ದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮರು ತುರ್ತುಪರಿಸ್ಥಿತಿ ಹೇರುವ ಸ್ಥಿತಿ ಬರಲಿದೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವ ವರೆಗೂ ಮತ್ತೆ ತುರ್ತು ಪರಿಸ್ಥಿತಿಯಂತಹ ಕರಾಳ ಸ್ಥಿತಿ ಬರಲು ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರುದೇಶದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮರು ತುರ್ತುಪರಿಸ್ಥಿತಿ ಹೇರುವ ಸ್ಥಿತಿ ಬರಲಿದೆ. ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವ ವರೆಗೂ ಮತ್ತೆ ತುರ್ತು ಪರಿಸ್ಥಿತಿಯಂತಹ ಕರಾಳ ಸ್ಥಿತಿ ಬರಲು ಬಿಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಹೇಳಿದ್ದಾರೆ.
ಮಂಗಳೂರಿನ ಕದ್ರಿಯ ಗೋರಕ್ಷನಾಥ ಮಂದಿರದಲ್ಲಿ ಬುಧವಾರ ದ.ಕ. ಜಿಲ್ಲಾ ಬಿಜೆಪಿ ಏರ್ಪಡಿಸಿದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್, ಕರಾಳ ಇತಿಹಾಸಕ್ಕೆ 50 ವರ್ಷ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗುಲಾಮಗಿರಿ ಎನ್ನುವುದು ಗುಲಾಮಗಿರಿಯೇ ವಿನಃ ಅದು ಸಭ್ಯತೆ ಆಗಲು ಸಾಧ್ಯವಿಲ್ಲ. ಗುಲಾಗಿರಿ ಎನ್ನುವುದು ಮೊಘಲರ, ಬ್ರಿಟಿಷರ ಅಥವಾ ಕಾಂಗ್ರೆಸಿಗರದ್ದಾದರೂ ಅದು ಗುಲಾಮಗಿರಿಯೇ. ಸ್ವರಾಜ್ಯ, ಸ್ವ ಆಡಳಿತ ನಮ್ಮ ಸ್ವಾತಂತ್ರ್ಯದ ಉದ್ದೇಶವಾಗಿತ್ತು. ಆದರೆ ಕಾಂಗ್ರೆಸ್ ಆಡಳಿತದಲ್ಲಿ ದೇಶವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಲಾಯಿತು. ದೇಶದ ಅತ್ಯಂತ ಪ್ರಮಾಣಿಕ ಪ್ರಧಾನಿ ಲಾಲ್‌ಬಹದ್ದೂರು ಶಾಸ್ತ್ರಿ ಹೆಸರು ಮುನ್ನೆಲೆಗೆ ಬರಲು ಕಾಂಗ್ರೆಸ್ ಗುಲಾಮಿ ನಾಯಕತ್ವ ಬಿಡಲೇ ಇಲ್ಲ. ವಿದೇಶದಲ್ಲಿ ದೇಶದ ಪ್ರಧಾನಿಗೆ ವಿಷ ನೀಡಿ ಹತ್ಯೆ ಮಾಡಲಾಯಿತು. ಆದರೆ ಅದರ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸಲೂ ಇಲ್ಲ, ಸತ್ಯ ಹೊರಬರಲು ಬಿಡಲೂ ಇಲ್ಲ ಎಂದರು.
ಈ ಘಟನೆ ನಡೆದ ಬೆನ್ನಲ್ಲೇ ಇಂದಿರಾಗಾಂಧಿ ಪ್ರಧಾನಿ ಪಟ್ಟಕ್ಕೆ ಬಂದರೂ, ಆ ಬಳಿಕ ಆರಂಭವಾಗಿದ್ದೇ ಸರ್ವಾಧಿಕಾರ. ದೇಶದಲ್ಲಿ ತುರ್ತುಸ್ಥಿತಿ ಹೇರಿ ದೇಶದಾದ್ಯಂತ ದೌರ್ಜನ್ಯ ನಡೆಸಿದ್ದಾರೆ. ಇಡೀ ದೇಶವನ್ನೇ ಬಂದಿಖಾನೆಯಾಗಿಸಿದ್ದು ಸರ್ವಾಧಿಕಾರಿ ಇಂದಿರಾಗಾಂಧಿ. ಕಾಂಗ್ರೆಸ್‌ನ ಗಾಂಧಿ ಕುಟುಂಬದ ಎಲ್ಲ ನಾಯಕರು ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ. ನೆಹರೂ, ಇಂದಿರಾ ಗಾಂಧಿ, ರಾಜೀವಗಾಂಧಿ ಸೇರಿದಂತೆ ಇಂದಿನ ಪ್ರಸ್ತುತ ಕಾಂಗ್ರೆಸ್ ವಯಸ್ಕ ಯುವ ನಾಯಕರೂ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ಅವರು ಹೇಳಿದರು.
ಸರ್ವಾಧಿಕಾರಿ ಮಾನಸಿಕತೆ:
ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಾಸ್ತಾವಿಕದಲ್ಲಿ, ತುರ್ತು ಪರಿಸ್ಥಿತಿ, ಸರ್ವಾಧಿಕಾರದ ಮಾನಸಿಕತೆ ದೂರವಾಗಿಲ್ಲ ಎನ್ನುವುದಕ್ಕೆ ಸಿದ್ದರಾಮಯ್ಯ ಆಡಳಿತವೇ ಉದಾಹರಣೆ. ಕರಾವಳಿಯಲ್ಲಿ ಪೊಲೀಸರು ರಾತ್ರಿ ಹಿರಿಯ ಮನೆಗೆ ತೆರಳಿ ತುರ್ತು ಪರಿಸ್ಥಿತಿಯಲ್ಲಿದ್ದಂತೆ ವರ್ತಿಸಿರುವುದು ಸರಿಯಲ್ಲ. ಇದು ಕಾಂಗ್ರೆಸ್‌ನಲ್ಲಿ ತುರ್ತು ಪರಿಸ್ಥಿತಿಯ ಡಿಎನ್‌ಎ ಇರುವುದನ್ನು ತೋರಿಸುತ್ತದೆ. ರಾಷ್ಟ್ರ ವಿರೋಧಿ ಮಾನಸಿಕತೆಯೂ ಇದಾಗಿದ್ದು, ಪ್ರಜಾಪ್ರಭುತ್ವದ ಆಧಾರದಲ್ಲಿ ಭಾರತದ ಅಖಂಡತೆಯನ್ನು ಭದ್ರಪಡಿಸಬೇಕಾಗಿದೆ ಎಂದರು.
ಈ ಸಂದರ್ಭ ತುರ್ತು ಪರಿಸ್ಥಿತಿಯಲ್ಲಿ ಹೋರಾಟ ನಡೆಸಿದ ಹಿರಿಯರನ್ನು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗ್ರವಾಲ್ ಶಾಲು ಹೊದಿಸಿ ಗೌರವಿಸಿದರು.
ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು.
ಇದಕ್ಕೂ ಮುನ್ನ ರಾಧಾಮೋಹನ ದಾಸ್ ಅಗರ್ವಾಲ್ ಅವರು ಕದ್ರಿ ಪಾರ್ಕ್‌ನಲ್ಲಿ ಸಸಿ ನೆಡುವ ಮೂಲಕ ವೃಕ್ಷಾಂದೋಲನಕ್ಕೆ ಚಾಲನೆ ನೀಡಿದರು.
ಕಾಂಗ್ರೆಸ್ ಡಿಎನ್‌ಎಯಲ್ಲಿ ಸರ್ವಾಧಿಕಾರ: ಸಿ.ಟಿ.ರವಿವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸಮಾರೋಪ ಭಾಷಣ ಮಾಡಿ, ತುರ್ತು ಪರಿಸ್ಥಿತಿ ಹೇರಿ 50 ವರ್ಷಗಳಾಗಿವೆ. ಕಾಂಗ್ರೆಸ್ ದೇಶದ ಒಂದೆರಡು ರಾಜ್ಯಗಳಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಆದರೂ ಕಾಂಗ್ರೆಸ್‌ನ ಸರ್ವಾಧಿಕಾರದ ಮನಸ್ಥಿತಿ ಇಂದಿಗೂ ಬದಲಾಗಿಲ್ಲ. ತುರ್ತುಪರಿಸ್ಥಿತಿಯ ಕರಾಳ ಇತಿಹಾಸದಿಂದ ಕಾಂಗ್ರೆಸ್ ಪಾಠ ಕಲಿತಿಲ್ಲ. ಕಾಂಗ್ರೆಸ್‌ನ ಡಿಎನ್‌ಎಯಲ್ಲಿ ಈಗಲೂ ಸರ್ವಾಧಿಕಾರ ಇದ್ದು, ಅದರಲ್ಲಿ ಪ್ರಜಾಪ್ರಭುತದ ಡಿಎನ್‌ಎ ಉಳಿದಿಲ್ಲ. ಕಾಂಗ್ರೆಸ್ ಆಡಳಿತದಲ್ಲಿದ್ದರೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತದೆ. ಇದಕ್ಕಾಗಿ ತುರ್ತು ಪರಿಸ್ಥಿತಿಯ ಕರಾಳತೆಯನ್ನು ಯಾರೂ ಮರೆಯಬಾರದು. ಕಾಂಗ್ರೆಸ್‌ನಿಂದ ಜನರು ಕೂಡ ದೂರ ಇರಬೇಕು. ನಿರಂತರವಾಗಿ ಜಾಗರೂಕರಾಗಿದ್ದರೆ ಮಾತ್ರ ಸ್ವಾತಂತ್ರ್ಯ, ಸಂವಿಧಾನ ಉಳಿಸಿಕೊಳ್ಳಬಹುದು ಎಂದರು.ಬಾಲ ಅಲ್ಲಾಡಿಸುತ್ತಿದ್ದವರು: ಬಿಜೆಪಿಯ ಒಂದು ನಾಯಿಯೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಕಾಂಗ್ರೆಸ್‌ನ ಖರ್ಗೆ ಹೇಳುತ್ತಾರೆ. ಆಗ ಬಿಜೆಪಿ ಹುಟ್ಟಿರಲಿಲ್ಲ. ಇಂದಿರಾಗಾಂಧಿ ಸ್ವಾತಂತ್ರ್ಯಹರಣ ಮಾಡುವಾಗ, ಸಂವಿಧಾನ ಕೋಮಾದಲ್ಲಿ ಸೇರಿಸುವಾಗ ಖರ್ಗೆ ಏನು ಮಾಡುತ್ತಿದ್ದರು? ಇಂದಿರಾಗಾಂಧಿಯನ್ನು ಹೊಗಳುವ ಪಟಲಾಂನ ಬಾಲ ಅಲ್ಲಾಡಿಸುವ ರೀತಿಯಲ್ಲಿ ಅವರಿದ್ದರು. ನಾವು ದೇಶಕ್ಕೆ ನಿಯತ್ತಿರುವ ನಾಯಿಗಳು. ಆದರೆ ಕಾಂಗ್ರೆಸಿಗರ ನಿಯತ್ತು ದೇಶ, ಸಂವಿಧಾನ, ಪ್ರಜಾಪ್ರಭುತ್ವಕ್ಕಲ್ಲ. ಇಂದಿರಾಗಾಂಧಿಗೆ ಬಾಲ ಅಲ್ಲಾಡಿಸುವವರಾಗಿದ್ದರು. ಇಂತವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಸಂವಿಧಾನದ ಪ್ರತಿ ಹಿಡಿಯುವ ನೈತಿಕತೆ ಇಲ್ಲ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.