ಗದಗ: ಕಾಂಗ್ರೆಸಿಗರು ಕೇಸರಿ ಧ್ವಜ, ಕೇಸರಿ ಬಣ್ಣ ನೋಡಿದರೆ ಬೆಂಕಿ ನೋಡಿದಂತೆ ಮಾಡುತ್ತಾರೆ. ಕಾಂಗ್ರೆಸಿನವರಿಗೆ ಹಿಂದೂ ಧರ್ಮದ ಧ್ವಜದ ಮೇಲೇಕೆ ಸಿಟ್ಟಿದೆ ಎನ್ನುವುದನ್ನು ಬಹಿರಂಗ ಪಡಿಸಲಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಕೆರಗೋಡ ಗ್ರಾಮದಲ್ಲಿ ಕೇಸರಿ ಧ್ವಜ ತೆರವು ಮಾಡಿರುವುದನ್ನು ಶ್ರೀರಾಮ ಸೇನೆ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕೇಸರಿ ಧ್ವಜ ಯಾವುದೋ ಪಕ್ಷ, ಸಂಘಟನೆಯದ್ದಲ್ಲ. ಸಾವಿರಾರು ವರ್ಷಗಳಿಂದ ಬಂದ ದೇಶದ ಧರ್ಮದ ಧ್ವಜ. ಗ್ರಾಮ ಪಂಚಾಯಿತಿ ಒಮ್ಮತದಿಂದ ಹಾರಿಸಿದ ಧ್ವಜ. ಕೇಸರಿ ತ್ಯಾಗ, ಸಂಸ್ಕೃತಿಯ, ಸಮೃದ್ಧಿಯ ಪ್ರತೀಕ. ಕೇಸರಿ ಧ್ವಜ ಬಿಜೆಪಿ, ಆರ್ಎಸ್ಎಸ್ ಧ್ವಜ ಅಲ್ಲ ಎಂದರು.ಧರ್ಮದ ಧ್ವಜವನ್ನು ಗೌರವಿಸುವುದನ್ನು ಕಾಂಗ್ರೆಸ್ ಕಲಿತುಕೊಳ್ಳಬೇಕು. ದ್ವೇಷ ಸಾಧಿಸಿದಷ್ಟು ಹಿಂದೂ ಸಮಾಜ ಕೆರಳುತ್ತದೆ. ನಿಮ್ಮನ್ನು ವಿರೋಧ ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮೇಲಿಂದ ಮೇಲೆ ಈ ರೀತಿಯ ಘಟನೆಗಳು ನಡೆಯುತ್ತಿವೆ. ಕೇಸರಿ ಧ್ವಜ ತೆಗೆದು ಅಕ್ಷಮ್ಯ ಅಪರಾಧ ಮಾಡಿದ್ದಾರೆ. ಅಲ್ಲದೇ, ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ಯಾಕೆ ಮಾಡಬೇಕು? ಅಲ್ಲೇನು ಕಲ್ಲೆಸೆದಿದ್ದಾರಾ? ಗಲಾಟೆ ಮಾಡಿದ್ದಾರಾ? ಧ್ವಜ ತೆಗೆದಿದ್ದಕ್ಕೆ ಪ್ರತಿಭಟನೆ ಮಾಡಿದ್ದಾರೆ. ಅವರ ಮೇಲೆ ಲಾಠಿ ಚಾರ್ಜ್ ಮಾಡುತ್ತೀರಾ ಎಂದು ಕಾರವಾಗಿ ಪ್ರಶ್ನಿಸಿದರು.
ಔರಂಗಜೇಬನ ಕಟೌಟ್ ಹಾಕಿ ಮೆರವಣಿಗೆ ಮಾಡಿದಾಗ ಕಾನೂನು ನೆನಪಾಗಲಿಲ್ಲವೇ? ಈಗ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡುವುದು ನೋಡಿದರೆ ನೀವು ರಾವಣನ ಮಾನಸಿಕ ಸ್ಥಿತಿಗೆ ಬಂದಿದ್ದೀರಿ ಎಂದು ತಿಳಿಯುತ್ತದೆ. ಅಲ್ಲಿ ರಾಷ್ಟ್ರಧ್ವಜ ಹಾಕಿಸಲು ಯಾರು ಬೇಡ ಅಂತಾರೆ. ಆದರೆ ದ್ವೇಷ ಸಾಧಿಸುವುದು ಸರಿಯಲ್ಲ ಎಂದರು.