ವಾರದೊಳಗೆ ಬಗರ್ ಹುಕುಂ ಸಮಿತಿ ರಚಿಸದಿದ್ದರೆ ಬೀದಿಗಿಳಿದು ಹೋರಾಟ: ಕಾಂತರಾಜ್

KannadaprabhaNewsNetwork | Published : Sep 21, 2024 1:50 AM

ಸಾರಾಂಶ

ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಾತ್ರ ಮಾಡಿಲ್ಲ. ಇದರಿಂದಾಗಿ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ನೋಟಿಸ್ ಜೊತೆಗೆ ಜೆಸಿಬಿಯನ್ನು ತರುತ್ತಿದ್ದಾರೆ ಎಂದು ಆಕ್ರೋಶ ಕಾಂತರಾಜ್ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇನ್ನೊಂದು ವಾರದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬಗರ್ ಹುಕುಂ ಸಮಿತಿ ರಚನೆ ಮಾಡದಿದ್ದರೆ, ಬೀದಿಗಿಳಿದು ಹೋರಾಟ ನಡೆಸುವುದರ ಜೊತೆಗೆ ಕಾನೂನು ಮೊರೆ ಹೋಗಲಾಗುವುದು ಎಂದು ಶಿವಮೊಗ್ಗ ಗ್ರಾಮಾಂತರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಕಾಂತರಾಜ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಬಗರ್ ಹುಕುಂ ಸಮಿತಿ ರಚನೆ ಮಾಡಲಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಾತ್ರ ಮಾಡಿಲ್ಲ. ಇದರಿಂದಾಗಿ ಅರಣ್ಯ ಇಲಾಖೆಯವರು ರೈತರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದಾರೆ. ನೋಟಿಸ್ ಜೊತೆಗೆ ಜೆಸಿಬಿಯನ್ನು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂ ಕಬಳಿಕೆ ನ್ಯಾಯಾಲಯವನ್ನು ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸುವುದಾಗಿ ಹೇಳಲಾಗಿತ್ತು. ಆದರೆ ಇದುವರೆಗೂ ಆ ಕೆಲಸ ಮಾಡಿಲ್ಲ. ಪ್ರಸ್ತುತ ಬೆಂಗಳೂರಿನಲ್ಲಿರುವ ಭೂ ಕಬಳಕೆ ನ್ಯಾಯಾಲಯದಲ್ಲಿ ಕೇಸು ದಾಖಲಿಸುತ್ತಿರುವುರಿಂದ ರೈತರು ಅನಗತ್ಯವಾಗಿ ನ್ಯಾಯಾಲಯಕ್ಕೆ ಓಡಾಡುವಂತಾಗಿದೆ ಎಂದು ಹೇಳಿದರು.

ಗ್ರಾಮಾಂತರ ಕ್ಷೇತ್ರಕ್ಕೆ ಕಳೆದ ಒಂದೂವರೆ ವರ್ಷದಿಂದ ಒಂದೇ ಒಂದು ಸರ್ಕಾರಿ ಮನೆಯನ್ನು ಮಂಜೂರು ಮಾಡಿಲ್ಲ. ಮನೆ ಕಟ್ಟಿಕೊಳ್ಳುವ ಕನಸು ಕಾಣುತ್ತಿರುವ ಫಲಾನುಭವಿಗಳಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರು ಜನರ ಕಣ್ತಪ್ಪಿಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಇನ್ನು, ಕಾಗೋಡು ತಿಮ್ಮಪ್ಪ ನವರು ಸಚಿವರಾಗಿದ್ದಾಗ ಜಾರಿಗೊಳಿಸಲಾಗಿದ್ದ 94 ಸಿ ಹಾಗೂ 94 ಡಿ ಕಾನೂನು ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ಹೀಗಾಗಿ ಅರ್ಜಿ ವಿಲೇವಾರಿ ಕೂಡ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಭದ್ರಾವತಿ ತಹಶೀಲ್ದಾರ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನಪರವಾದ ಕೆಲಸ ಮಾಡುವಂತೆ ಮನವಿ ಮಾಡಿದರೆ ಆರೋಗ್ಯ ಸರಿ ಇಲ್ಲ ಎಂಬ ನೆಪ ಹೇಳುತ್ತಿದ್ದಾರೆ. ಇವರನ್ನು ಬದಲಾಯಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಕೂಡ ಪ್ರಯೋಜನವಾಗಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷ ಸತೀಶ್ ಕಸಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ, ಕುಮಾರ ನಾಯ್ಕ, ಪರಶುರಾಮ, ಇನಾಯತ್‌ ಉಲ್ಲಾ, ಹೊಳಲೂರು ಯೋಗೇಶ್, ಭೋಜ್ಯಾನಾಯ್ಕ್ ಮತ್ತಿತರರು ಇದ್ದರು.

Share this article