಯತೆ ನೀಡದೆ, ಕಲಾವಿದರು ತಮ್ಮ ಕಲೆಯಿಂದ ವೇದಿಕೆ ಪ್ರದರ್ಶನ ನೀಡಲು ಅವಕಾಶ ನೀಡುವ ಈ ವಿಭಿನ್ನ ಗಾನ ಕುಂಚ ಕಾರ್ಯಕ್ರಮ ಎಲ್ಲರ ಮನ ಸೆಳೆಯಿತು ಎಂದು ಹೇಳಿದರು.

ಈ ವೇಳೆ ಕಲಾವಿದರಾದ ಪ್ರೊ. ಬಿ.ಸಿ. ಕುತ್ನಿ, ಪ್ರೊ. ಎಸ್.ವಿ. ಗುಂಜಾಳ, ಪಿ.ಬಿ. ಬಂಡಿ, ಮಹೇಶ ಸಂದಿಗೌಡರ, ಶರಣಪ್ಪ ಬಿ.ಎಚ್. ಅವರನ್ನು ಸನ್ಮಾನಿಸಲಾಯಿತು.

ಗಾನ ಕುಂಚದಲ್ಲಿ ಪ್ರೊ. ಬಿ.ಸಿ. ಕುತ್ನಿ, ಬಸವರಾಜ ನೆಲಜೇರಿ, ಶ್ರೀಕಾಂತ ವಿ. ಪಾಟೀಲ, ಸಲಿಂ ತೆಗ್ಗಿನಮನಿ, ಸಂತೋಷ ಕ್ಯಾದಿಗೇರಿ ಅವರು ಮನಮೋಹಕ ಚಿತ್ರ ರಚಿಸಿ ಜನಮನ ಸೆಳೆದರು.

ಬಿ.ಕೆ. ನಿಂಬನಗೌಡರ, ಆರ್.ಎಸ್. ಬಾಪುರೆ, ಚನ್ನಪ್ಪಗೌಡರ, ಡಿ.ಎಸ್. ತಳವಾರ, ಕಪಲಿ, ನಯನಾ ಕುತ್ನಿ, ನಿರ್ಮಲಾ ತರವಾಡೆ, ಕಸ್ತೂರಿ ಕಡಗದ, ಸಂದಿಗೌಡರ, ರತ್ನಕ್ಕ ಪಾಟೀಲ ಇದ್ದರು.

ಡಾ. ಬಿ.ಎಲ್. ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ನೆಲಜೇರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Share this article