ಕಾಂಗ್ರೆಸಿದ್ದು ಕುಟುಂಬ ರಾಜಕಾರಣವಾದ್ರೆ, ಬಿಜೆಪಿ ಜೆಡಿಎಸ್‌ನದ್ದು ಏನು: ಕೆ.ಜೆ ಜಾರ್ಜ್ ಪ್ರಶ್ನೆ

KannadaprabhaNewsNetwork | Updated : Apr 20 2024, 01:03 AM IST

ಸಾರಾಂಶ

ಯಡಿಯೂರಪ್ಪ ದೇವೇಗೌಡರದ್ದು ಏನು ರಾಜಕಾರಣ ಎಂದು ರಾಜ್ಯ ಇಂಧನ ಸಚಿವ ಕೆ.ಜೆ. ಜಾರ್ಜ್‌ ಪ್ರಶ್ನಿಸಿದರು. ಶುಕ್ರವಾರ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮೋದಿ ಅವರು ಯಡಿಯೂರಪ್ಪ, ದೇವೇಗೌಡರನ್ನು ಪಕ್ಕದಲ್ಲಿ ಕೂರಿಸಿಕೊಂಡು ಕಾಂಗ್ರೆಸ್ ನದ್ದು ಕುಟುಂಬ ರಾಜಕಾರಣ ಅಂತ ಹೇಳುತ್ತಾರೆ. ಹಾಗಿದ್ದರೆ ಯಡಿಯೂರಪ್ಪ ದೇವೇಗೌಡರದ್ದು ಏನು ರಾಜಕಾರಣ ಎಂದು ರಾಜ್ಯ ಇಂಧನ ಸಚಿವ, ಉಡುಪಿ ಚಿಕಮಗಳೂರು ಲೋಕಸಭಾ ಉಸ್ತುವಾರಿ ಕೆ ಜೆ ಜಾರ್ಜ್ ಖಾರವಾಗಿ ಪ್ರಶ್ನಿಸಿದ್ದಾರೆ.

ಅವರು ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

60 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಏನು ಮಾಡಿಲ್ಲ, ಎಲ್ಲ ನಾವೇ ಮಾಡಿದ್ದು ಅಂತಾರೆ ಬಿಜೆಪಿಯವರು. ಆದರೆ ಮೊದಲ ಅಣು ಬಾಂಬ್ ಪರೀಕ್ಷೆ ಮಾಡಿದ್ದೆ ಕಾಂಗ್ರೆಸ್, ಸೂಪರ್ ಕಂಪ್ಯೂಟರ್ ನಿರ್ಮಾಣ ಆದದ್ದೇ ಕಾಂಗ್ರೆಸ್ ಅವಧಿಯಲ್ಲಿ, ಹಸಿರು ಕ್ರಾಂತಿ ಮಾಡಿದ್ದು, ಬ್ಯಾಂಕ್ ರಾಷ್ಟ್ರೀಕರಣ ಮಾಡಿದ್ದು ಇಂದಿರಾ ಗಾಂಧಿ, ತಂತ್ರಜ್ಞಾನ ಕ್ರಾಂತಿ ಮಾಡಿದ್ದು ರಾಜೀವ್ ಗಾಂಧಿ, ಉದಾರೀಕರಣದ ಮೂಲಕ ದೇಶದಲ್ಲಿ ಔದ್ಯಮಿಕ ಕ್ರಾಂತಿಗೆ ಕಾರಣರಾದದ್ದು ಕಾಂಗ್ರೆಸ್ ಸರ್ಕಾರ, ಆಹಾರದ ಹಕ್ಕು, ಶಿಕ್ಷಣದ ಹಕ್ಕು, ಮಾಹಿತಿ ಹಕ್ಕುಗಳು ಕಾಂಗ್ರೆಸ್ ಕೊಡುಗೆಗಳಾಗಿವೆ. ಆದರೆ ಬಿಜೆಪಿ ಏನು ಮಾಡಿದೆ ಎಂಬುದನ್ನು ಹೇಳಲಿ ಎಂದು ಜಾರ್ಜ್ ಆಗ್ರಹಿಸಿದರು.

ಉಡುಪಿ ಚಿಕ್ಕಮಗಳೂರಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಚಿಕಮಗಳೂರಿನ ಒಂದೇ ಒಂದು ಕೆಡಿಪಿ ಮೀಟಿಂಗ್ ಗೆ ಬಂದಿಲ್ಲ, ಎಲ್ಲ ಸರ್ಕಾರಿ ಕಾರ್ಯಕ್ರಮಗಳಿಗೆ ಅವರಿಗೆ ಅಹ್ವಾನ ನೀಡಿದರೂ ಬಂದಿಲ್ಲ.

ಶೋಭಾ ಕರಂದ್ಲಾಜೆ ಅವರು ಟೂರಿಂಗ್ ಟಾಕೀಸ್ ಇದ್ದ ಹಾಗೆ, ಟೂರಿಂಗ್ ಟಾಕೀಸ್ ನವರು ಒಂದು ಊರಿನಲ್ಲಿ ಸಿನೆಮಾ ತೋರಿಸಿ, ಇನ್ನೂ ಜನ ಬರುದಿಲ್ಲ ಅಂತ ಆದಮೇಲೆ ಇನ್ನೊಂದು ಊರಿಗೆ ಹೋಗ್ತಾರೆ, ಶೋಭಾ ಕೂಡ ಇನ್ನೂ ಇಲ್ಲಿ ವೋಟ್ ಸಿಗುವುದಿಲ್ಲ ಅಂತ ಇನ್ನೊಂದು ಜಿಲ್ಲೆಗೆ ಹೋಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ ವಿಪಕ್ಷ ನಾಯಕ ಆಗಿ ಇತ್ತೀಚೆಗೆ ಆಯ್ಕೆಯಾಗಿದ್ದರು, ಈಗ ಅವರನ್ನು ಬದಲಾಯಿಸಿ ಬೇರೆ ಯಾರಿಗೋ ವಿಪಕ್ಷ ನಾಯಕ ಮಾಡಲು ಅವರಿಗೆ ಲೋಕಸಭಾ ಟಿಕೇಟ್ ಕೊಟ್ಟಿದ್ದಾರೆ ಎಂದು ಜಾರ್ಜ್ ಹೇಳಿದರು.

ಕರಾವಳಿಯಲ್ಲಿ ಕಾಂಗ್ರೆಸ್ ಪರ ಅಂಡರ್ ಕರೆಂಟ್ ಇದೆ, 80ರಲ್ಲಿ ಉಡುಪಿಯಲ್ಲಿ ಟಿ ಎಂ ಎ ಪೈ ಅವರ ಎದುರು ಆಸ್ಕರ್ ಫೆರ್ನಾಂಡಿಸ್ ಸ್ಪರ್ಧಿಸಿ ಎಲ್ಲರ ನಿರೀಕ್ಷೆ ಮೀರಿ ಗೆದ್ದಿದ್ದರು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಪಕ್ಷದ ನಾಯಕರಾದ ಸುಧೀರ್ ಕುಮಾರ್ ಮಾರೋಳಿ, ಭಾಸ್ಕರ್ ರಾವ್ ಕಿದಿಯೂರು ಇದ್ದರು.

ಕಾಂಗ್ರೆಸ್ ಕಡಿಮೆ ಸೀಟು ಗೆದ್ರೆ ಸಿದ್ದರಾಮಯ್ಯ ಕುರ್ಚಿಗೆ ಕಂಟಕ ಅಂತ ಸಚಿವ ಭೈರತಿ ಸುರೇಶ್ ಯಾವ ಕಾರಣಕ್ಕೆ ಹೇಳಿದ್ದರೋ ಗೊತ್ತಿಲ್ಲ, ಸಿದ್ದರಾಮಯ್ಯ ಉತ್ತಮ ಕೆಲಸ ಮಾಡ್ತಿದ್ದಾರೆ, ಅವರಿಗೆ ಕಾಂಗ್ರೆಸ್ ನಂ ಎಲ್ಲಾ ಶಾಸಕರ, ಹೈಕಮಾಂಡ್ ಪೂರ್ಣ ಬೆಂಬಲ ಇದೆ ಎಂದು ಪ್ರತಿಕ್ರಿಯಿಸಿದರು.

Share this article