ಪ್ರಜಾಪ್ರಭುತ್ವ ಉಳಿದರೆ ಬಹುಸಂಖ್ಯಾತರಿಗೆ ಬದುಕು

KannadaprabhaNewsNetwork |  
Published : Sep 16, 2025, 01:00 AM IST
ಪೊಟೊ: 15ಎಸ್‌ಎಂಜಿಕೆಪಿ01ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜಾಪ್ರಭುತ್ವದಿಂದ ದೊರೆತ ಸ್ವಾತಂತ್ರ್ಯವನ್ನು, ಕಲಿತ ಮೌಲ್ಯಗಳನ್ನು, ಪಡೆದ ಅಧಿಕಾರವನ್ನು ಪ್ರಜಾಪ್ರಭುತ್ವದ ರಕ್ಷಣೆಗಾಗಿಯೇ ಬಳಸಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಶಿವಮೊಗ್ಗ: ಪ್ರಜಾಪ್ರಭುತ್ವದಿಂದ ದೊರೆತ ಸ್ವಾತಂತ್ರ್ಯವನ್ನು, ಕಲಿತ ಮೌಲ್ಯಗಳನ್ನು, ಪಡೆದ ಅಧಿಕಾರವನ್ನು ಪ್ರಜಾಪ್ರಭುತ್ವದ ರಕ್ಷಣೆಗಾಗಿಯೇ ಬಳಸಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಆವರಣದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ. ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ ಸೇರಿದಂತೆ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರವಲ್ಲ, ಅದು ಮಾನವೀಯ ಮೌಲ್ಯಗಳನ್ನು ಒಳಗೊಂಡ ಜೀವನ ಕ್ರಮ. ಜಾತಿ ಆಧಾರಿತ ವ್ಯವಸ್ಥೆ ಇರುವ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಉಳಿದರಷ್ಟೇ ಬಹುಸಂಖ್ಯಾತರಿಗೆ ಬದುಕು ಎಂದರು.

ಭಾರತ ದೇಶಕ್ಕೆ ಭವ್ಯ ಇತಿಹಾಸವಿದೆ. ಪ್ರಜಾಪ್ರಭುತ್ವದ ಭದ್ರಬುನಾದಿಯ ಮೇಲೆ ದೇಶದ ಭವಿಷ್ಯ ನಿಂತಿದೆ. ಪ್ರಜಾಪ್ರಭುತ್ವವು ಎಲ್ಲಾ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಪುಷ್ಠೀಕರಿಸುತ್ತದೆ ಎಂಬ ನಂಬಿಕೆಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಕ್ಕೆ ಮಹತ್ವ ಬಂದಿದೆ. ಈ ಸಂದರ್ಭದಲ್ಲಿ ನಮ್ಮನ್ನಾಳುವ ಸರ್ಕಾರಗಳ ಪಾತ್ರವನ್ನು ಎತ್ತಿ ತೋರಿಸಲು, ನ್ಯಾಯ, ಶಾಂತಿ, ಅಭಿವೃದ್ಧಿ ಮತ್ತು ಮಾನವ ಹಕ್ಕುಗಳನ್ನು ತಲುಪಿಸುವಲ್ಲಿ ಇರುವ ಸದವಕಾಶವಾಗಿರಲಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಹಕ್ಕುಗಳನ್ನು ಬಳಸಿಕೊಳ್ಳುವಂತೆಯೇ ಕರ್ತವ್ಯಗಳನ್ನು ನಿರ್ವಹಿಸಬೇಕು. ಸಮರ್ಥ ಜನನಾಯಕನನ್ನು ಆಯ್ಕೆಗೊಳಿಸುವಲ್ಲಿ ಎಲ್ಲರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಮತ ಚಲಾಯಿಸದವರಿಗೆ ಸರ್ಕಾರದ ಯಾವುದೇ ಸೌಲಭ್ಯವನ್ನು ನೀಡದಿರುವ ಕಾನೂನು ಜಾರಿಗೊಳ್ಳಬೇಕು ಎಂದು ಒತ್ತಾಯಿಸಿದರು.

ಜನರಿಂದ ಜನರಿಗಾಗಿ ಜನರಿಗೋಸ್ಕರವೇ ನಿರ್ಮಾಣಗೊಂಡ ಸಂವಿಧಾನ ವ್ಯವಸ್ಥೆ ಹೊಂದಿರುವ ಭಾರತದ ಬೆಳವಣಿಗೆಯ ವೇಗ ಅಸಾಧಾರಣವಾದುದಾಗಿದೆ ಮಾತ್ರವಲ್ಲ ದೇಶದ ಬೆಳವಣಿಗೆ ಪಾರದರ್ಶಕವಾಗಿದೆ ಎಂದ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿನ ಅದ್ಭುತವಾದ ಬದಲಾವಣೆಗಳಾಗಿವೆ. ತಂತ್ರಜ್ಞಾನ ಕ್ಷೇತ್ರದ ಉನ್ನತಿಗೆ ಭಾರತದ ಕೊಡುಗೆ ಅಪಾರವಾದುದಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ದೇಶದ ಬೆಳವಣಿಗೆಯನ್ನು ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ. ಇದುವೇ ಭಾರತದ ಸುವರ್ಣಕಾಲ. ವಿಶ್ವಗುರುವಾಗುವ ಪುಣ್ಯಕಾಲ ಎಂದವರು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್‌ಬಾನು ಮಾತನಾಡಿ, ಜನಪರ ಮತ್ತು ಜನಸ್ನೇಹಿ ಆಡಳಿತ ನೀಡುವ ಜನಪ್ರತಿನಿಧಿ ಮತ್ತು ಪಕ್ಷಗಳನ್ನು ಮತದಾರರು ಆಯ್ಕೆಗೊಳಿಸಬೇಕು ಎಂದರು.

ಇದೇ ವೇಳೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಹಕ್ಕಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕುರಿತು ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ ಮತ್ತು ಛಾಯಾಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸೈಕಲ್ ರ್‍ಯಾಲಿಯಲ್ಲಿ ಭಾಗವಹಿಸಿದವರಿಗೆ ಅಭಿನಂದಿಸಲಾಯಿತು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಪಂ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಎನ್.ಹೇಮಂತ್‌, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಲ್ಲೇಶಪ್ಪ, ಉಪನ್ಯಾಸಕ ಸುರೇಶ್‌ಲಮಾಣಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾರವಾರದಲ್ಲಿ ನಾಳೆ ರಾಷ್ಟ್ರಪತಿ ಮುರ್ಮು ಸಬ್‌ಮರೀನ್‌ ಯಾನ
ಬಿಜೆಪಿ ರಾಜ್ಯಗಳಲ್ಲಿ ಯಾಕೆ ನೌಕರಿ ಸೃಷ್ಟಿ ಆಗಿಲ್ಲ : ಸಿದ್ದರಾಮಯ್ಯ